Site icon Vistara News

Anti Rape Footwear | ಮಹಿಳೆಯರ ರಕ್ಷಣೆಗೆ ಆ್ಯಂಟಿ ರೇಪ್ ಫುಟ್‌ವೇರ್; ಕಲಬುರಗಿ ವಿದ್ಯಾರ್ಥಿನಿಯಿಂದ ಅಭಿವೃದ್ಧಿ

Anti Rape Footwear

ಕಲಬುರ್ಗಿ: ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ ತಡೆಯಲು ಎಷ್ಟೇ ಕಠಿಣ ಕಾನೂನು ಜಾರಿಗೆ ತಂದರೂ ಘಟನೆಗಳು ಮಾತ್ರ ಪದೇ ಪದೆ ಮರುಕಳಿಸುತ್ತಿವೆ. ಆಕ್ರಮಣ ವೇಳೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವಾಗ ಕೆಲವರು ಜೀವವನ್ನೂ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಇನ್ನು ಮುಂದೆ ಇದಕ್ಕೆ ಹೆದರಬೇಕಿಲ್ಲ, ಏಕೆಂದರೆ ಮಹಿಳೆಯರ ಸ್ವಯಂ ರಕ್ಷಣೆಗಾಗಿ ವಿದ್ಯಾರ್ಥಿನಿಯೊಬ್ಬಳು ಆ್ಯಂಟಿ ರೇಪ್ ಫುಟ್‌ವೇರ್ (Anti Rape Footwear) ಒಂದನ್ನು ಆವಿಷ್ಕಾರ ಮಾಡಿದ್ದಾಳೆ.

ಮಹಿಳೆಯರು, ಮಕ್ಕಳ ಮೇಲಿನ ಅತ್ಯಾಚಾರ ತಡೆಗಟ್ಟಲು ಮತ್ತು ಸ್ವಯಂರಕ್ಷಣೆ ಪಡೆಯಲು ಆ್ಯಂಟಿ ರೇಪ್ ಫುಟ್‌ವೇರ್ ಅನ್ನು ವಿಜಯಲಕ್ಷ್ಮೀ ಜಮಾದರ್ ಎಂಬ ವಿದ್ಯಾರ್ಥಿನಿ ಆವಿಷ್ಕಾರ ಮಾಡಿದ್ದಾಳೆ. ಕಲಬುರಗಿ ನಗರದ ಎಸ್‌ಆರ್‌ಎನ್ ಮೆಹ್ತಾ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ, ಮಹಿಳೆಯರ ಮೇಲಿನ ಅತ್ಯಾಚಾರ ತಡೆಗಟ್ಟಲು ಸತತ ಪ್ರಯತ್ನದಿಂದ ಈ ಆ್ಯಂಟಿ ರೇಪ್ ಫುಟ್‌ವೇರ್ ಕಂಡು ಹಿಡಿದಿದ್ದಾಳೆ.

ಇದನ್ನೂ ಓದಿ | Sexual Assault | ತಡ ರಾತ್ರಿ ರ‍್ಯಾಪಿಡೋ ಬುಕ್‌ ಮಾಡಿದ್ದ ಯುವತಿ; ಚಾಲಕ, ಮತ್ತವನ ಸ್ನೇಹಿತನಿಂದ ರೇಪ್‌

