ಬೆಂಗಳೂರು: ಅನ್ನಭಾಗ್ಯ ಯೋಜನೆ ಜಾರಿಗೆ ಆಹಾರ ಇಲಾಖೆ ಸಜ್ಜಾಗುತ್ತಿದ್ದು, ಬಿಪಿಎಲ್ ಕಾರ್ಡ್‌ಗಳಿಗೆ (BPL card) ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲು ಮುಂದಾಗಿದೆ.
ಇಂದಿನಿಂದಲೇ ಹೊಸ ಅರ್ಜಿ ಸಲ್ಲಿಸಲು ಇಲಾಖೆ ಅವಕಾಶ ನೀಡುವ ಸಾಧ್ಯತೆ ಇದೆ. ಜುಲೈನಿಂದ ಅಕ್ಕಿ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಳೆದ ಮೂರು ತಿಂಗಳಿಂದ ಆಹಾರ ಇಲಾಖೆ ವೆಬ್‌ಸೈಟ್ ಕ್ಲೋಸ್ ಮಾಡಲಾಗಿತ್ತು. ಇದಲ್ಲದೆ ರಾಷ್ಟ್ರೀಯ ಆಹಾರ ಹಕ್ಕು ಕಾಯಿದೆಯ ಪ್ರಕಾರ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ದಾರರ ಸಂಖ್ಯೆ ತನ್ನ ಮಿತಿಯನ್ನು ಸಹ ಮೀರಿದ್ದರಿಂದ ಹೊಸದಾಗಿ ಅರ್ಜಿ ಅಹ್ವಾನಿಸುವವರೆಗೆ ತಾತ್ಕಾಲಿಕವಾಗಿ ಸೇರ್ಪಡೆ ನಿಲ್ಲಿಸಲಾಗಿತ್ತು.
ಇದೀಗ ಸರ್ಕಾರದಿಂದ ಅರ್ಜಿ ಅಹ್ವಾನಿತರಿಗೆ ಒಪ್ಪಿಗೆ ಪಡೆಯಲಾಗಿದ್ದು, ಈ ವಾರದಿಂದಲೇ ಅರ್ಜಿ ಆಹ್ವಾನಿಸಲು ಅವಕಾಶ ನೀಡಲಾಗುತ್ತಿದೆ. ಅರ್ಜಿ ಆಹ್ವಾನಿಸಲು ಆಹಾರ ಇಲಾಖೆಯ ಮಾನದಂಡಗಳು ಕಡ್ಡಾಯವಾಗಲಿದ್ದು, ಮಾನದಂಡಗಳನ್ನ ಅನುಸರಿಸಿಯೇ ಅರ್ಜಿ ಆಹ್ವಾನಿಸಬೇಕಿದೆ.
ಸದ್ಯ ರಾಜ್ಯದಲ್ಲಿ 1.26 ಕೋಟಿಯಷ್ಟು ಬಿಪಿಎಲ್ ಕಾರ್ಡ್‌ದಾರರಿದ್ದು, ಇವರಿಗೆ ಸುಮಾರು 2 ಲಕ್ಷದ 30 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗುವ ಸಾಧ್ಯತೆ ಇದೆ. ಅಕ್ಕಿ ವಿತರಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಆಹಾರ ಇಲಾಖೆ ಮಾಡಿಕೊಳ್ಳುತ್ತಿದೆ. ಇದರ ನಡುವೆ ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಇನ್ನೂ ಪಡಿತರ ಚೀಟಿ ಲಭ್ಯವಾಗಿಲ್ಲ. ಇದರ ನಡುವೆ ಹೊಸದಾಗಿ ಅರ್ಜಿ ಆಹ್ವಾನದ ಅವಶ್ಯಕತೆ ಇದೆಯಾ ಅನ್ನುವ ಟೀಕೆಯೂ ಇದೆ.
ಸದ್ಯ ರಾಜ್ಯದಲ್ಲಿ ಅಂತ್ಯೋದಯ ಕಾರ್ಡ್‌ನಲ್ಲಿ 10,90,360 ಪಡಿತರ ಚೀಟಿಗಳಿದ್ದು, 44,86,389 ಸದಸ್ಯರಿದ್ದಾರೆ. ಬಿಪಿಎಲ್‌ನಲ್ಲಿ ಕೆಂದ್ರ ಸರ್ಕಾರದ ಆದ್ಯತೆ ಮೇರೆಗೆ 1,02,94,246 ಪಡಿತರ ಚೀಟಿಗಳಿವೆ. ರಾಜ್ಯ ಸರ್ಕಾರದ ಆದ್ಯತೆ ಮೇರೆಗೆ 14,39,250ರಷ್ಟು ಬಿಪಿಎಲ್ ಪಡಿತರ ಚೀಟಿಗಳಿವೆ. ಎಪಿಎಲ್‌ನಲ್ಲಿ 24,89,086 ಪಡಿತರ ಚೀಟಿಗಳಿವೆ.
ಇದನ್ನೂ ಓದಿ: Free Electricity: ಹೊರಬಿತ್ತು ಗೃಹ ಜ್ಯೋತಿ ಮಾರ್ಗಸೂಚಿ; ಬಾಡಿಗೆದಾರನಿಗಿಲ್ಲ ಉಚಿತ ವಿದ್ಯುತ್?