ಬೆಂಗಳೂರು: ಹಲವಾರು ಸಾಧನೆಗಳನ್ನು ಮುಡಿಗೇರಿಸಿಕೊಂಡಿರುವ ವಿಜಯಾನಂದ ಟ್ರಾವೆಲ್ಸ್ ಇನ್ನೊಂದು ಹೊಸ ದಾಖಲೆ ಮಾಡಿದೆ. 500 ಕೋಟಿ ರೂಪಾಯಿ ಮೌಲ್ಯದ 550 ವೋಲ್ವೋ ಹಾಗೂ ಐಷರ್ ಇಂಟರ್‌ಸಿಟಿ ಲಕ್ಸುರಿ ಸ್ಲೀಪರ್ ಬಸ್‌ಗಳ ಖರೀದಿಗೆ ವಿಜಯಾನಂದ ಟ್ರಾವೆಲ್ಸ್ ಮುಂದಾಗಿದೆ. ಈ ಮೂಲಕ ಭಾರತದಲ್ಲಿ ಅಧಿಕ ಬಸ್‌ಗಳನ್ನು ಖರೀದಿ ಮಾಡುತ್ತಿರುವ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಯೊಂದಿಗೆ ಇತಿಹಾಸ ಸೃಷ್ಟಿಸಿದೆ.
ವಿಜಯಾನಂದ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್‌ನ ಎಂಡಿ ಶಿವ ಸಂಕೇಶ್ವರ ಅವರು ಬಸ್ ಖರೀದಿಗೆ ಆದೇಶ ನೀಡುವ ಮೂಲಕ ಭಾರತದಲ್ಲಿ ವೋಲ್ವೋ ಮತ್ತು ಐಷರ್‌ಗಳಿಂದ 550 ಇಂಟರ್‌ಸಿಟಿ ಬಸ್‌ಗಳನ್ನು ವಿಜಯಾನಂದ ಟ್ರಾವೆಲ್ಸ್ ಸಂಸ್ಥೆಗೆ ಸೇರ್ಪಡೆ ಮಾಡಿಕೊಂಡು ಹೊಸ ಮೈಲಿಗಲ್ಲು ನಿರ್ಮಾಣ ಮಾಡಿದರು. ಈ ವಹಿವಾಟು ಅಂದಾಜು 500 ಕೋಟಿ ರೂ. ಆಗಿದ್ದು, ಈ ಪೈಕಿ ಐಷರ್ ಇಂಟರ್‌ಸಿಟಿ 13.5ಎಂ ಎಸಿ ಮತ್ತು ಎಸಿಯೇತರ ಸ್ಲೀಪರ್ ಕೋಚ್‌ಗಳ 500 ಬಸ್ ಮತ್ತು ವೋಲ್ವೋ 9600 ಲಕ್ಸುರಿ ಸ್ಲೀಪರ್ ಕೋಚ್‌ಗಳ 50 ಬಸ್‌ಗಳು ಸೇರಿಕೊಂಡಿವೆ.
ಅತ್ಯುತ್ತಮ ದರ್ಜೆಯ ಬಸ್ ಖರೀದಿಗೆ ವೋಲ್ವೋ ಮತ್ತು ಐಷರ್‌ನೊಂದಿಗೆ ವಿಜಯಾನಂದ ಟ್ರಾವೆಲ್ಸ್ ಉತ್ತಮ ಒಡನಾಟ ಹೊಂದಿದೆ. ಭಾರತದಲ್ಲಿ ಸುಖಕರ ಬಸ್ ಪ್ರಯಾಣದ ಅನುಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವದರ್ಜೆಯ ಗುಣಮಟ್ಟ, ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ. ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಅನುಗುಣವಾಗಿ ಈ ಬಸ್‌ಗಳನ್ನು ಹೊಸಕೋಟೆ ಮತ್ತು ಪೀತಂಪುರದ ಅತ್ಯಾಧುನಿಕ ಕಾರ್ಖಾನೆಗಳಲ್ಲಿ ನಿರ್ಮಿಸಲಾಗಿದೆ.
ವಿಜಯಾನಂದ ಟ್ರಾವೆಲ್ಸ್‌ನ ಈ ಕ್ರಮವು ಮುಂಬರುವ ದಿನಗಳಲ್ಲಿ ಅಖಿಲ ಭಾರತ (ಪಾನ್-ಇಂಡಿಯಾ) ಬ್ರ್ಯಾಂಡ್ ಆಗುವತ್ತ ದೃಢ ಹೆಜ್ಜೆಯನ್ನು ಇರಿಸಿದಂತಾಗಿದೆ. ವಿಜಯಾನಂದ ಟ್ರಾವೆಲ್ಸ್ ಪ್ರಸ್ತುತ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್ ಹಾಗೂ ಗೋವಾ ರಾಜ್ಯಗಳಲ್ಲಿ ಸೇವೆ ಒದಗಿಸುತ್ತಿದೆ.
