ಬೆಂಗಳೂರು: ರಾಜ್ಯ ಸರ್ಕಾರ ಘೋಷಣೆ ಮಾಡಿರುವ, ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡುವ ಗೃಹ ಲಕ್ಷ್ಮಿ ಯೋಜನೆಗೆ (Gruhalakshmi Scheme) ಅರ್ಜಿ ಸಲ್ಲಿಸಲು ಅನುಕೂಲವಾಗುವ ಸೇವಾಸಿಂಧು ಪೋರ್ಟಲ್ (Sewa sindhu Portal) ಮತ್ತು ಆ್ಯಪ್ (Gruhalakshmi App) ಎರಡೂ ಸಿದ್ಧವಾಗಿದೆ. ಇದನ್ನು ಯಾವುದೇ ಕ್ಷಣ ಘೋಷಿಸುವ ಸಾಧ್ಯತೆ ಇದ್ದು, ಬಳಿಕ ಮಹಿಳೆಯರು ಯಾವುದೇ ತೊಂದರೆ ಇಲ್ಲದೆ ಅರ್ಜಿ ಸಲ್ಲಿಸಬಹುದು.
ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು (Congress Guarantee) ಪ್ರಕಟಿಸಿದ್ದು ಅದರಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಜೂನ್ 11ರಿಂದಲೇ ಜಾರಿಯಾಗಿದೆ. ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಅರ್ಜಿ ನೋಂದಣಿ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದ್ದು ಸುಮಾರು 70 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.
ಈ ನಡುವೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಾವುದೇ ಅಡೆತಡೆ ಇಲ್ಲದೆ ನಡೆಯಬೇಕು ಎಂಬ ಕಾರಣಕ್ಕಾಗಿ ಜೂನ್ 16ರಂದೇ ಆರಂಭವಾಗಬೇಕಾಗಿದ್ದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮುಂದಕ್ಕೆ ಹಾಕಲಾಗಿತ್ತು. ಸೇವಾ ಸಿಂಧು ಪೋರ್ಟಲ್‌ನಲ್ಲಿ ಗೃಹ ಜ್ಯೋತಿ ಅರ್ಜಿ ಸ್ವೀಕಾರ ನಡೆಯುತ್ತಿರುವುದರಿಂದ ಹೆಚ್ಚುವರಿಯಾಗಿ ಒಂದು ಹೊಸ ಆಪ್ ಸಿದ್ಧಪಡಿಸಿ ಅರ್ಜಿ ಸ್ವೀಕರಿಸಬಹುದು ಎಂಬ ಸಲಹೆ ನೀಡಲಾಗಿದೆ.
ಇದೀಗ ಸೇವಾ ಸಿಂಧು ಪೋರ್ಟಲ್ ಮತ್ತು ಆಪ್ ಎರಡೂ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕಾರಕ್ಕೆ ರೆಡಿಯಾಗಿದೆ. ಬುಧವಾರ ನಡೆಯುತ್ತಿರುವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ. ಅನುಮತಿ ಸಿಕ್ಕರೆ ಜೂನ್ 29 ಇಲ್ಲವೇ ಜುಲೈ 1ರಿಂದಲೇ ಅರ್ಜಿ ಸ್ವೀಕಾರಕ್ಕೆ ಅವಕಾಶ ನೀಡುವ ಸಾಧ್ಯತೆಗಳು ಇವೆ.
APP Download ಮಾಡಿಕೊಳ್ಳುವುದು ಹೇಗೆ?
ಗೃಹಲಕ್ಷ್ಮಿ ಆ್ಯಪ್ ಈಗಾಗಲೇ ಸಿದ್ಧವಾಗಿದ್ದು ಮೊಬೈಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಪ್ಲೇ ಸ್ಟೋರ್‌ಗೆ ಹೋಗಿ ನೀವು ಗೃಹಲಕ್ಷ್ಮಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಅರ್ಜಿ ಸಲ್ಲಿಕೆ ವಿಧಾನಗಳು, ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳ ವಿವರವನ್ನು ಪಡೆಯಬಹುದು. ಒಮ್ಮೆ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದ ಬಳಿಕ ಇದು ಚಾಲನೆ ಪಡೆದುಕೊಳ್ಳಲಿದೆ.
