Site icon Vistara News

Resignation | ಭಾಸ್ಕರ್‌ ರಾವ್‌, ರವೀಂದ್ರನಾಥ್‌ ಬಳಿಕ ಮತ್ತೊಬ್ಬ ಐಪಿಎಸ್‌ ಅಧಿಕಾರಿ ರಾಜೀನಾಮೆ? ಏನಾಗ್ತಿದೆ ಒಳಗೆ?

IPS

ಬೆಂಗಳೂರು: ಐಪಿಎಸ್ ಅಧಿಕಾರಿಗಳಾದ ಭಾಸ್ಕರ್ ರಾವ್‌ ಹಾಗೂ ರವೀಂದ್ರನಾಥ್ ರಾಜೀನಾಮೆ ಬಳಿಕ ಮತ್ತೊಬ್ಬ ಪೊಲೀಸ್‌ ಅಧಿಕಾರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆ ತೀರ್ಮಾನ ಮಾಡಿದ್ದಾರೆ. ಆಡಳಿತದಲ್ಲಿ ಜಾತಿ, ಧರ್ಮ, ಲಂಚದ ಮೇಲೆ ಪೋಸ್ಟಿಂಗ್, ವರ್ಗಾವಣೆ ನಡೆಸಿರುವುದರಿಂದ ಬೇಸರಗೊಂಡಿರುವ ಐಪಿಎಸ್ ಅಧಿಕಾರಿ. ಹಿರಿಯ ಅಧಿಕಾರಿಗಳ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದು, ಇದೇ ತಿಂಗಳ 21ರಂದು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ರಾಜ್ಯದಲ್ಲಿ ಭ್ರಷ್ಟಾಚಾರ, ಕಮಿಷನ್ ಆರೋಪಗಳಿಗೆ ಏನೂ ಕಡಿಮೆ ಇಲ್ಲ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ, ಪೋಸ್ಟಿಂಗ್ ಬೇಕಾದರೂ ಹಣ ಚೆಲ್ಲಬೇಕೆಂಬ ಮಾತುಗಳು ಸರ್ವೇಸಾಮಾನ್ಯವಾಗಿದೆ. ದುಡ್ಡು ಕೊಟ್ಟರೆ ಆರೋಪಗಳನ್ನು ಎದುರಿಸುತ್ತಿದ್ದರೂ ಒಳ್ಳೆಯ ಕಡೆ ಎಕ್ಸಿಕ್ಯೂಟಿವ್ ಪೋಸ್ಟ್ ಸಿಗುತ್ತದೆ. ಕೆಲವರು ಎಷ್ಟೇ ಪ್ರಾಮಾಣಿಕವಾಗಿದ್ದರೂ ಅವರ ಸೇವೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಒಳ್ಳೆಯ ಎಕ್ಸಿಕ್ಯೂಟಿವ್‌ ಪೋಸ್ಟ್ ಸಿಗೋದಿಲ್ಲ. ಇಂತಹ ವ್ಯವಸ್ಥೆಯಿಂದ ಬೇಸರಗೊಡಿರುವ ಐಪಿಎಸ್ ಅಧಿಕಾರಿ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಯಾರಿವರು ಅಧಿಕಾರಿ?
2005ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಈ ಐಪಿಎಸ್ ಅಧಿಕಾರಿ ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಲೋಕಾಯುಕ್ತ, ನಕ್ಸಲ್ ನಿಗ್ರಹ ಪಡೆ ಎಸಿಬಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅದರಲ್ಲಿ ಕೆಲವೇ ಕೆಲವು ವರ್ಷಗಳು‌ ಮಾತ್ರ ಎಕ್ಸಿಕ್ಯೂಟಿವ್ ಡ್ಯೂಟಿ‌ ಮಾಡಿದ್ದು, ಉಳಿದಂತೆ ಬರಿ ನಾನ್ ಎಕ್ಸಿಕ್ಯುಟಿವ್ ಡ್ಯೂಟಿಯೇ ಹೆಚ್ಚಾಗಿದೆ. ಹೀಗಾಗಿ ಆಡಳಿತದಲ್ಲಿನ ಜಾತಿ, ಧರ್ಮ ಹಾಗೂ ಲಂಚ ವ್ಯವಸ್ಥೆಯ ವಿರುದ್ಧ ಹಿರಿಯ ಐಪಿಎಸ್ ಅಧಿಕಾರಿಗಳೊಂದಿಗೆ ತಮ್ಮ ಅಳಲು ತೋಡಿಕೊಂಡು ರಾಜೀನಾಮೆ ನೀಡುವ ಬಗ್ಗೆ ನಿರ್ಧರಿಸಿದ್ದಾರೆ.

ಪೊಲೀಸರ ಗ್ರೂಪ್‌ನಲ್ಲೇ ನೋವು
ರಾಜೀನಾಮೆ ನೀಡಲು ನಿರ್ಧರಿಸಿರುವ ಈ ಅಧಿಕಾರಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ಇತರೆ ಹಿರಿಯ ಅಧಿಕಾರಿಗಳಿರುವ ಐಪಿಎಸ್ ಅಧಿಕಾರಿಗಳ ವಾಟ್ಸಾಪ್ ಗ್ರೂಪ್‌ನಲ್ಲೇ ತನ್ನ ನೋವನ್ನು ತೋಡಿಕೊಂಡಿದ್ದು, ಎಲ್ಲರನ್ನು ಮುಜುಗರಕ್ಕೀಡುಮಾಡಿದೆ. ಹೀಗಾಗಿ ಕೆಲವರು ರಾಜಿನಾಮೆಗೆ ಮುಂದಾಗಿರೋ ಅಧಿಕಾರಿಯ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.

ಹಿರಿಯ ಅಧಿಕಾರಿಯ ರಾಜೀನಾಮೆ ಸುದ್ದಿಗೆ ಪ್ರಕ್ರಿಯಿಸಿರುವ ಈ ಹಿಂದೆ ರಾಜೀನಾಮೆ ನೀಡಿ ಇಲಾಖೆಯಿಂದ ಹೊರಬಂದ ಭಾಸ್ಕರ ರಾವ್‌ ಅವರು, ನಾನು ಇಂತಹ ಸವಾಲುಗಳನ್ನು ಎದುರಿಸಿದ್ದೇನೆ. ಜಾತಿ, ಧರ್ಮ, ಹಣದ ಪ್ರಭಾವ, ಬಕೆಟ್ ಹಿಡಿಯುವವರು, ತಿಂಗಳು ಮಾಮೂಲು ಕೊಡುವವರು, ಚಮಚಾಗಿರಿ ಮಾಡುವವರ ಕಾಲವಾಗಿದೆ. ಪ್ರಾಮಾಣಿಕರಿಗೆ ಅವಕಾಶ ಸಿಗೋದೇ ಇಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಐಪಿಎಸ್ ಅಧಿಕಾರಿಯ ರಾಜಿನಾಮೆ ವಿಚಾರ ಪೊಲೀಸ್ ಇಲಾಖೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಹಿರಿಯ ಅಧಿಕಾರಿಗಳ ಒತ್ತಡ, ಮನವಿಗೆ ಮಣಿಯುತ್ತಾರೋ ಅಥವಾ ತೆಗೆದುಕೊಂಡ ನಿರ್ಧಾರದಂತೆ ರಾಜೀನಾಮೆ ಸಲ್ಲಿಸುತ್ತಾರೋ ಕಾದು ನೋಡಬೇಕು.

Exit mobile version