ಬೆಂಗಳೂರು: ರಾಜ್ಯದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆ ಅನ್ನ ಭಾಗ್ಯ (Anna Bhagya scheme) ಜುಲೈ ಒಂದರಿಂದಲೇ ಅಧಿಕೃತವಾಗಿ ಜಾರಿಗೆ ಬಂದಿದೆ. ಹಾಗಂತ, ತಕ್ಷಣವೇ ಒಂದನೇ ತಾರೀಖಿಗೇ ಈಗ ನಿಗದಿಯಾಗಿರುವ ಐದು ಕೆಜಿ ಅಕ್ಕಿ ಸಿಗುವುದಿಲ್ಲ. ಜತೆಗೆ ಸಿದ್ದರಾಮಯ್ಯ (Siddaramaiah) ಸರ್ಕಾರ ಹೆಚ್ಚುವರಿ ಅಕ್ಕಿ ಬದಲು ನೀಡಲು ಉದ್ದೇಶಿಸಿರುವ ಹಣವೂ ಜಮೆಯಾಗುವುದಿಲ್ಲ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಪ್ರಕಟಿಸಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಶಕ್ತಿ ಯೋಜನೆಗೆ ಕಳೆದ ಜೂನ್ 11ರಿಂದಲೇ ಚಾಲನೆ ನೀಡಿದೆ. ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್ 18ರಿಂದ ಆರಂಭವಾಗಿದ್ದು, ಜುಲೈ ತಿಂಗಳಿನಿಂದ ಉಚಿತ ವಿದ್ಯುತ್ ದೊರೆಯಲಿದೆ. ಅಂದರೆ, ಜುಲೈ 1ರಿಂದಲೇ ಉಚಿತ ವಿದ್ಯುತ್ ಲೆಕ್ಕಾಚಾರ ಆರಂಭಗೊಂಡಿದೆ.
ಈ ನಡುವೆ, ಜುಲೈ ಒಂದರಿಂದಲೇ ಅನ್ನ ಭಾಗ್ಯ ಅಕ್ಕಿ ಯೋಜನೆಯೂ ಜಾರಿಗೆ ಬರಲಿದೆ ಎಂದು ಸರ್ಕಾರ ಪ್ರಕಟಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಕಟಿಸಿರುವ ಹತ್ತು ಕೆಜಿ ಅಕ್ಕಿಯಲ್ಲಿ ಐದು ಕೆಜಿಯ ವಿತರಣೆ ಯಥಾವತ್ತಾಗಿ ನಡೆಯಲಿದೆ. ಆದರೆ, ಹೆಚ್ಚುವರಿ ಐದು ಕೆಜಿ ಅಕ್ಕಿ ಪೂರೈಕೆಗೆ ಲಭ್ಯತೆ ಇಲ್ಲದಿರುವುದರಿಂದ ಅದರ ಬದಲು ಹಣ ನೀಡಲು ಸರ್ಕಾರ ಮುಂದಾಗಿದೆ. ಈ ಹಣ ಯಾವಾಗ ಬರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಇವತ್ತೇ ಹಣ ಖಾತೆಗೆ ಬೀಳಲ್ಲ ಎಂದ ಸಿದ್ದರಾಮಯ್ಯ
ಅನ್ನ ಭಾಗ್ಯ ಅಕ್ಕಿಯಲ್ಲಿ ಐದು ಕೆಜಿ ಅಕ್ಕಿಯ ಹಣವನ್ನು ನೇರವಾಗಿ ಖಾತೆಗೆ ಹಾಕಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ. ಈ ಹಣ ಜುಲೈ ಒಂದರಂದೇ ಫಲಾನುಭವಿಗಳ ಖಾತೆಗೆ ಬೀಳಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಶುಕ್ರವಾರ ಹೇಳಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಜುಲೈ ಒಂದನೇ ತಾರೀಖಿಗೇ ಹಣ ಖಾತೆಗೆ ಬೀಳುವುದಿಲ್ಲ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ʻʻಜುಲೈ ತಿಂಗಳಿಂದ ಅನ್ನ ಭಾಗ್ಯ ಜಾರಿ ಮಾಡುತ್ತೇವೆ ಎಂದು ಹೇಳಿದ್ದೆವು. ಜುಲೈ ತಿಂಗಳಲ್ಲಿ ಅಕ್ಕಿ ಬದಲು ಹಣ ಕೊಡ್ತೀವಿ ಅಂತ ಹೇಳಿದ್ದೆವು. ಆದರೆ ಜುಲೈ 1ರಂದೇ ಹಣ ಕೊಡ್ತೀವಿ ಅಂತ ಹೇಳಿಲ್ಲ. ಜುಲೈ 10ರಿಂದ ಅಕ್ಕಿ ಬದಲು ಹಣ ಕೊಡೋ ಪ್ರಕ್ರಿಯೆ ಶುರು ಮಾಡುತ್ತೇವೆʼʼ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಫಲಾನುಭವಿಗಳ ಖಾತೆ ವಿವರ ಬಹುತೇಕ ಲಭ್ಯ
ಅನ್ನ ಭಾಗ್ಯ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿ ಸರ್ಕಾರಕ್ಕೆ ಹೆಚ್ಚು ಕಷ್ಟವೇನೂ ಇಲ್ಲ. ಆಹಾರ ಇಲಾಖೆಯಿಂಧ ಕಾರ್ಡ್ ಹೋಲ್ಡರ್‌ಗಳ ಖಾತೆಗೆ 170 ರೂ. ವರ್ಗಾವಣೆ ಮಾಡಲು ಬೇಕಾದ ಬಹುತೇಕ ದಾಖಲೆಗಳು ಬಳಿಯೇ ಇವೆ.