ಈ ಚಪ್ಪಲಿ ಧರಿಸಿದವರ ಮೇಲೆ ಅತ್ಯಾಚಾರಿ ಎರಗಿದರೆ, ಎದುರಾಳಿಗೆ ಕ್ಷಣಾರ್ಧದಲ್ಲಿ ಚಪ್ಪಲಿಯಿಂದ ಶಾಕ್ ತಗುಲುತ್ತದೆ. ಇದರಿಂದ ವ್ಯಕ್ತಿ ಬೆಚ್ಚಿಬಿದ್ದು ಸಾವರಿಸಿಕೊಳ್ಳುವುದರೊಳಗೆ ಅಪಾಯಕ್ಕೆ ಸಿಲುಕಿದ ಮಹಿಳೆ ಅಲ್ಲಿಂದ ಪರಾರಿಯಾಗಬಹುದು. ಇದಕ್ಕಾಗಿಯೇ ಚಪ್ಪಲಿ ಕೆಳಭಾಗದಲ್ಲಿ ಬ್ಯಾಟರಿ ಸೆಲ್ ಅನ್ನು ಬಳಸಲಾಗಿದ್ದು, ಮಹಿಳೆ ಈ ಚಪ್ಪಲಿಗಳನ್ನು ಧರಿಸಿ ನಡೆಯುವವಾಗಲೇ ಇಲ್ಲಿನ ಬ್ಯಾಟರಿಗಳು ಚಾರ್ಜ್ ಆಗುತ್ತವೆ. ಇದರ ಜತೆಗೆ ರಿಮೋಟ್ ಸಹ ಇಡಲಾಗಿದ್ದು, ಪಾದದ ಹೆಬ್ಬೆರಳು ಜಾಗದಲ್ಲಿ ಚಿಕ್ಕ ಬಟನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಆ ಬಟನ್ ಅನ್ನು ಬೆರಳಿನಿಂದಲೇ ಒತ್ತಿದರೆ ಸಾಕು 0.5 ಆಂಪಿಯರ್‌ನಷ್ಟು ವಿದ್ಯುತ್‌ ಶಕ್ತಿ ಉತ್ಪತ್ತಿಯಾಗಿ ಸಂಪರ್ಕಕ್ಕೆ ಬರುವ ಕಾಮುಕರಿಗೆ ಚಪ್ಪಲಿಯು ವಿದ್ಯುತ್‌ ಆಘಾತ ನೀಡಲಿದೆ.

ಈ ಸ್ಮಾರ್ಟ್‌ ಫುಟ್‌ವೇರ್‌ನಲ್ಲಿ ಬ್ಲಿಂಕ್ ಆ್ಯಪ್ ಲಿಂಕ್ ತಂತ್ರಜ್ಞಾನ ಅಳವಡಿಸಲಾಗಿದೆ‌‌. ತೊಂದರೆಯಲ್ಲಿರುವ ಮಹಿಳೆ ಹೆಬ್ಬರಳಿನ ಬಳಿಯ ಬಟನ್‌ ಒತ್ತಿದರೆ ಸಾಕು, ಕರೆಂಟ್‌ ಉತ್ಪತ್ತಿ ಆಗುವುದರ ಜತೆಗೆ ಲೈವ್ ಲೊಕೇಶನ್ ಸಹಿತ ರಕ್ಷಣೆ ಕೋರುವ ಸಂದೇಶವು ಆ್ಯಪ್‌ನಲ್ಲಿ ಮೊದಲೇ ದಾಖಲುಗೊಂಡಿರುವ ಸಂಪರ್ಕ ಸಂಖ್ಯೆಗಳಿಗೆ ರವಾನೆಯಾಗುತ್ತದೆ. ಇದಕ್ಕಾಗಿ ಮಹಿಳೆ ತನ್ನ ಪೋಷಕರು, ಬಂಧುಗಳು, ತಮ್ಮ ಪ್ರದೇಶದ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆಗಳನ್ನು ಬ್ಲಿಂಕ್ ಆ್ಯಪ್‌ನಲ್ಲಿ ದಾಖಲಿಸಿದರೆ ಸಾಕು. ಏಕಕಾಲಕ್ಕೆ ಎಲ್ಲರಿಗೂ ತಾನು ತೊಂದರೆಯಲ್ಲಿರುವ ಲೈವ್ ಲೊಕೇಶನ್ ರವಾನೆ ಆಗುತ್ತದೆ.

ಈ ವಿಶಿಷ್ಟ ಚಪ್ಪಲಿ ಮಾದರಿ ಆವಿಷ್ಕಾರಕ್ಕಾಗಿ ಗೋವಾದಲ್ಲಿ ನಡೆದಿದ್ದ ಇಂಡಿಯಾ ಇಂಟರ್‌ನ್ಯಾಷನಲ್ ಮತ್ತು ಇನ್ನೋವೇಷನ್ ಎಕ್ಸ್‌ಪೋದಲ್ಲಿ ಜಗತ್ತಿನ ವಿವಿಧ ದೇಶಗಳಿಂದ ಬಂದಿದ್ದ 26 ಮಾದರಿಗಳ ಪೈಕಿ ವಿಜಯಲಕ್ಷ್ಮಿಬೆಳ್ಳಿ ಪದಕ ಪಡೆದುಕೊಂಡಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲೆಯ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Pocso case | ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಹೈಸ್ಕೂಲ್‌ ವಿದ್ಯಾರ್ಥಿನಿ ಗರ್ಭಿಣಿ: ಇಬ್ಬರು ಯುವಕರ ಸೆರೆ

Exit mobile version