ಬೆಂಗಳೂರು: ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸಿನ ಮೇರೆಗೆ ಕರ್ನಾಟಕ ಹೈಕೋರ್ಟ್‌ಗೆ ಸದ್ಯ ರಿಜಿಸ್ಟ್ರಾರ್ ಜನರಲ್ ಆಗಿರುವ ಟಿ.ಜಿ.ಶಿವಶಂಕರೇಗೌಡ ಸೇರಿ ಐವರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಹೈಕೋರ್ಟ್‌ನಲ್ಲಿ ಈಗ ರಿಜಿಸ್ಟ್ರಾರ್ ಜನರಲ್ ಆಗಿರುವ ಟಿ.ಜಿ.ಶಿವಶಂಕರೇಗೌಡ, ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾಗಿರುವ ಚಂದ್ರಶೇಖರ ಮೃತ್ಯುಂಜಯ ಜೋಶಿ, ನಿವೃತ್ತ ನ್ಯಾಯಾಧೀಶ ಅನಿಲ್ ಭೀಮಸೇನ ಕಟ್ಟಿ, ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿರುವ ಗುರುಸಿದ್ದಯ್ಯ ಬಸವರಾಜ, ರಾಜ್ಯ ಕೈಗಾರಿಕಾ ನ್ಯಾಯ ಮಂಡಳಿಯ ಮೇಲುಸ್ತುವಾರಿ ಅಧಿಕಾರಿ ಹಾಗೂ ಹಿಂದಿನ ಧಾರವಾಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿದ್ದ ಉಮೇಶ್ ಮಂಜುನಾಥ್ ಭಟ್ ಅಡಿಗ ಅವರನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ | ಬೊಮ್ಮಾಯಿ ನೇತೃತ್ವದಲ್ಲೇ 2023ರ ಚುನಾವಣೆ: ಬಿಜೆಪಿ ಹೈಕಮಾಂಡ್ ಘೋಷಣೆ, ಎಲ್ಲ ಗೊಂದಲಕ್ಕೆ ತೆರೆ
ನ್ಯಾ. ಅನಿಲ್ ಕಟ್ಟಿ ಅವರು ತಾವು ಅಧಿಕಾರ ವಹಿಸಿಕೊಳ್ಳುವ ದಿನದಿಂದ 2024ರ ಏಪ್ರಿಲ್ 16ರವರೆಗೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿರಲಿದ್ದಾರೆ. ನ್ಯಾಯಾಧೀಶರಾದ ಜಿ.ಬಸವರಾಜ, ಚಂದ್ರಶೇಖರ ಮೃತ್ಯುಂಜಯ ಜೋಶಿ, ಉಮೇಶ್ ಮಂಜುನಾಥ್ ಭಟ್ ಅಡಿಗ ಮತ್ತು ಟಿ.ಜಿ.ಶಿವಶಂಕರೇಗೌಡ ಅವರು ಅಧಿಕಾರವಹಿಸಿಕೊಂಡ ದಿನದಿಂದ ಎರಡು ವರ್ಷಗಳವರೆಗೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸಂವಿಧಾನದ 224ನೇ ವಿಧಿಯ ಕಲಂ (1)ರ ಅಡಿ ದೊರೆತಿರುವ ಅಧಿಕಾರ ಬಳಸಿ ರಾಷ್ಟ್ರಪತಿಗಳು ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಐವರು ನ್ಯಾಯಾಧೀಶರನ್ನು ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಜುಲೈ 19ರಂದು ನಡೆದ ಸಭೆಯಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಐವರ ಸೇರ್ಪಡೆಯೊಂದಿಗೆ ನ್ಯಾಯಮೂರ್ತಿಗಳ ಸಂಖ್ಯೆಯು 49ಕ್ಕೆ ಏರಿಕೆಯಾಗಿದೆ. ಹೈಕೋರ್ಟ್‌ನಲ್ಲಿ ಒಟ್ಟು 62 ನ್ಯಾಯಮೂರ್ತಿ ಸ್ಥಾನಗಳಿವೆ.
ಇದನ್ನೂ ಓದಿ | ನೂಪುರ್ ಶರ್ಮಾ ಮನವಿಗೆ ಸುಪ್ರೀಂಕೋರ್ಟ್ ಮನ್ನಣೆ; ಎಫ್ಐಆರ್ ವರ್ಗಾಯಿಸಲು ಸಮ್ಮತಿ