Site icon Vistara News

ಮತಾಂತರ ನಿಷೇಧ ಕಾಯಿದೆ ಈಗ ಅಧಿಕೃತ: ಕಾಂಗ್ರೆಸ್‌, ಜೆಡಿಎಸ್‌ ಸಭಾತ್ಯಾಗದ ನಡುವೆ ಮೇಲ್ಮನೆಯಲ್ಲೂ ವಿಧೇಯಕ ಪಾಸ್‌

Home minister araga jnanendra reaction about lokayukta-raid

ವಿಧಾನ ಪರಿಷತ್‌: ಬಲವಂತದ ಮತಾಂತರ, ಆಮಿಷದ ಮತಾಂತರಗಳನ್ನು ತಡೆಯುವ ಉದ್ದೇಶದ್ದೆಂದು ಹೇಳಲಾದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ (Anti conversion bill)ಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರ ಸಭಾತ್ಯಾಗದ ನಡುವೆ ವಿಧಾನ ಪರಿಷತ್‌ ಅಂಗೀಕಾರ ನೀಡಿದೆ. ಇದರೊಂದಿಗೆ ವಿಧಾನಸಭೆಯಲ್ಲಿ ಈಗಾಗಲೇ ಅನುಮೋದನೆ ಪಡೆದು ಸುಗ್ರೀವಾಜ್ಞೆಯ ಬಲದಲ್ಲಿ ಜಾರಿಯಲ್ಲಿದ್ದ ಈ ವಿಧೇಯಕ ಅಧಿಕೃತ ಕಾನೂನಾಗಿ ಜಾರಿಗೆ ಬರಲಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗುರುವಾರ ಮಧ್ಯಾಹ್ನ ಮಂಡಿಸಿ ಸರಕಾರದ ಉದ್ದೇಶಗಳನ್ನು, ಮತಾಂತರಗೊಳ್ಳಲು ಭರಿಸಬೇಕಾದ ಷರತ್ತುಗಳನ್ನು ವಿವರಿಸಿದ್ದರು. ಆದರೆ, ಇದಕ್ಕೆ ಕಾಂಗ್ರೆಸ್‌ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು. ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ನಾಯಕರಾಗಿರುವ ಬಿ.ಕೆ. ಹರಿಪ್ರಸಾದ್‌ ಅವರು ಹಲವು ವಾದ ಮಂಡನೆಗಳ ಮೂಲಕ ಇದನ್ನು ವಿರೋಧಿಸಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರು ಅಷ್ಟೇ ಬಲವಾಗಿ ಸಮರ್ಥಿಸಿದ್ದರು.

ಅಂತಿಮವಾಗಿ ಸಂಜೆ ವಿಧೇಯಕವನ್ನು ವಿರೋಧಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಸಭಾತ್ಯಾಗ ಮಾಡಿದ ಬಳಿಕ ಧ್ವನಿಮತದಿಂದ ಅಂಗೀಕಾರವನ್ನು ನೀಡಲಾಯಿತು.

ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌, ಸಲೀಂ ಅಹಮದ್‌ ಮತ್ತು ಮಂಜುನಾಥ ಭಂಡಾರಿ ಅವರು ವಿಧೇಯಕದ ಪ್ರತಿಗಳನ್ನು ಹರಿದು ಹಾಕಿ ʻಕೋಮುವಾದಿ ಪಕ್ಷಕ್ಕೆ ಧಿಕ್ಕಾರʼ ಎಂದು ಕೂಗಿದರೆ ಧ್ವನಿ ಮತದಿಂದ ವಿಧೇಯಕ ಅಂಗೀಕಾರವಾದ ಕೂಡಲೇ ಬಿಜೆಪಿ ಸದಸ್ಯರು ಭಾರತ್‌ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು.

