Site icon Vistara News

Rain News | ಹಾಸನದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮತ್ತೆ ಭೂಕುಸಿತ; ವಾಹನ ಸಂಚಾರಕ್ಕೆ ಅಡಚಣೆ

ಹಾಸನದ

ಹಾಸನ: ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾನುವಾರ ಮತ್ತೆ ಭೂಕುಸಿತ ಆಗಿದೆ. ಇದೇ ಸ್ಥಳದಲ್ಲಿ ಶನಿವಾರ ಭೂ ಕುಸಿತವಾಗಿದ್ದರಿಂದ ಗುತ್ತಿಗೆದಾರರು ತಾತ್ಕಾಲಿಕವಾಗಿ ಮರಳು ಚೀಲಗಳನ್ನು ಜೋಡಿಸಿದ್ದರು. ಆದರೆ, ರಾತ್ರಿ ಸುರಿದ ಮಳೆಗೆ ಮರಳಿನ ಚೀಲಗಳು ಕೊಚ್ಚಿ ಹೋಗಿವೆ. ಕಳೆದ ವರ್ಷ ಕೂಡ ಇದೇ ಸ್ಥಳದಲ್ಲಿ ಭೂ ಕುಸಿತವಾಗಿ ರಸ್ತೆ ಸಂಚಾರ ಬಂದ್ ಆಗಿತ್ತು. ಈ ವರ್ಷದ ಮೊದಲ ಮಳೆಗೆ ಮತ್ತೆ ಶಿರಾಢಿಘಾಟ್‌ನಲ್ಲಿ ಭೂಕುಸಿತವಾಗಿ ಆತಂಕ ಸೃಷ್ಟಿಯಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಕುಸಿದರೆ ರಸ್ತೆ ಸಂಚಾರ ಬಂದ್ ಆಗುವ ಆತಂಕ ಎದುರಾಗಿದೆ. ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಾತ್ಕಾಲಿಕ ರಸ್ತೆ ದುರಸ್ತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.

ರಾಮನಾಥಪುರ-ಕೊಣನೂರು ರಸ್ತೆ ಸಂಪರ್ಕ ಬಂದ್‌: ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದ ರಾಮನಾಥಪುರ – ಕೊಣನೂರು ರಸ್ತೆ ಸಂಪರ್ಕ ಬಂದ್‌ ಆಗಿದೆ. ಅರಕಲಗೂಡು ತಾಲೂಕಿನ ವಡವನಹೊಸಳ್ಳಿ ಬಳಿ ಹಾಸನ – ಮಡಿಕೇರಿ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಈ ಮಾರ್ಗದ ವಾಹನ ಸಂಚಾರಕ್ಕಾಗಿ ಗುತ್ತಿಗೆದಾರರು ಬದಲಿ ರಸ್ತೆ ನಿರ್ಮಿಸಿದ್ದರು. ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ನೀರು ಬದಲಿ ರಸ್ತೆವರೆಗೂ ವ್ಯಾಪಿಸಿದೆ. ಇದರಿಂದಾಗಿ ರಸ್ತೆಯು ಕುಸಿಯುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ರಾಮನಾಥಪುರ – ಕೊಣನೂರು ನಡುವಿನ ಸಂಪರ್ಕ ಬಂದ್ ಆಗಿದೆ. ಹೀಗಾಗಿ ಅಧಿಕಾರಿಗಳು ಈ ಮಾರ್ಗಕ್ಕೆ ರಾಮನಾಥಪುರ – ಹಿರೇಹಳ್ಳಿ, ಹೊಸಹಳ್ಳಿ ಮಾರ್ಗವಾಗಿ ಕೊಣನೂರಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ | Rain News | ಮಳೆ ಆರ್ಭಟ, ಕರಾವಳಿ ಜಿಲ್ಲೆಗಳಲ್ಲಿ ಮತ್ತೆ 4 ದಿನ ರೆಡ್ ಅಲರ್ಟ್, ಸಂಚಾರಕ್ಕೆ ಕಂಟಕ

ಬೇಲೂರು ತಾಲೂಕಿನ ಮಾಳೆಗೆರೆ ಹೊಸಕೊಪ್ಪಲು ಗ್ರಾಮದಲ್ಲಿ ರುದ್ರಮ್ಮ ಅವರ ಮನೆ ಕುಸಿದಿದೆ.

ನಿರಂತರ ಮಳೆಯಿಂದ ಮನೆಗೆ ಹಾನಿ: ಭಾರಿ ಮಳೆಗೆ ಬೇಲೂರು ತಾಲೂಕಿನ ಮಾಳೆಗೆರೆ ಹೊಸಕೊಪ್ಪಲು ಗ್ರಾಮದ ರುದ್ರಮ್ಮ ಎಂಬುವವರ ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ರುದ್ರಮ್ಮ ಪ್ರಾಣಾಪಾಯದಿಂದ ಪಾರಾಗಿದ್ದು, ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಬಂದು ಸೂಕ್ತ ಪರಿಹಾರ ನೀಡಬೇಕು ಎಂದು ಮಹಿಳೆ ಒತ್ತಾಯಿಸಿದ್ದಾರೆ.

