Site icon Vistara News

MB Patil: ಉಪಜಾತಿಗಳ ಮೀಸಲಾತಿ ಗೊಂದಲ ಬಗೆಹರಿಸಲು ಸಿಎಂಗೆ ಮನವಿ: ಎಂ.ಬಿ. ಪಾಟೀಲ್‌

Minister MB Patil

ಬೆಂಗಳೂರು: ಒಂದೇ ಜಾತಿಗೆ ಸೇರಿದ ಉಪಜಾತಿಗಳಿಗೆ ಮೀಸಲು ಸೌಲಭ್ಯ ಸಿಗುವುದಕ್ಕೆ ಸಂಬಂಧಿಸಿದಂತೆ ಗೊಂದಲಗಳಿವೆ. ಇದನ್ನು ಸರಿಪಡಿಸಿ ಎಂದಷ್ಟೇ ನಾವು ಮುಖ್ಯಮಂತ್ರಿಯವರಲ್ಲಿ ಕೇಳಿಕೊಂಡಿದ್ದೇವೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಸೋಮವಾರ ಸ್ಪಷ್ಟಪಡಿಸಿದರು.

ವೈಜ್ಞಾನಿಕ ಜಾತಿಗಣತಿಗಾಗಿ ಆಗ್ರಹಿಸಿ ‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ’ ವತಿಯಿಂದ ನೀಡಲಾಗಿರುವ ಮನವಿಗೆ ಸಹಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇರುವ ಸಮಸ್ಯೆಗಳನ್ನು ಗಮನಕ್ಕೆ ತರುವುದರಲ್ಲಿ ಯಾವುದೇ ತಪ್ಪು ಇಲ್ಲ. ಉದಾಹರಣೆಗೆ, ಲಿಂಗಾಯತರಲ್ಲಿ ಗಾಣಿಗ, ಸಾದರ ಹೀಗೆ 50ಕ್ಕೂ ಹೆಚ್ಚು ಉಪಜಾತಿಗಳು ಇದ್ದು ಅವರಿಗೆ ಲಿಂಗಾಯತ-ಗಾಣಿಗ, ಲಿಂಗಾಯತ- ಸಾದರ ಎಂದು ನಮೂದಿಸಿದ್ದರೆ 2ಎ ಪ್ರವರ್ಗದಡಿ ಮೀಸಲಾತಿ ಸಿಗುವುದಿಲ್ಲ. ಈ ಕಾರಣಕ್ಕೆ ಅವರೆಲ್ಲ ಹಿಂದು-ಗಾಣಿಗ ಹಿಂದು-ಸಾದರ ಎಂದು ನಮೂದಿಸಿಕೊಳ್ಳುತ್ತಾರೆ. ಇಂತಹ ಸಮಸ್ಯೆಗಳನ್ನು ಸರಿಪಡಿಸಲು ನಾವು ಮುಖ್ಯಮಂತ್ರಿ ಅವರನ್ನು ಕೋರಿದ್ದೇವೆ. ಈ ತೊಂದರೆಗಳ ಬಗ್ಗೆ ಅವರಿಗೂ ಗೊತ್ತಿದೆ ಎಂದು ವಿವರಿಸಿದರು.

ಇಂತಹ ತೊಡಕುಗಳು ಒಕ್ಕಲಿಗ ಜನಾಂಗ ಸೇರಿದಂತೆ ಬೇರೆ ಸಮುದಾಯಗಳಿಗೂ ಇರಬಹುದು. ಇದ್ದರೆ, ಅವನ್ನು ಕೂಡ ಸರಿಪಡಿಸುವುದರಲ್ಲಿ ತಪ್ಪೇನಿಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ | ವಿಧಾನಸೌಧ ರೌಂಡ್ಸ್‌: ಬಿಜೆಪಿ ಶಾಸಕರಲ್ಲಿ ಇಲ್ಲ ಒಗ್ಗಟ್ಟು, ಕಾಂಗ್ರೆಸ್‌ಗೆ ತಪ್ಪಿತು ಇಕ್ಕಟ್ಟು!

ಕಾಂಗ್ರೆಸಿನಲ್ಲಿ ‘ಒಬ್ಬ ವ್ಯಕ್ತಿ, ಒಂದು ಹುದ್ದೆ’ ನೀತಿ ಅನುಸರಿಸುವ ಸಾಧ್ಯತೆ ಬಗ್ಗೆ ಕೇಳಿದಾಗ, ಅದರ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಬೇರೆಯವರಿಗೂ ಅವಕಾಶ ಸಿಗಲಿ ಎಂಬ ಕಾರಣಕ್ಕೆ ವರಿಷ್ಠರು ತೀರ್ಮಾನ ತೆಗೆದುಕೊಂಡಾಗ ಅದಕ್ಕೆ ತಕ್ಕಂತೆ ನಾವು ನಡೆದುಕೊಳ್ಳಬೇಕಾಗುತ್ತದೆ ಎಂದರು.

