ಬೆಂಗಳೂರು: ಕೆ.ಆರ್.ಪುರ ಶಾಸಕ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ವಿರುದ್ಧ ಕೆಲವು ದಿನಗಳ ಹಿಂದೆಯಷ್ಟೇ 97 ಕೋಟಿ ರೂಪಾಯಿ ವಂಚನೆ ಆರೋಪ ಮಾಡಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ, ಇದೀಗ (Byrathi Basavaraj) ಅವರ ವಿರುದ್ಧವೇ ಮತ್ತೊಂದು ದೂರು ದಾಖಲಿಸಿದ್ದಾರೆ. ಅಂಗನವಾಡಿ ಕಟ್ಟಡ ನಿರ್ಮಾಣ ಹೆಸರಲ್ಲಿ ಸಚಿವರು ನಕಲಿ ದಾಖಲೆ ಸೃಷ್ಟಿಸಿ 49 ಲಕ್ಷ ರೂಪಾಯಿ ಕಬಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ವಿಜನಾಪುರ ವಾರ್ಡ್‌ನಲ್ಲಿ ಹಳೆಯ ಅಂಗನವಾಡಿ ಕೇಂದ್ರದ ಹಳೆಯ ಕಟ್ಟಡವಿದ್ದು, ಹೊಸ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ಅನುದಾನ ಮಂಜೂರಾಗಿದೆ. ಆದರೆ ಹಳೆ ಕಟ್ಟಡವನ್ನು ಕೆಡವದೆ ಹೊಸ ಕಟ್ಟಡ ನಿರ್ಮಾಣ ಮಾಡಿದ್ದೇವೆಂದು ನಕಲಿ ಟೆಂಡರ್ ನೋಟಿಫೀಕೇಶನ್, ಟೆಕ್ನಿಕಲ್ ಅಪ್ರೂವಲ್, ಬ್ಯಾಂಕ್ ಗ್ಯಾರಂಟಿ ಸೇರಿ ವಿವಿಧ ನಕಲಿ ದಾಖಲೆಗಳನ್ನು ನೀಡಿ 49 ಲಕ್ಷ ರೂ.ಗಳನ್ನು ಲಪಟಾಯಿಸಿದ್ದಾರೆ ಎಂದು ಆಪಾದಿಸಿ ಸಚಿವ ಬೈರತಿ ಬಸವರಾಜ್ ಸೇರಿ 10 ಜನರ ವಿರುದ್ಧ ಟಿ.ಜೆ. ಅಬ್ರಾಹಂ ದೂರು ನೀಡಿದ್ದಾರೆ.
ಇದನ್ನೂ ಓದಿ | Karnataka Congress: ಚುನಾವಣಾ ಆಯೋಗ ತಾರತಮ್ಯ ಮಾಡುತ್ತಿದೆ: ಬಿಜೆಪಿ ನಾಯಕರಿಂದ ಒತ್ತಡ ಎಂದ ಕೃಷ್ಣಭೈರೇಗೌಡ
ಶಾಸಕರು ಹಾಗೂ ಅವರ ಬೆಂಬಲಿಗರಿಂದ ನಡೆದಿರುವ ಈ ಅಕ್ರಮಕ್ಕೆ ಅಧಿಕಾರಿಗಳು ಸಹಕಾರ ನೀಡಿದ್ದು, ಯಾವುದೋ ಕಟ್ಟಡ ನಿರ್ಮಾಣದ ಪೋಟೋಗಳನ್ನು ಅಂಗನವಾಡಿ ಕಟ್ಟಡ ನಿರ್ಮಾಣ ಎಂಬಂತೆ ಬಿಬಿಎಂಪಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿ ಮಂಜೂರಾಗಿದ್ದ ಹಣವನ್ನು ರಿಲೀಸ್ ಮಾಡಿದ್ದಾರೆ. ಆದರೆ ಹೊಸ ಕಟ್ಟಡ ಕಟ್ಟಿದ್ದೇವೆ ಅಂತ ದಾಖಲೆಗಳಲ್ಲಿ ತೋರಿಸಿರುವ ಸ್ಥಳದಲ್ಲಿ ಮಾತ್ರ ಅದೇ ಹಳೆಯ ಅಂಗನವಾಡಿ ಕೇಂದ್ರವಿದೆ. ಈ ಬಗ್ಗೆ ದಾಖಲೆಗಳನ್ನ ಆರ್‌ಟಿಐನಲ್ಲಿ ಮಾಹಿತಿ ಕೇಳುತ್ತಿದ್ದಂತೆ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಿದ್ದ ದಾಖಲೆಗಳ ಫೋಟೊಗಳು ಮಾಯವಾಗಿವೆ. ಬಿಬಿಎಂಪಿ ಕಮಿಷನರ್ ಕೂಡ ಶಾಸಕರ ಅಕ್ರಮಗಳಲ್ಲಿ ಕೈ ಜೋಡಿಸಿ, ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೆ.ಆರ್.ಪುರ ಕ್ಷೇತ್ರವಷ್ಟೇ ಅಲ್ಲದೆ ಇಂತಹದ್ದೇ ಅಕ್ರಮಗಳು ಯಶವಂತಪುರ, ಆರ್.ಆರ್. ನಗರದಲ್ಲೂ ನಡೆದಿದೆ ಎಂದು ಆರೋಪಿಸಿರುವ ಟಿ.ಜೆ. ಅಬ್ರಾಹಂ, ದೂರಿನಲ್ಲಿ ಬೈರತಿ ಬಸವರಾಜ್, ಗುತ್ತಿಗೆದಾರ ನರಹರಿ, ಅಸಿಸ್ಟಂಟ್ ಎಂಜಿನಿಯರ್ ಸೇರಿ 10 ಜನರ ಹೆಸರು ಉಲ್ಲೇಖಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಜಾಮೀನು ರಹಿತ ವಾರಂಟ್
ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಮೂಡಿಗೆರೆ ಶಾಸಕ ಎಂ.ಪಿ. ಕುಮಾರರಸ್ವಾಮಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಶಾಸಕರ ವಿರುದ್ಧ ಒಟ್ಟು 8 ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿದ್ದವು. ಇದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ವಾರಂಟ್ ನೀಡಲಾಗಿದೆ.
ಇದನ್ನೂ ಓದಿ | Sagara News: ಅಭಿವೃದ್ಧಿಗೆ ಹಾಲಪ್ಪ ಕೊಡುಗೆಯೇನು?; ಬಹಿರಂಗ ಚರ್ಚೆಗೆ ಬರಲು ಗೋಪಾಲಕೃಷ್ಣ ಬೇಳೂರು ಸವಾಲು
ಹೂವಪ್ಪಗೌಡ ಎಂಬುವರಿಗೆ ಶಾಸಕ 1 ಕೋಟಿ ರೂಪಾಯಿಗೂ ಅಧಿಕ ಹಣ ನೀಡಬೇಕಿತ್ತು. ಆದರೆ ಅವರು ನೀಡಿರುವ 8 ಚೆಕ್ ಬೌನ್ಸ್ ಆದ ಹಿನ್ನೆಲೆಯಲ್ಲಿ 1 ತಿಂಗಳ ಅವಧಿಯೊಳಗೆ ಹಣ ಮರುಪಾವತಿ ಮಾಡಬೇಕು. ಇಲ್ಲದಿದ್ದರೆ 4 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಈ ಹಿಂದೆ ಕೋರ್ಟ್ ಸೂಚಿಸಿತ್ತು. ಆದರೆ, 1 ತಿಂಗಳಲ್ಲಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಕೋರ್ಟ್ ಮಾ.28ರಂದು ಜಾಮೀನು ರಹಿತ ವಾರಂಟ್ ಜಾರಿ ಮಾಡಿದ್ದು, ಎಂ.ಪಿ. ಕುಮಾರಸ್ವಾಮಿಗೆ ಬಂಧನ ಭೀತಿ ಎದುರಾಗಿದೆ.