ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೇ ಟೋಲ್ ಏಕೆ ಸಂಗ್ರಹಿಸುತ್ತಿದ್ದೀರಿ, ಇದು ಸರಿಯಿಲ್ಲ. 2016ಕ್ಕೆ ಮುಕ್ತಾಯಗೊಳಿಸಬೇಕಿದ್ದರೂ ಇದುವರೆಗೆ ಕಾಮಗಾರಿ (Ankola landslide) ಏಕೆ ಮುಕ್ತಾಯವಾಗಿಲ್ಲ ಎಂದು ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಿಎಂ ಸಿದ್ದರಾಮಯ್ಯ ತರಾಟೆ ತೆಗೆದುಕೊಂಡಿದ್ದಾರೆ.
ಕಾರವಾರದ ಜಿ.ಪಂ. ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲ್ಲಿ ರಸ್ತೆ ಮಾಡಲು ನಮ್ಮ ಜಾಗ ನೀಡಿದ್ದೀವಿ, ನೀರು ನೀಡಿದ್ದೀವಿ. ನೀವು ಹೇಳಿದ ಹಾಗೆ ಕೇಳುವುದಕ್ಕೆ ನಾವಿಲ್ಲ, ರಸ್ತೆ ಕಾಮಗಾರಿ ಆರಂಭಿಸುವ ಮುನ್ನ ಇಲ್ಲಿ ಸಂಭವಿಸಬಹುದಾದ ಗುಡ್ಡ ಕುಸಿತದಂತಹ ಅನಾಹುತಗಳ ಬಗ್ಗೆ ವೈಜ್ಞಾನಿಕ ವರದಿ ಪಡೆದಿದ್ದೀರಾ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತಂತೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆದು, ರಾಜ್ಯ ಸರ್ಕಾರದಿಂದ ಕೇಂದ್ರ ಹೆದ್ದಾರಿ ಸಚಿವರಿಗೆ ತೀಕ್ಷ್ಣ ಪತ್ರ ಬರೆಯುವುದಾಗಿ ಹೇಳಿದರು.
ಪ್ರಸ್ತುತ ಜಿಯಾಜಿಕಲ್ ಸರ್ವೆ ಆಫ್ ಇಂಡಿಯಾ ಸಿದ್ಧಪಡಿಸಿರುವ ಜಿಲ್ಲೆಯ ಗುಡ್ಡ ಕುಸಿತ ಪ್ರದೇಶಗಳ ಕುರಿತ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಪರಿಶೀಲಿಸಿ, ಹೆದ್ದಾರಿಯಾದ್ಯಂತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ವಿದ್ಯುತ್ ಕಂಬಗಳನ್ನು ಮತ್ತು ವಿದ್ಯುತ್ ಸಂಪರ್ಕ ಸಮಸ್ಯೆಯನ್ನು ಹೆಸ್ಕಾಂ ವತಿಯಿಂದ ತಕ್ಷಣ ಸರಿಪಡಿಸಬೇಕು. ಹೆಸ್ಕಾಂ ಅಧಿಕಾರಿಗಳು ಅಲರ್ಟ್ ಆಗಿದ್ದು, ತಕ್ಷಣ ಸ್ಪಂದಿಸಬೇಕು. ವಿದ್ಯುತ್ ಜನರೇಟ್ ಮಾಡುವ ಜಿಲ್ಲೆಯಾಗಿದ್ದು, ವಿಸ್ತೀರ್ಣ ಕೂಡಾ ದೊಡ್ಡದಾಗಿದ್ದು ಇಲ್ಲಿಗೆ ಹೆಚ್ಚಿನ ಸಿಬ್ಬಂದಿ ನೀಡಲಾಗುವುದು.
ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಕೂಡ ಮಳೆಯಾಗುವ ಸಾಧ್ಯತೆಗಳಿದ್ದು, ಈ ರೀತಿಯಾಗಿ ಗುಡ್ಡ ಕುಸಿತ ಸೇರಿದಂತೆ ಯಾವುದೇ ರೀತಿಯ ಅಪಾಯವಾಗದಂತೆ ಜಿಲ್ಲಾಡಳಿತದಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿರುವ ಅಪಾಯಕಾರಿ ಪ್ರದೇಶಗಳಲ್ಲಿನ ಗ್ರಾಮಗಳನ್ನು ಗುರುತಿಸಿ, ಇಲ್ಲಿ ಗ್ರಾಮಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಿಕೊಂಡು ಅಲ್ಲಿನ ಪರಿಸ್ಥಿತಿಯ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಆಗಿರುವ ಹಾನಿಯ ಕುರಿತಂತೆ ಶೀಘ್ರದಲ್ಲಿ ವರದಿ ಸಿದ್ದಪಡಿಸಿ, ಶೀಘ್ರದಲ್ಲಿ ಪರಿಹಾರ ಒಗದಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮಳೆಯಿಂದಾಗಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದವರು ಪುನಃ ತಮ್ಮ ಮನೆಗಳಿಗೆ ತೆರಳುವಾಗ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡುವಂತೆ ಕೋರಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಮನವಿಗೆ, ಆಯ್ತು, ಈ ಬಗ್ಗೆ ನೋಡೋಣ ಎಂದು ಸಿಎಂ ಹೇಳಿದರು.
ಕದ್ರಾ ಅಣೆಕಟ್ಟೆಯಿಂದ ಹೊರಬಿಡುವ ನೀರಿನಿಂದ ತೊಂದರೆಗೊಳಗಾಗುವ ಸಂತ್ರಸ್ತರಿಗೆ ಶಾಶ್ವತ ನೆಲೆ ಕಲ್ಪಿಸುವ ಮೂಲಕ ಪರಿಹಾರ ಒದಗಿಸುವ ಬಗ್ಗೆ ಶಾಸಕ ಸತೀಶ್ ಸೈಲ್ ಅವರು ಕೋರಿದರು. ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳೋಣ ಎಂದು ಸಿಎಂ ಹೇಳಿದರು.
ಜಿಲ್ಲೆಯ ಎಲ್ಲಾ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಜನರಿಗೆ ಅಧಿಕಾರಿಗಳ ಮೇಲೆ ವಿಶ್ವಾಸ ಮೂಡುವಂತೆ ಕೆಲಸ ನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಶಾಸಕರಾದ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ್, ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಅಪರ ಕಾರ್ಯದರ್ಶಿ ಅತೀಕ್, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ , ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ, ಜಿ.ಪಂ. ಸಿಇಒ ಈಶ್ವರ ಕುಮಾರ್ ಕಾಂದು, ಎಸ್ಪಿ ನಾರಾಯಣ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ | Karnataka Rain : ಭರ್ತಿಯತ್ತ ಜಲಾಶಯಗಳು; ಪ್ರವಾಹ ಭೀತಿ ಹಿನ್ನೆಲೆ ನದಿ ತೀರದಲ್ಲಿ ಹೈ ಅಲರ್ಟ್
NDRF-SDRF ತಂಡಗಳ ಕಾರ್ಯಕ್ಕೆ ಮೆಚ್ಚುಗೆ
ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತ ಸ್ಥಳದಲ್ಲಿ (Karnataka Rain) ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸುತ್ತಿರುವ NDRF, SDRF ತಂಡಗಳ ಸಿಬ್ಬಂದಿಯ ಕಾರ್ಯಕ್ಷಮತೆಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಚ್ಚಿ ಹೋಗಿರುವ ರಸ್ತೆಯ ಎಡಭಾಗದಲ್ಲಿ ಕುಸಿತದ ಗುಡ್ಡ-ಬಲ ಭಾಗದಲ್ಲಿ ಭೋರ್ಗರೆದು ಹರಿಯುತ್ತಿರುವ ಕಾಳಿ ನದಿ ಇದೆ. ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಮಣ್ಣಿನಡಿ ಸಿಲುಕಿರುವ ಜೀವಗಳ ಪತ್ತೆ ಕಾರ್ಯ ಬಹಳ ಸವಾಲಿನದ್ದಾಗಿದೆ ಎಂದು ಮುಖ್ಯಮಂತ್ರಿಗಳು ಸಿಬ್ಬಂದಿಯ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.
