ತುಮಕೂರು: ವಿದ್ಯುತ್ ದರ ಹೆಚ್ಚಳ, ಅಪರಿಮಿತ ಲೋಡ್ ಶೆಡ್ಡಿಂಗ್‌ನಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ ನಷ್ಟದ ಪ್ರಮಾಣ ಹೆಚ್ಚಾಗಿ ಹಲವು ಕೈಗಾರಿಕೆಗಳು ಮುಚ್ಚುತ್ತಿವೆ. ಈ ಅನ್ಯಾಯದ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆದು, ಸಮಸ್ಯೆಗಳನ್ನು ಪರಿಹರಿಸಬೇಕು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರಿಗೆ ಟಿ.ಜಿ.ಗಿರೀಶ್ ನೇತೃತ್ವದಲ್ಲಿ ಕೈಗಾರಿಕೋದ್ಯಮಿಗಳು ಮನವಿ ಸಲ್ಲಿಸಿದರು.
ನಗರದ ಕೆ.ಎಸ್.ಎಫ್.ಸಿ ಆವರಣದಲ್ಲಿ ಕೈಗಾರಿಕೋದ್ಯಮಿಗಳ ಜತೆ ಸಂವಾದದಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು, ತುಮಕೂರು ಕೈಗಾರಿಕೆಯಲ್ಲಿ ಬಹಳಷ್ಟು ಅಭಿವೃದ್ಧಿ ಆಗುತ್ತಿರುವ ಜಿಲ್ಲೆಯಾಗಿದೆ. ಚೇಂಬರ್ ಆಫ್ ಕಾಮರ್ಸ್‌ನ ಮುಖಂಡರು ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿದ್ದಾರೆ. ವಿದ್ಯುತ್ ಅಭಾವ, ಕುಡಿಯುವ ನೀರಿನ ಸಮಸ್ಯೆ, ದುಡಿಯುವ ಕೈಗಳಿಗೆ ಕೆಲಸ ಇಲ್ಲ. ಇಂತಹ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಇಬ್ಬರು ಸಚಿವರು, ಸಮಸ್ಯೆ ತಿಳಿದುಕೊಂಡು ಸ್ಥಳದಲ್ಲೆ ಬಗೆಹರಿಸುವ ಕೆಲಸ ಮಾಡಬೇಕಿತ್ತು. ಸರ್ಕಾರ ಬದುಕಿದ್ದು ಸತ್ತಂತಿದೆ ಎಂದು ಕಿಡಿಕಾರಿದರು.
ನಾವು ಬರ ಅಧ್ಯಯನ ಮಾಡುತ್ತೇವೆ ಎಂದಾಗ, ಡಿಕಿಶಿ, ಸಿ.ಎಂ ಹಗುರವಾಗಿ ಮಾತನಾಡಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಮತ್ತೊಂದು ಕಡೆ ವಿದ್ಯುತ್ ಬೆಲೆ ಏರಿಕೆ ಮಾಡಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕೇಂದ್ರ ತಂಡ ಬರ ಅಧ್ಯಯನ ನಡೆಸಿದೆ, ಪರಿಹಾರ ಕೊಟ್ಟೆ ಕೊಡುತ್ತಾರೆ. ನಾವು ಅಧಿಕಾರದಲ್ಲಿದ್ದಾಗ ಅತಿವೃಷ್ಟಿ ಹಾಗೂ ಅನಾವೃಷ್ಟಿ ಆದರೆ, ಕೇಂದ್ರ ಸರ್ಕಾರ ಅನುದಾನ ಕೊಡಲಿ ಅಂತಾ ಕಾಯುತ್ತಾ ಕೂರುತ್ತಿರಲಿಲ್ಲ. ನಾವೇ ಎಲ್ಲವನ್ನೂ ಬಗೆಹರಿಸುತ್ತಿದ್ದೆವು. ನಂತರ ಕೇಂದ್ರ ಸರ್ಕಾರದಿಂದ ಹಣ ಬಂದಾಗ ಸರಿದೂಗಿಸಿಕೊಳ್ಳುತ್ತಿದ್ದೆವು ಎಂದು ಹೇಳಿದರು.
ಇದನ್ನೂ ಓದಿ | CM Siddaramaiah : ಬರ ಸಂಕಷ್ಟದ ನಡುವೆ ಸಿಎಂ ನಿವಾಸದ ನವೀಕರಣಕ್ಕೆ ಕೋಟಿ ಕೋಟಿ ಖರ್ಚು! ಬೇಕಿತ್ತಾ ದುಂದು ವೆಚ್ಚ?
ಮಾಜಿ ಸಚಿವ ಬಿ.ಸಿ.ನಾಗೇಶ್, ಮಾಜಿ ಸಂಸದ ಮುದ್ದಹನುಮೇಗೌಡ, ಶಾಸಕರಾದ ಜ್ಯೋತಿಗಣೇಶ್, ಸುರೇಶ್ ಗೌಡ ಮತ್ತಿತರರು ಇದ್ದರು.
ಗುಬ್ಬಿಯಲ್ಲಿ ಬಿಎಸ್‌ವೈ ಬರ ಅಧ್ಯಯನ
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಕೊಡಿಯಾಲ ಗೇಟ್ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬರ ಪರಿಸ್ಥಿತಿ ವೀಕ್ಷಿಸಿದರು. ಸಿ.ಎಸ್.ಬಸವರಾಜ್ ಮತ್ತು ರಾಜಶೇಖರಯ್ಯ ಜಮೀನಿನಲ್ಲಿ ಬರ ವೀಕ್ಷಣೆ ಮಾಡಲಾಯಿತು. ಈ ವೇಳೆ ಯಡಿಯೂರಪ್ಪ ಕಾಲಿಗೆ ಬಿದ್ದು ರೈತರು, ಅಳಲು ತೋಡಿಕೊಂಡರು. ಮಳೆ ಕೊರತೆಯಿಂದ ಬೆಳೆ ನಷ್ಟವಾಗಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದ್ದು, ರಾಜ್ಯ ಸರ್ಕಾರದಿಂದ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