ರಾಜ್ಯದಲ್ಲಿ ಒಟ್ಟು 1 ಕೋಟಿ 28 ಲಕ್ಷ ಕಾರ್ಡ್‌ದಾರರು ಇದ್ದಾರೆ. ಇದರಲ್ಲಿ 4 ಕೋಟಿ 42 ಲಕ್ಷ ಫಲಾನುಭವಿಗಳಿದ್ದಾರೆ. ಈ ಪೈಕಿ 1 ಕೋಟಿ 28 ಲಕ್ಷ ಕಾರ್ಡ್‌ಗಳ ಪೈಕಿ 99.99% ಆಧಾರ್ ಲಿಂಕ್ ಆಗಿದೆ.
ಆಧಾರ್ ಲಿಂಕ್ ಆಗುವುದರಿಂದ ಇ ಗೌರ್ನೆನ್ಸ್ ಮೂಲಕ ಅಕೌಂಟ್ ಮಾಹಿತಿ ಕೂಡ ಸರ್ಕಾರಕ್ಕೆ ಲಭ್ಯ ಆಗಲಿದೆ. ಆದರೆ, ಪ್ರತಿಯೊಬ್ಬ ಫಲಾನುಭವಿಯ ಅಕೌಂಟ್ ಲಿಂಕ್ ಆಗಿದೆಯಾ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ.
ಜುಲೈ 5ರವರೆಗೆ ಪಡಿತರ ವಿತರಣೆ ಮಾಡಲ್ಲ ಎಂದ ವಿತರಕರು
ಈ ನಡುವೆ, ಅನ್ನ ಭಾಗ್ಯದ ಅಕ್ಕಿಗೆ ಬದಲಾಗಿ ಹಣವನ್ನೇ ನೇರವಾಗಿ ಹಾಕುವುದರಿಂದ ತಮಗೆ ಕಮಿಷನ್ ನಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಪಡಿತರ ವಿತರಕರು ಪ್ರತಿಭಟನೆಗೆ ಮುಂದಾಗಿರುವುದರಿಂದ ಈ ತಿಂಗಳ ಐದರವರೆಗೆ ಪಡಿತರ ವಿತರಣೆ ಆಗುವುದು ಸಂಶಯ ಎನ್ನಲಾಗಿದೆ.
ಜುಲೈ ನಾಲ್ಕರಂದು ರಾಜ್ಯದ ಪಡಿತರ ವಿತರಕರ ಸಭೆ ನಡೆಯಲಿದ್ದು, ಅಂದು ಮುಂದಿನ ಪ್ರತಿಭಟನೆಯ ವಿಚಾರ ತೀರ್ಮಾನವಾಗಲಿದೆ.
ರಾಜ್ಯ ಸರ್ಕಾರ ಅಕ್ಕಿಯ ಬದಲು ಹಣ ನೀಡಿದರೆ ನ್ಯಾಯಬೆಲೆ ಅಂಗಡಿ ವಿತರಕರಿಗೆ ಕಮಿಷನ್ ಕಟ್ ಆಗುತ್ತದೆ ಎನ್ನುವುದು ಅವರ ಹೋರಾಟದ ಪ್ರಮುಖಾಂಶ. ಪಡಿತರ ಅಂಗಡಿದಾರರಿಗೆ ಒಂದು ಕ್ವೀಂಟಲ್‌ಗೆ 124 ರೂ ಕಮಿಷನ್ ಸಿಗುತ್ತದೆ.
ಹಣ ನೀಡಿದ್ರೆ ದುರುಪಯೋಗ ಆಗುವ ಸಾಧ್ಯತೆಯಿದೆ. ಹಾಗಾಗಿ ಹಣ ನೀಡುವ ಬದಲು ಸಕ್ಕರೆ, ಅಡುಗೆ ಎಣ್ಣೆ, ಉಪ್ಪು ನೀಡುವಂತೆ ಪಡಿತರ ವಿತರಕರು ಆಗ್ರಹಿಸುತ್ತಿದ್ದಾರೆ.
ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಅವರು, ಅನ್ನಭಾಗ್ಯ ಯೋಜನೆ ವಿಳಂಬವಾದರೂ ಚಿಂತೆಯಿಲ್ಲ. ಹಣ ಕೊಡುವುದು ಬೇಡ ಅಂತ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Gruhalakshmi Scheme: ಎಚ್ಚರ, ಗೃಹಲಕ್ಷ್ಮಿ ಹೆಸರಲ್ಲಿ ಹುಟ್ಟಿಕೊಂಡಿವೆ ನಕಲಿ ಆ್ಯಪ್‌ಗಳು