ಗಂಗಾವತಿ (ಕೊಪ್ಪಳ): ಗಂಗಾವತಿ ಕ್ಷೇತ್ರ ಆಂಜನೇಯನ ಜನ್ಮಸ್ಥಳ. ಇಂತಹ ಪವಿತ್ರ ಕ್ಷೇತ್ರದ ನಿಮ್ಮ ಮತ ಆಂಜನೇಯನ ಭಕ್ತನಿಗೋ ಅಥವಾ ಟಿಪ್ಪು ಭಕ್ತನಿಗೋ ಎಂಬುದನ್ನು ಈ ಚುನಾವಣೆಯಲ್ಲಿ (Karnataka Election) ನೀವೇ ನಿರ್ಧರಿಸಬೇಕು. ಇದಕ್ಕಾಗಿ ನೀವು ಸಂಕಲ್ಪ ಮಾಡಬೇಕು ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಚ್ಚು ಹಚ್ಚಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಒಡೆಯರ್ ವರ್ಸಸ್ ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ ವರ್ಸಸ್ ಟಿಪ್ಪು, ಕೃಷ್ಣ ದೇವರಾಯ ವರ್ಸಸ್ ಟಿಪ್ಪು ಎಂಬ ವ್ಯಾಖ್ಯಾನಗಳನ್ನು ಬಿಜೆಪಿ ಮಾಡಿದೆ. ಅದಕ್ಕೆ ಈಗ ಹೊಸದಾಗಿ ಸೇರ್ಪಡೆಯಾಗಿರುವುದು ಆಂಜನೇಯ ವರ್ಸಸ್ ಟಿಪ್ಪು!
ಗಂಗಾವತಿ ನಗರದ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಮಂಗಳವಾರ ಸಂಜೆ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಪಾಲ್ಗೊಂಡು ಮಾತನಾಡಿದ ಕಟೀಲ್, ವಿಧಾನಸಭೆಯಲ್ಲಿ ಆಂಜನೇಯನ ಭಕ್ತನಿರಬೇಕಾದರೆ ಟಿಪ್ಪುವಿನ ಭಕ್ತ ಸಿದ್ದರಾಮಣ್ಣ ಎಲ್ಲಿಗೆ ಹೋಗಬೇಕು? ಎಂದು ಕೇಳಿದರು. ತಮ್ಮ ಪ್ರಶ್ನೆಗೆ ತಾವೇ ಉತ್ತರಿಸಿ, ʻʻಎಲ್ಲಿಗೆ ಹೋಗಬೇಕು ಅಂದ್ರೆ ಸಿದ್ರಾಮಣ್ಣ ಅವರನ್ನು ಕಾಡಿಗೆ ಕಳಿಸಬೇಕು. 2023 ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ರಾಮಯ್ಯರನ್ನು ಕಾಡಿಗೆ ಕಳಿಸೋಣʼʼ ಎಂದರು.
ʻʻಐದು ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಈ ಸ್ಪರ್ಧಿಸಲು ಒಂದು ಕ್ಷೇತ್ರ ಸಿಗುತ್ತಿಲ್ಲ. ಅವರಿಗೆ ತಾಕತ್ತು ಇದ್ದರೆ ಮತ್ತೆ ಬಾದಾಮಿಯಲ್ಲಿ ಸ್ಪರ್ಧಿಸಲಿʼʼ ಎಂದು ಸವಾಲು ಹಾಕಿದರು. ʻʻನಮ್ಮ ದೇಶದ ಪ್ರಧಾನಿ ಮೋದಿ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಏಕವಚನದಲ್ಲಿ ಕರೆಯುವ ಸಿದ್ದರಾಮಣ್ಣ.. ನಿನಗೆ ತಾಕತ್ತು ಇದ್ದರೆ ಬಾದಾಮಿಯಲ್ಲಿ ಸ್ಪರ್ಧಿಸುʼʼ ಎಂದು ಆಹ್ವಾನ ನೀಡಿದರು.
ʻʻಸಿದ್ದರಾಮಯ್ಯನನ್ನು ಬಾದಾಮಿಯಲ್ಲಿ ಜನ ಓಡಿಸುತ್ತಿದ್ದಾರೆ. ಕೋಲಾರದಲ್ಲಿ ಮುನಿಯಪ್ಪ ಮುನಿಸಿಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ನಿರಂತರ ಕೋಮು ಗಲಭೆಗೆ ಗಂಗಾವತಿ ನಲುಗಿತ್ತು. ಒಬ್ಬ ಮಾಜಿ ಮುಖ್ಯಮಂತ್ರಿ ಕ್ಷೇತ್ರವಿಲ್ಲದೆ ಪರದಾಡುತ್ತಿದ್ದಾರೆ. ಇದು ಕಾಂಗ್ರೆಸ್ ಸ್ಥಿತಿʼʼ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು.
ಇದನ್ನೂ ಓದಿ : Karnataka Election : ನಾನು ಜೋಕರ್ ಆದ್ರೆ, ಸಿದ್ರಾಮಣ್ಣ ಬ್ರೋಕರ್; ನಳಿನ್ ಕುಮಾರ್ ಕಟೀಲ್ ತಿರುಗೇಟು