ಹಲವು ಪ್ರಥಮಗಳ ಹೆಗ್ಗಳಿಕೆ
ಸಾರಿಗೆ ಉದ್ಯಮದಲ್ಲಿ ಬದಲಾವಣೆಯ ಹರಿಕಾರನೆಂದೇ ಖ್ಯಾತವಾಗಿರುವ ವಿಜಯಾನಂದ ಟ್ರಾವೆಲ್ಸ್ ಮಹಿಳೆಯರಿಗೆ ಆಸನ ಮೀಸಲು, ಬ್ಯಾಕ್‌ಅಪ್ ಸೌಲಭ್ಯದೊಂದಿಗೆ ಬಸ್‌ಗಳ ಇನ್-ಹೌಸ್ ರಿಪೇರಿ ಮತ್ತು ನಿರ್ವಹಣೆ, ಸುರಕ್ಷಿತ ಪ್ರಯಾಣಕ್ಕಾಗಿ ಇಬ್ಬರು ಚಾಲಕರು, ಎಲ್ಲ ಇಂಟರ್‌ಸಿಟಿ ಬಸ್‌ಗಳಿಗೆ ಕಂಪನಿ ವೆಬ್‌ಸೈಟ್ www.vrlbus.in ಮತ್ತು ಆ್ಯಪ್‌ನಲ್ಲಿ ಅತಿ ಹೆಚ್ಚಿನ (ಶೇ.15) ರಿಯಾಯಿತಿ ಸಹಿತ ಪ್ರಯಾಣಿಕರಿಗೆ ಸೇವೆ ಒದಗಿಸಿ ಹಲವು ಪ್ರಥಮಗಳನ್ನು ಸಾಧಿಸಿದ ಹೆಗ್ಗಳಿಕೆಯನ್ನು ಹೊಂದಿದೆ. ವಿಜಯಾನಂದ ಟ್ರಾವೆಲ್ಸ್ ಬಸ್‌ಗಳು ನಿಗದಿತ ಸಮಯಕ್ಕೆ ಹೊರಡುವ ಹಾಗೂ ನಿಗದಿತ ಸಮಯಕ್ಕೆ ತಲುಪುವ ಮೂಲಕ ಸಮಯಪಾಲನೆಗೂ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಜೋಧಪುರದಿಂದ ಬೆಂಗಳೂರಿಗೆ ಏಷ್ಯಾದ ಅತಿ ಉದ್ದದ ಬಸ್ ಮಾರ್ಗ ಪರಿಚಯಿಸಿದ ಖ್ಯಾತಿಯೂ ವಿಜಯಾನಂದ ಟ್ರಾವೆಲ್ಸ್‌ದ್ದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಜಯಾನಂದ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ ಅವರು, ನಾವೀಗ ನಮ್ಮ ಬೆಳವಣಿಗೆಯ ನಿರ್ಣಾಯಕ ಕಾಲಘಟ್ಟದಲ್ಲಿದ್ದೇವೆಂದು ಆಶಾವಾದ ವ್ಯಕ್ತಪಡಿಸಿದ್ದಾರೆ. ನಮ್ಮ ಪರಂಪರೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಭೌಗೋಳಿಕ ತಲುಪುವಿಕೆ ಮತ್ತು ಇಂಟರ್‌ಸಿಟಿ ಸಂಪರ್ಕ ವಿಚಾರಗಳಲ್ಲಿ ಪಾನ್-ಇಂಡಿಯಾ ಕಾರ್ಯಾಚರಣೆ ನಮ್ಮ ಬಯಕೆಯಾಗಿದೆ. ಬ್ರ್ಯಾಂಡ್ ಉಪಕ್ರಮಗಳು ಮತ್ತು ಹೊಸ ಹೂಡಿಕೆಗಳು ರಾಷ್ಟ್ರೀಯ ಮಟ್ಟದಲ್ಲಿ ನಮಗೆ ಹೊಸ ಚೈತನ್ಯ ತಂದಿದೆ. ವೋಲ್ವೋ ಮತ್ತು ವಿಇಸಿವಿ ಜತೆಗಿನ ನಮ್ಮ ಸಹಯೋಗದ ಬೆಳವಣಿಗೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ವಿಶ್ವ ದರ್ಶನ ಸಂಸ್ಥೆಯಿಂದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಆರಂಭ; ಅರ್ಜಿ ಸಲ್ಲಿಕೆ ಶುರು
ವೋಲ್ವೋ ಗ್ರೂಪ್ ಮತ್ತು ಐಷರ್ ಮೋಟರ್ಸ್ ನಡುವಿನ 15 ವರ್ಷಗಳ ಯಶಸ್ವಿ ಜಂಟಿ ಪಾಲುದಾರಿಕೆ ಫಲವಾಗಿ ಆರಾಮದಾಯಕತೆ, ಸುರಕ್ಷತೆ ಮತ್ತು ವೋಲ್ವೋ ಹಾಗೂ ಐಷರ್ ಬಸ್ ಶ್ರೇಣಿಗಳ ಮೂಲಕ ಪ್ರಯಾಣಿಕರಿಗೆ ಪ್ರಯಾಣ ಅನುಭವ ಒದಗಿಸುವಲ್ಲಿ ವಿಇಸಿವಿ ಉದ್ಯಮದಲ್ಲೇ ಮುಂಚೂಣಿಯಲ್ಲಿದೆ. ವಿಜಯಾನಂದ ಟ್ರಾವೆಲ್ಸ್ ಪ್ರೈ. ಲಿ.ನಿಂದ ಈ ಫಾಲೋಅಪ್ ಆರ್ಡರ್ ಪಡೆಯಲು ನಮಗೆ ತುಂಬಾ ಸಂತೋಷವಾಗುತ್ತಿದೆ.