ಮತಾಂತರ ನಿಷೇಧ ವಿಧೇಯಕ ಯಾಕೆ?: ಆರಗ ಜ್ಞಾನೇಂದ್ರ ವಿವರಣೆ
ವಿಧೇಯಕವನ್ನು ಮಂಡಿಸಿ ಮಾತನಾಡಿದ ಆರಗ ಜ್ಞಾನೇಂದ್ರ ಅವರು, ಎಲ್ಲರಿಗೂ ತಾವು ಬಯಸಿದ ಧರ್ಮದಲ್ಲಿ ಬದುಕುವ ಹಕ್ಕಿದೆ. ಅದರೆ, ಯಾರೂ ಕೂಡಾ ಬಲವಂತದಿಂದ, ಆಮಿಷ ಒಡ್ಡಿ ಮತಾಂತರ ಮಾಡಬಾರದು, ಅದಕ್ಕೆ ಅವಕಾಶವಿರಬಾರದು ಮತ್ತು ಮತಾಂತರ ಆಗುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಎಂಬ ಕಾರಣಕ್ಕಾಗಿ ಈ ವಿಧೇಯಕವನ್ನು ಮಂಡಿಸಲಾಗುತ್ತಿದೆ. ವಿಧಾನಸಭೆಯ ಅಂಗೀಕಾರ ಪಡೆದಿರುವ ಈ ವಿಧೇಯಕಕ್ಕೆ ವಿಧಾನ ಪರಿಷತ್‌ನಲ್ಲೂ ಅನುಮೋದನೆ ನೀಡಬೇಕು ಎಂದು ಕೋರಿದರು.

ಕಾಂಗ್ರೆಸ್‌ ಸರಕಾರ ಇದ್ದಾಗಲೇ ಈ ವಿಧೇಯಕ ಜಾರಿಗೆ ಚಿಂತನೆ ನಡೆದಿತ್ತು ಎಂಬುದನ್ನು ಉಲ್ಲೇಖಿಸಿದ ಸಚಿವರು, ವಿಧಾನಸಭೆಯಲ್ಲಿ ಶಾಸಕರೊಬ್ಬರು (ಗೂಳಿಹಟ್ಟಿ ಶೇಖರ್‌) ತಮ್ಮ ತಾಯಿಯನ್ನೇ ಮತಾಂತರ ಮಾಡಿದ್ದರ ಕಥೆಯನ್ನು ಹೇಳಿದ್ದನ್ನು ನೆನಪಿಸಿಕೊಂಡರು.

ʻʻಇತ್ತೀಚಿನ ವರ್ಷದಲ್ಲಿ ಮತಾಂತರ ವ್ಯಾಪಕವಾಗುತ್ತಿದೆ. ಸಾಮೂಹಿಕ, ಬಲವಂತದ ಮತಾಂತರ ನಡೆಯುತ್ತಿದೆ. ಇದರಿಂದ ಸಮಾಜದ ಮತ್ತು ಕುಟುಂಬಗಳ ನೆಮ್ಮದಿ ಹಾಳಾಗುತ್ತಿದೆ. ಶಾಸಕರೇ ಹೇಳಿದಂತೆ ಮನೆಯೊಳಗೇ ಕ್ಷೋಭೆಯ ವಾತಾವರಣ ನಿರ್ಮಾಣ ಆಗುತ್ತಿದೆ. ಇದಕ್ಕೆಲ್ಲ ಅವಕಾಶ ಇರಬಾರದುʼʼ ಎಂದು ಹೇಳಿದ ಅವರು, ʻʻಈ ವಿಧೇಯಕ ಸರಳವಾಗಿದೆ. ಇದು ಯಾರ ಧಾರ್ಮಿಕ ಸ್ವಾತಂತ್ರ್ಯವನ್ನೂ ಕಸಿಯುವುದಿಲ್ಲ. ಮತಾಂತರ ಆಗುವುದನ್ನು ತಡೆಯುವುದೂ ಇಲ್ಲ. ಆದರೆ ಮತಾಂತರ ಪ್ರಕ್ರಿಯೆಯನ್ನು ಕಾನೂನುಬದ್ಧಗೊಳಿಸುತ್ತದೆʼʼ ಎಂದು ಹೇಳಿದರು.

