ಬೆಂಗಳೂರು: ಮಠದ ಹಾಸ್ಟೆಲ್‌ನಲ್ಲಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೋಕ್ಸೊ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗ ಬ್ರಹನ್ಮಠದ ಶಿವಮೂರ್ತಿ ಮುರುಘಾ ಶರಣರನ್ನು (Murugha seer case) ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘಾರಾಜೇಂದ್ರ (ಎಸ್‌ಜೆಎಂ) ಮಠ ಮತ್ತು ಅದರ ಸಂಬಂಧಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡದಂತೆ ನಿರ್ಬಂಧಿಸಿರುವುದನ್ನು ಪ್ರಶ್ನಿಸಿರುವ ಅರ್ಜಿ ವಿಚಾರಣೆಯನ್ನು ಸಾಮಾನ್ಯ ಇತರ ಪ್ರಕರಣಗಳ ವಿಚಾರಣೆ ನಡೆಸುವ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ಚಿತ್ರದುರ್ಗದ ವಿಶೇಷ ನ್ಯಾಯಾಲಯವು ತಮ್ಮನ್ನು ಎಸ್‌ಜೆಎಂ ಮಠ ಮತ್ತು ಅದರ ಸಂಬಂಧಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸದಂತೆ ನಿರ್ಬಂಧಿಸಿ ಆದೇಶಿಸಿರುವುದನ್ನು ಪ್ರಶ್ನಿಸಿ ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಕೆ. ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ನಿಗದಿಯಾಗಿತ್ತು.
ಈ ವೇಳೆ ನ್ಯಾ. ನಟರಾಜನ್ ಅವರು ಮುರುಘಾ ಮಠಕ್ಕೆ ರಾಜ್ಯ ಸರ್ಕಾರವು ಆಡಳಿತಾಧಿಕಾರಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸಾಮಾನ್ಯ ಮಿಸಲೇನಿಯಸ್ ಪ್ರಕರಣಗಳ ಪೀಠ ನಡೆಸುತ್ತಿದೆ. ಹೀಗಾಗಿ, ಈ ಅರ್ಜಿಯನ್ನೂ ಆ ಪೀಠದ ಮುಂದೆ ನಿಗದಿಪಡಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಅಲ್ಲಿನ ಪ್ರಕರಣದ ಜೊತೆ ಸೇರ್ಪಡೆ ಮಾಡಲು ಆದೇಶಿಸಿದರು.
ಧಾರ್ಮಿಕ ಸಂಸ್ಥೆ (ದುರ್ಬಳಕೆ ನಿಯಂತ್ರಣ) ಕಾಯಿದೆ 1988ರ ಸೆಕ್ಷನ್ 8(2) ಅಡಿ ಮರುಘಾ ಶರಣರು ಮಠ ಮತ್ತು ಸಂಬಂಧಿತ ಸಂಸ್ಥೆಗಳ ಕರ್ತವ್ಯ ನಿರ್ವಹಿಸದಂತೆ ವಿಶೇಷ ನ್ಯಾಯಾಲಯಕ್ಕೆ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣಾಧೀನ ನ್ಯಾಯಾಲಯವು ಮಾನ್ಯ ಮಾಡಿತ್ತು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ಧಾರ್ಮಿಕ ಸಂಸ್ಥೆ (ದುರ್ಬಳಕೆ ನಿಯಂತ್ರಣ) ಕಾಯಿದೆ 1988ರ ಸೆಕ್ಷನ್ 3(ಎಫ್) ಅಡಿ ಆರೋಪದ ಕುರಿತು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿಲ್ಲ. ಹೀಗಾಗಿ, ಪೊಲೀಸರು ಕಾಯಿದೆಯ ಸೆಕ್ಷನ್ 8(2) ಅನ್ನು ಅನ್ವಯಿಸಿರುವುದಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಇದರಿಂದಾಗಿ ಆಕ್ಷೇಪಾರ್ಹವಾದ ಆದೇಶವನ್ನು ವಜಾ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಈ ಅರ್ಜಿಯನ್ನು ಈಗ ಬೇರೆ ಪೀಠಕ್ಕೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ : Murugha Seer: ಮುರುಘಾಶ್ರೀ 2ನೇ ಪೋಕ್ಸೊ ಪ್ರಕರಣ; ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ ಪೊಲೀಸರು