ವಿನೋದ್ ಅಗರ್‌ವಾಲ್, ವಿಇಸಿವಿ ಎಂಡಿ ಮತ್ತು ಸಿಇಒ
ಐಷರ್ ಇಂಟರ್‌ಸಿಟಿ 13.5ಎಂ
2021ರಲ್ಲಿ ಪರಿಚಯಿಸಲಾದ ಐಷರ್ ಇಂಟರ್‌ಸಿಟಿ 13.5ಎಂ ಬಸ್ ಟಾಲ್ ಬಾಯ್ ವಿನ್ಯಾಸ ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತವಾದ ಈ ಬಸ್‌ಗಳು ಸುಖಕರ ಪ್ರಯಾಣ ಮತ್ತು ಗರಿಷ್ಠ ಸುರಕ್ಷತೆ ನೀಡತ್ತದೆ. ಐಷರ್ 6016 ಎಸ್ ಎಲ್‌ಪಿಒ 13.5 ಎಂ ಚಾಸಿಸ್ ಮೇಲೆ ಈ ಮಾಡೆಲ್ ನಿರ್ಮಿಸಿದೆ. ವೋಲ್ವೋ ಗ್ರೂಪ್‌ನ ಜಾಗತಿಕ ಪವರ್ಟ್ರೇನ್ನ ಕುಟುಂಬದಿಂದ ಪಡೆದ ವಿಶ್ವಾಸಾರ್ಹ 5.1 ಲೀಟರ್ ವಿಇಡಿಎಕ್ಸ್5 ಎಂಜಿನ್ ಸನ್ನದ್ಧವಾಗಿದೆ. 240 ಎಚ್‌ಪಿವರೆಗಿನ ಗರಿಷ್ಠ ಶಕ್ತಿ ಮತ್ತು 900 ಎನ್‌ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದು ಹೆಚ್ಚು ಮೈಲೇಜ್ ಕೊಡುವ ಜತೆಗೆ ಚಾಲಕರಿಗೂ ಹೆಚ್ಚು ಆರಾಮದಾಯಕತೆಯನ್ನು ಒದಗಿಸುತ್ತದೆ.
ವೋಲ್ವೋ 9600 ಸ್ಲೀಪರ್ ಕೋಚ್
ವೋಲ್ವೋ 9600 ಪ್ರಶಸ್ತಿ ವಿಜೇತ ಯುರೋಪಿಯನ್ ವಿನ್ಯಾಸದಿಂದ ಕೂಡಿದೆ. ದೇಶಾದ್ಯಂತ ಪ್ರಮುಖ ಮಾರ್ಗಗಳಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಐಷಾರಾಮಿ ಮತ್ತು ಆರಾಮದಾಯಕತೆಯಲ್ಲಿ ಈಗಾಗಲೆ ಬೆಂಚ್‌ಮಾರ್ಕ್ ಸ್ಥಾಪಿಸಿದೆ. ವಿಶಿಷ್ಟ ಟಾಲ್‌ಬಾಯ್ ವಿನ್ಯಾಸವು ಉತ್ತಮ ಸೌಂದರ್ಯದಿಂದ ಕೂಡಿದ್ದು, 40 ಸ್ಲೀಪರ್ ಬರ್ತ್‌ಗಳಿಗೆ ವಿಶಾಲ ಸ್ಥಳಾವಕಾಶ ಹೊಂದಿದೆ. 8.5 ಸಿಯು.ಎಂ ಲಗೇಜ್ ಸ್ಥಳವನ್ನೂ ಒಳಗೊಂಡಿದೆ.