ಒಂದೂವರೆ ಎಕರೆಯಲ್ಲಿ ಶುಂಠಿ ಬೆಳೆಗೆ ನುಗಿದ ನೀರು: ಭಾರಿ ಮಳೆಯಿಂದ ಜಿಲ್ಲೆಯ ಬೇಲೂರು ತಾಲೂಕಿನ ಡನಾಯ್ಕನಹಳ್ಳಿ ಗ್ರಾಮದಲ್ಲಿ ರೈತ ಶಿವಕುಮಾರ್ ಎಂಬುವವರ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಶುಂಠಿ ಬೆಳೆ ಜಲಾವೃತವಾಗಿದೆ. ಎತ್ತಿನಹೊಳೆ ಕಾಮಗಾರಿಯ ಕಳಪೆ‌ ಕಾಮಗಾರಿಯಿಂದ ಕಾಲುವೆಯಲ್ಲಿ ನೀರು ಹೋಗದೆ ನಮ್ಮ‌ ಜಮೀನಿಗೆ ನುಗ್ಗಿದೆ, ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.

ಒಂದೂವರೆ ಲಕ್ಷ ಖರ್ಚು ಮಾಡಿ ಶುಂಠಿ ಬೆಳೆದಿದ್ದೇನೆ, ಜಮೀನಿನಲ್ಲಿ ಸಂಪೂರ್ಣ ನೀರು ನಿಂತಿರುವುದರಿಂದ ನಯಾಪೈಸೆ ಆದಾಯ ಬರು ದಿಲ್ಲ, ಇನ್ನು ನಾಲ್ಕು ದಿನದಲ್ಲಿ ರೋಗ ಬಂದು ಶುಂಠಿ ಸಂಪೂರ್ಣ ಹಾಳಾಗುತ್ತದೆ. ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಒದಗಿಸಿಕೊಡಬೇಕೆಂದು ರೈತ ಶಿವಕುಮಾರ್ ಮನವಿ ಮಾಡಿದ್ದಾರೆ.

ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ: ಬೇಲೂರು-ಸಕಲೇಶಪುರ ರಸ್ತೆ ಹಾಳಾಗಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಬೇಲೂರು ತಾಲೂಕಿನ ಕೋಗಿಲು ಮನೆ ಗ್ರಾಮದಲ್ಲಿ ಗುಂಡಿಬಿದ್ದ ರಸ್ತೆ ಸರಿಪಡಿಸಲು ಆಗ್ರಹಿಸಿ ಬೇಲೂರು ತಾಲೂಕು ರೈತಸಂಘದ ಅಧ್ಯಕ್ಷ ಬೋಗಮಲ್ಲೇಶ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಈ ವೇಳೆ ಸಂಚಾರ ತಡೆ ನಡೆಸಿದ ಗ್ರಾಮಸ್ಥರು, ರಸ್ತೆ ಸಂಪೂರ್ಣ ಹಾಳಾಗಿದ್ದು, ಸಾಕಷ್ಟು ಗುಂಡಿ ಬಿದ್ದಿವೆ. ಬೇಲೂರಿನಿಂದ ಬಿಕ್ಕೋಡುವರೆಗೂ ವಾಹನಗಳಲ್ಲಿ ಓಡಾಡುವುದೇ ಕಷ್ಟವಾಗಿದೆ. ಎಷ್ಟು ಬಾರಿ‌ ಹೇಳಿದರೂ ಅಧಿಕಾರಿಗಳು ಗಮನಹರಿಸಿಲ್ಲ, ರಸ್ತೆ ಶೀಘ್ರ ಸರಿಪಡಿಸದೇ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಮಳೆ ಕುರಿತ ಇಂದಿನ ಅಪ್ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

. Rain News | ಮುಂದುವರಿದ ಮಳೆಯ ಪಿರಿಪಿರಿ, ರೈತರಿಗೆ ಮುಳುವಾದ ಎತ್ತಿನಹೊಳೆ ಕಾಮಗಾರಿ
೨. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ವರುಣಾರ್ಭಟ, ಜುಲೈ 15ರವರೆಗೆ ಭಾರಿ ಮಳೆ ಸಾಧ್ಯತೆ

೩. Rain News | ಜೋಯಿಡಾದ ಅಣಶಿ ಘಟ್ಟದಲ್ಲಿ ಮತ್ತೆ ಭೂಕುಸಿತ, ಪರ್ಯಾಯ ಮಾರ್ಗ ಬಳಸಲು ಸೂಚನೆ
4. Rain News | ಕಿತ್ತೂರು ತಾಲೂಕಿನಲ್ಲಿ ಮಳೆ ಹಾನಿಗೊಳಪಟ್ಟ ಮನೆಗಳ ಸಂಖ್ಯೆ 30ಕ್ಕೇರಿಕೆ

Exit mobile version