ಜಾತಿ ಗಣತಿ ವಿರೋಧಕ್ಕೆ ಸಹಿ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರೂ ಮುಚ್ಚು ಮರೆ ಇಲ್ಲ, ಎಲ್ಲರೂ ಮಾಡಿರುವುದೇ ಇದು. ನಾವು ಜಾತಿಗಣತಗೆ ವಿರೋಧ ಮಾಡುತ್ತಿಲ್ಲ, ಲಿಂಗಾಯತ ಸಮುದಾಯಗಳನ್ನೆಲ್ಲಾ ಒಟ್ಟಿಗೆ ಕೌಂಟ್ ಮಾಡಿ ಜನಸಂಖ್ಯೆ ನಿರ್ಧಾರ ಮಾಡಬೇಕು. ವರದಿ ವಿರೋಧಿಸಿ ಅಲ್ಲ, ಈ ಗೊಂದಲ‌ ಸರಿಪಡಿಸಿ ಅಂತ ನಮ್ಮ ವಾದವಾಗಿದೆ ಎಂದು ಸಚಿವರು ತಿಳಿಸಿದರು.

ಸಮೀಕ್ಷೆಯನ್ನು ಜಾತಿಗಣತಿ ಅಂತ ಹೇಳಲು ಬರಲ್ಲ. ಜಾತಿಗಣತಿ ಮಾಡೋದು ಕೇಂದ್ರ ಸರ್ಕಾರ. ಇರುವ ಡೇಟಾದಲ್ಲೇ ಗೊಂದಲ ಸರಿಮಾಡಬಹುದಲ್ಲವೇ? ಸಿಎಂ ಮೇಲೆ ವಿಶ್ವಾಸ ಇದೆ, ಸರಿಪಡಿಸುತ್ತಾರೆ ಎಂದು ಹೇಳಿದರು.

ಸಿಎಂ ಭೇಟಿಗೆ ಪ್ರಧಾನಿ ಕಾಲಾವಕಾಶ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ವರ್ಷಾನುಗಟ್ಟಲೆ ಅವಕಾಶ ಕೊಟ್ಟಿರಲಿಲ್ಲ. ರಾಜ್ಯದ ಸಮಸ್ಯೆಗಳು, ಅನುದಾನದ ಬಗ್ಗೆ ಚರ್ಚೆ ಮಾಡುವುದಕ್ಕೆ ಹೋದಾಗ ಅವಕಾಶ ಕೊಟ್ಟಿರಲಿಲ್ಲ. ಈಗ ಕೊನೆ ಗಳಿಗೆಯಲ್ಲಿ ಅವಕಾಶ ಕೊಟ್ಟಿದ್ದಾರೆ. ಇನ್ನೂ ಸ್ವಲ್ಪ ದಿನ ಬಿಟ್ಟು ಅವಕಾಶ ಕೊಟ್ಟಿದ್ದರೆ ಚುನಾವಣಾ ನೀತಿ ಸಂಹಿತೆ ಬರುತ್ತಿತ್ತು. ವಿರೋಧ ಪಕ್ಷದ ಮುಖ್ಯಮಂತ್ರಿಗಳಿರಬಹುದು, ಸ್ವಪಕ್ಷದ ಮುಖ್ಯಮಂತ್ರಿಗಳಿರಬಹುದು. ಈ ರೀತಿ ಕಡೆಗಣಿಸಿರುವ ಇತಿಹಾಸವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೀಕಿಸಿದರು.

ಇದನ್ನೂ ಓದಿ | ಇನ್ನೆರಡೇ ದಿನಕ್ಕೆ ನಿಗಮ ಮಂಡಳಿ ಪಟ್ಟಿ ಪ್ರಕಟ? ಅಂತಿಮ ಮಾಡಿಸಿಕೊಂಡು ಬರುತ್ತೇವೆಂದ ಡಿ.ಕೆ. ಶಿವಕುಮಾರ್

ಈ ಹಿಂದೆ ವಾಜಪೇಯಿ, ಮನಮೋಹನ್ ಸಿಂಗ್, ರಾಜೀವ್ ಗಾಂಧಿ ಯಾರೂ ಈ ರೀತಿ ನಡೆಸಿಕೊಂಡಿರಲಿಲ್ಲ. ಈ ರೀತಿಯಾಗಿ ಮುಖ್ಯಮಂತ್ರಿಗಳನ್ನು ನಡೆಸಿಕೊಂಡಿಲ್ಲ. ಪ್ರಧಾನಿ ವಿರೋಧ ಪಕ್ಷಗಳ ಮುಖ್ಯಮಂತ್ರಿಗಳನ್ನು ಕಡೆಗಣಿಸುತ್ತಾರೆ. ಆ ರಾಜ್ಯಗಳು ಅಭಿವೃದ್ಧಿ ಹೊಂದಬಾರದು, ಅನುದಾನ ಸಿಗಬಾರದು ಅಂತ ಅವರ ಮನಸ್ಥಿತಿ ಇದ್ದಂತೆ ಕಾಣುತ್ತಿದೆ ಎಂದು ಹೇಳಿದರು.

Exit mobile version