ಮತಾಂತರಗೊಳ್ಳುವವರಿಗೆ ಇಷ್ಟು ಕಂಡಿಷನ್‌ಗಳು
೧. ಮತಾಂತರ ಆಗಬಯಸುವ ವ್ಯಕ್ತಿ 60 ದಿನಗಳ ಮೊದಲು ಫಾರ್ಮ್ 1 ಅನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ನೀಡಬೇಕು.
೨. ಯಾರ ಮೂಲಕ ಮತಾಂತರ ನಡೆಯುತ್ತದೋ ಆತ ಕೂಡಾ ಒಂದು ತಿಂಗಳ ಮೊದಲು ಈಗಾಗಲೇ ಫಾರ್ಮ್ 2 ಅನ್ನು ಭರ್ತಿಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ನೀಡಬೇಕು.
೩. ಮತಾಂತರವಾದ ಒಂದು ತಿಂಗಳ ಬಳಿಕ ಡಿಕ್ಲರೇಷನ್ ಫಾರ್ಮ್ ಅಥವಾ ಘೋಷಣಾಪತ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಭರ್ತಿ ಮಾಡಿ ನೀಡಬೇಕು.
೪. ಡಿಕ್ಲರೇಷನ್ ಮಾಡಿದ 21 ದಿನಗಳ ಬಳಿಕ ಮತಾಂತರ ಹೊಂದಿದ ವ್ಯಕ್ತಿ ಖುದ್ದು ಜಿಲ್ಲಾಧಿಕಾರಿ ಇಲ್ಲವೇ ಅಪರ ಜಿಲ್ಲಾಧಿಕಾರಿ ಮುಂದೆ ಹಾಜರಾಗಬೇಕು.
೫. ಮತಾಂತಗೊಂಡ ವ್ಯಕ್ತಿ ಹಾಜರಾದಾಗ ಜಿಲ್ಲಾ ಮ್ಯಾಜಿಸ್ಟ್ರೇಟರು ಮತಾಂತರೋತ್ತರ ಘಟನೆಗಳ ಸಂಪೂರ್ಣ ವಿದ್ಯಮಾನವನ್ನು ದಾಖಲಿಸಬೇಕು.
೬. ಮತಾಂತರಕ್ಕೆ ತಕರಾರುಗಳಿದ್ದರೆ ತಕರಾರು ಎತ್ತಿದ ವ್ಯಕ್ತಿ ಹಾಗೂ ತಕರಾರಿನ ಸ್ವರೂಪವನ್ನು ದಾಖಲಿಸಬೇಕು.
೭. ಮತಾಂತರ ಹೊಂದಿದವರಿಗೆ ಜಿಲ್ಲಾ ದಂಡಾಧಿಕಾರಿಗಳು ದೃಢೀಕರಿಸಿದ ಪ್ರತಿಗಳನ್ನು ನೀಡಬೇಕು.
೮. ಯಾವುದಾದರೂ ತಕರಾರುಗಳಿದ್ದರೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಬಂಧ ಪಟ್ಟ ಇಲಾಖೆಗಳಾದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೇರಿದಂತೆ ಇತರ ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕು.
೯. ಮ್ಯಾಜಿಸ್ಟ್ರೇಟ್​‌ರಿಂದ ಮಾಹಿತಿ ಸ್ವೀಕರಿಸಿದ ನಂತರ ಸಂಬಂಧಪಟ್ಟ ಇಲಾಖೆ ಮತಾಂತರ ಹೊಂದಿದ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ಹಾಗೂ ಸರ್ಕಾರದಿಂದ ಸಿಗುವ ಆರ್ಥಿಕ ಲಾಭಗಳ ಬಗ್ಗೆ ಸೂಕ್ತ ಕ್ರಮ ವಹಿಸಬೇಕು.
೧೦. ವ್ಯಕ್ತಿ ತಾನು ಸ್ವ ಇಚ್ಛೆಯಿಂದ ಬೇರೊಂದು ಧರ್ಮಕ್ಕೆ ಮತಾಂತರ ಆಗಿದ್ದಾಗಿ ಪ್ರಕಟಿಸಬೇಕು. ಅದಾದ ಬಳಿಕ ಆತ ತನ್ನ ಮೂಲ ಜಾತಿಯ ಎಲ್ಲ ಹಕ್ಕು ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾನೆ.
೧೧. ಕೆಲವರು ದಲಿತರಾಗಿದ್ದು ಬಳಿಕ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುತ್ತಾರೆ. ದಲಿತರಿಗೆ ಸಿಗುವ ಸೌಲಭ್ಯ ಮತ್ತು ಮತಾಂತರ ಆದ ಧರ್ಮದಿಂದಲೂ ಲಾಭ ಪಡೆಯುತ್ತಾರೆ. ಇನ್ನು ಅದಕ್ಕೆ ಅವಕಾಶವಿಲ್ಲ.
೧೨. ಮತಾಂತರಕ್ಕೊಳಗಾದವರು ತಮ್ಮ ಮೂಲ ಜಾತಿಯಲ್ಲಿ ಸಿಗುತ್ತಿದ್ದ ಸೌಲಭ್ಯ, ಭಡ್ತಿಗಳನ್ನು ಪಡೆಯಲು ಸಾಧ್ಯವಿಲ್ಲ.

Exit mobile version