ಮೊಬೈಲ್ ಆ್ಯಪ್ ಮಾತ್ರವಲ್ಲದೆ, ಸೇವಾಸಿಂಧು ವೆಬ್‌ಸೈಟ್‌ನಲ್ಲಿ ಕೂಡ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ನೀಡುವಂತಿಲ್ಲ ಎಂದು ಈಗಾಗಲೇ ಸರ್ಕಾರ ಹೇಳಿದೆ.
ಆ್ಯಪ್‌ನಲ್ಲಿ ಏನೇನು ಮಾಹಿತಿ ಇದೆ?
ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಲಿಂಕ್
ಗೃಹ ಲಕ್ಷ್ಮಿ ಯೋಜನೆಯ ಫಾರಂ
ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ವಿವರಣೆ
ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ವಿವರಣೆ
2000 ರೂ. ಯಾರಿಗೆ ಸಿಗಲಿದೆ?
-ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿಗೆ ಸಿಗಲಿದೆ.
– ಮನೆಯಲ್ಲಿ ಒಬ್ಬರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯಡಿ ಹಣ ಸಿಗಲಿದೆ. ಯಾರು ಎನ್ನುವುದನ್ನು ಮನೆಯವರೇ ನಿರ್ಧಾರ ಮಾಡಬೇಕು.
– ಬ್ಯಾಂಕ್ ಖಾತೆ ಜೊತೆ ಲಿಂಕ್ ಆಗಿರುವ ಮೊಬೈಲ್ ನಂಬರ್, ಆಧಾರ್ ನಂಬರ್, ಕಡ್ಡಾಯವಾಗಿ ಬೇಕಾಗುತ್ತದೆ.
-ಮನೆಯೊಡತಿಯ ಗಂಡ ಆದಾಯ ತೆರಿಗೆ ಪಾವತಿದಾರನಾಗಿದ್ದರೆ ಅಂತಹವರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ. (ಈ ಬಗ್ಗೆ ಅಧಿಕೃತ ಮಾಹಿತಿ ಯೋಜನೆ ಘೋಷಣೆಯಾದ ಬಳಿಕ ಸಿಗಲಿದೆ)
ಅರ್ಜಿ ಸಲ್ಲಿಸಲು ಹೊರಡುವ ಮುನ್ನ ಈ ದಾಖಲೆಗಳನ್ನು ರೆಡಿ ಮಾಡಿಕೊಳ್ಳಿ
1. ಆಧಾರ್ ಕಾರ್ಡ್: ಇದು ನಿಮ್ಮ ಪ್ರಮುಖ ಗುರುತಿನ ಚೀಟಿ
2. ಮೊಬೈಲ್ ನಂಬರ್
3 ರೇಷನ್ ಕಾರ್ಡ್: ನೀವು ಅಂತ್ಯೋದಯ ಕಾರ್ಡ್‌ದಾರರೇ? ಬಿಪಿಎಲ್ ಅಥವಾ ಎಪಿಎಲ್ ಎನ್ನುವುದನ್ನು ನಿರ್ಧರಿಸಲಿದೆ.
4. ಈಗಿರುವ ಮನೆ ವಿಳಾಸ: ಈಗ ವಾಸವಾಗಿರುವ ಮನೆಗೆ ಸಂಬಂಧಿಸಿದ ಸ್ಪಷ್ಟ ವಿಳಾಸ.
5. ಬ್ಯಾಂಕ್ ಅಕೌಂಟ್ ವಿವರ: ಯಾವ ಖಾತೆಗೆ ಹಣ ಹಾಕಬೇಕೋ ಆ ಖಾತೆಯ ಸ್ಪಷ್ಟ ವಿವರ
6. ಪಾನ್ ಕಾರ್ಡ್ ಕೇಳುವ ಸಾಧ್ಯತೆಗಳಿವೆ.