ನಾಲ್ಕು ತಂಡಗಳು ಗುಡ್ಡ ಕುಸಿತದ ಕೆಳಗೆ ಸಿಲುಕಿರಬಹುದಾದವರ ಪತ್ತೆಗೆ ರಾಡಾರ್ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ನಾಲ್ಕು ತಂಡಗಳು ಮತ್ತೊಂದು ಬದಿಯ ನದಿಯೊಳಗೆ ಕಾರ್ಯಾಚರಣೆ ನಡೆಸುತ್ತಿವೆ. ಈ ಬಗ್ಗೆ ಹಲವು ದಿನಗಳಿಂದ ತಾಲ್ಲೂಕಿನಲ್ಲೇ ಮೊಕ್ಕಾಂ ಹೂಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡರು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಗುಡ್ಡ ಕುಸಿತದ ಸ್ಥಳ ಒಂದು ರೀತಿ ದ್ವೀಪದಂತಾಗಿದೆ. ಸುತ್ತಲೂ ಕಾಳಿ ನದಿ ಭೋರ್ಗರೆದು ಹರಿಯುತ್ತಿದೆ. ನಡುವೆ ಅರ್ಧ ಕುಸಿದ ಗುಡ್ಡ ನಿಂತಿದೆ. ಹೀಗಾಗಿ ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನ ಬಳಸಲು, ಉನ್ನತ ಮೆಟಲ್ ಡಿಟೆಕ್ಟರ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆ ಮಾಡಬೇಕು ಎಂದ ಸಿಎಂ, ಕಾರ್ಯಾಚರಣೆ ವೇಳೆ ಎದುರಾಗಬಹುದಾದ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಉನ್ನತ ಮಟ್ಟದ ತಜ್ಞರಿಂದ ಮಾಹಿತಿ ಪಡೆದು ತಂತ್ರಜ್ಞಾನದ ನೆರವು ಪಡೆಯುವಂತೆ ಸೂಚಿಸಿದರು.
ಜೀವ, ಬೆಳೆ ಹಾನಿಯ ವರದಿ ಕೂಡಲೇ ಸಲ್ಲಿಸುವಂತೆ ಸಿಎಂ ಸೂಚನೆ
ಮಳೆ ಅನಾಹುತರಿಂದ ಉಂಟಾದ ಜೀವ ಹಾನಿ, ಕೃಷಿ ಮತ್ತು ತೋಟಗಾರಿಕೆ ನಷ್ಟಕ್ಕೆ (Karnataka Rain) ಎನ್‌ಡಿಆರ್‌ಎಫ್ ಪ್ರಕಾರ ಪರಿಹಾರ ಒಗದಿಸುವ ಕುರಿತಂತೆ ತಕ್ಷಣ ಹಾನಿಯ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ (Karnataka Rain) ಸೂಚನೆ ನೀಡಿದರು.
ಶಿರೂರು ಗುಡ್ಡ ಕುಸಿತದ ಸ್ಥಳ ಪರಿಶೀಲನೆ ಬಳಿಕ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆಗಳನ್ನು ನೀಡಿದರು.
ಕದ್ರಾ ಅಣೆಕಟ್ಟೆಯಿಂದ ಹೊರಬಿಡುವ ನೀರಿನಿಂದ ತೊಂದರೆಗೊಳಗಾಗುವ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು. ಮಳೆ ಅನಾಹುತ ಮತ್ತು ಪ್ರವಾಹದಿಂದ ಆದ ಜೀವಹಾನಿಗೆ ನೀಡಲಾಗಿರುವ ಪರಿಹಾರದ ಕುರಿತು ಮಾಹಿತಿ ಪಡೆದ ಸಿಎಂ ಉಳಿದವರಿಗೆ ತುರ್ತಾಗಿ ಕೊಡಬೇಕು. ಕೋಸ್ಟಲ್ ಲೈನ್‌ನಲ್ಲಿ ವಿದ್ಯುತ್ ಕಂಬಗಳ ಅಳವಡಿಕೆ, ಅಗತ್ಯ ಇರುವ ಕಡೆ ವೈರ್‌ಗಳ ದುರಸ್ತಿ ಮತ್ತು ಬದಲಾವಣೆಗೆ ಸೂಚಿಸಿದರು.
ಇದನ್ನೂ ಓದಿ | Karnataka Weather : ಥಂಡಿ ಮಿಶ್ರಿತ ಗಾಳಿ-ಮಳೆಗೆ ಹೈರಣಾದ ಜನತೆ; ಜು.25ರವರಗೆ ಮಳೆ ಮುಂದುವರಿಕೆ
ಕಂದಾಯ ಸಚಿವ ಕೃಷ್ಣ ಬೈರೇಗೌಡ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ,ಶಾಸಕರಾದ ಸತೀಶ್ ಸೈಲ್, ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅತೀಕ್, ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ, ಜಿ.ಪಂ. ಸಿಇಒ ಈಶ್ವರ ಕುಮಾರ್ ಕಾಂದು, ಎಸ್ಪಿ ನಾರಾಯಣ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.