ಬೆಂಗಳೂರು: ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಭೌತಿಕ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿಗೆ ಒಬ್ಬರಂತೆ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯನ್ನು ತಾಲೂಕು ಉಸ್ತುವಾರಿ ಅಧಿಕಾರಿಗಳನ್ನಾಗಿ (Taluk In charge Officer) ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಕಲ್ಪನ ಅವರು ಅಧಿಸೂಚನೆ ಹೊರಡಿಸಿದ್ದು, ತಾಲೂಕು ಉಸ್ತುವಾರಿ ಅಧಿಕಾರಿಗಳನ್ನು ತಕ್ಷಣದಿಂದ ಜಾರಿ ಬರುವಂತೆ, ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.
ಇದನ್ನೂ ಓದಿ | ಜನರ ಸಮಸ್ಯೆ ಆಲಿಸಲು ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ
ತಾಲೂಕು ಉಸ್ತುವಾರಿ ಅಧಿಕಾರಿಗಳು ನಿರ್ವಹಿಸಬೇಕಾದ ಕಾರ್ಯಗಳು
- ಸರ್ಕಾರವು ನೂತನವಾಗಿ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳ (ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಶಕ್ತಿ ಯೋಜನೆ, ಯುವನಿಧಿ) ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸುವುದು.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಿಗೆ ಹಾಗೂ ವಸತಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿ, ನ್ಯೂನತೆಗಳನ್ನು ಸರಿಪಡಿಸಲು ಕ್ರಮವಹಿಸುವುದು.
- ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಶಾಲೆ, ಕಾಲೇಜು ಹಾಗೂ ಐಟಿಐಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಸೂಕ್ತ ಪರಿಹಾರ ಕಂಡುಕೊಳ್ಳುವುದು ಹಾಗೂ ಶಾಲಾ ಕಟ್ಟಡ ದುರಸ್ತಿ, ಹೊಸ ಕಟ್ಟಡಗಳ ನಿರ್ಮಾಣ ಇತ್ಯಾದಿ ಕಾಮಗಾರಿಗಳ ಪರಿಶೀಲನೆ ನಡೆಸುವುದು.
- ಸ್ವಂತ ಕಟ್ಟಡ ಇಲ್ಲದಿರುವ ಅಂಗನವಾಡಿಗಳಿಗೆ ನಿವೇಶನವನ್ನು ಒದಗಿಸುವ ಬಗ್ಗೆ ಪರಿಶೀಲನೆ ಹಾಗೂ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕಟ್ಟಡಗಳ ಕಾಮಗಾರಿಗಳನ್ನು ಪರಿಶೀಲಿಸುವುದು ಹಾಗೂ ತಾಲೂಕಿನಲ್ಲಿರುವ ಅಪೌಷ್ಟಿಕ ಮಕ್ಕಳ ವಿವರ ಪಡೆದು, ನಿರಂತರವಾಗಿ ಸರ್ಕಾರದ ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಕ್ರಮವಹಿಸುವುದು.
- ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಇಂಧನ, ಜಲಸಂಪನ್ಮೂಲ, ಲೋಕೋಪಯೋಗಿ, ಕೃಷಿ, ತೋಟಗಾರಿಕೆ ಇಲಾಖೆಗಳಲ್ಲಿನ ಪ್ರಮುಖ ಕಾರ್ಯಕ್ರಮಗಳಾದ ಕುಡಿಯುವ ನೀರು, ರಸ್ತೆಗಳು, ವಿದ್ಯುಚ್ಛಕ್ತಿ, ಮೇವು ಲಭ್ಯತೆ, ಬೀಜ ಮತ್ತು ರಸಗೊಬ್ಬರ, ಮಧ್ಯಾಹ್ನದ ಬಿಸಿಯೂಟ, ನರೇಗಾ, ಸಾಮಾಜಿಕ ಭದ್ರತೆಯಡಿ ನೀಡುತ್ತಿರುವ ಪಿಂಚಣಿ ಕಾರ್ಯಕ್ರಮಗಳ ಆರ್ಥಿಕ ಮತ್ತು ಭೌತಿಕ ಪ್ರಗತಿ ಪರಿಶೀಲನೆ ನಡೆಸುವುದು.
- ತಾಲೂಕಿನ ಯುವಕರಿಗೆ ಉದ್ಯೋಗಾಧಾರಿತ ತರಬೇತಿ ಕುರಿತು ಸಮನ್ವಯ ಹಾಗೂ ಸಾಲ ಮಂಜೂರಾತಿಗೆ ಬೇಕಾದ ಅವಶ್ಯ ಸಲಹೆ ನೀಡಲು ಕ್ರಮವಹಿಸುವುದು ಹಾಗೂ ತಾಲೂಕಿನ ಯುವಕ-ಯುವತಿಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಅವರ ವೃತ್ತಿನೈಪುಣ್ಯತೆ (skill) ಹೆಚ್ಚಿಸಿ ಅವರ ಜೀವನೋಪಾಯವನ್ನು ಸಧೃಡಗೊಳಿಸಲು ಕ್ರಮವಹಿಸುವುದು.
- ತಾಲ್ಲೂಕಿನಲ್ಲಿ ಗೃಹ ಮತ್ತು ಸಣ್ಣ ಕೈಗಾರಿಕೆಗಳನ್ನು ಗುರುತಿಸಿ, ಅವರಿಗೆ ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಬಗ್ಗೆ ಕ್ರಮವಹಿಸುವುದು.
- ಖಾಸಗಿ ಸಾಮಾಜಿಕ ಜವಾಬ್ದಾರಿ (Corporate Social Responsibility) ಯೋಜನೆಯಡಿಯಲ್ಲಿ ವಿವಿಧ ಕಂಪನಿಗಳಿಂದ ಶಾಸನಬದ್ಧವಾದ ಆರ್ಥಿಕ ಸಹಾಯ ಪಡೆದು ತಾಲ್ಲೂಕಿನ, ಶೈಕ್ಷಣಿಕ, ಆರೋಗ್ಯ ಸ್ವಚ್ಛತೆ ಹಾಗೂ ನೈಸರ್ಗಿಕ ಕಾರ್ಯಗಳನ್ನು ನಿರ್ವಹಿಸಲು ಕ್ರಮವಹಿಸುವುದು. (ಉದಾಹರಣೆಗೆ: ತಾಲೂಕಿನ ಜಲಮೂಲಗಳ ಜೀರ್ಣೋದ್ಧಾರ ಮಾಡುವ ಬಗ್ಗೆ ಕ್ರಮವಹಿಸುವುದು.)
- ಪ್ರತಿ ಗ್ರಾಮ ಪಂಚಾಯತಿವಾರು ಕುಡಿಯುವ ನೀರಿನ ವ್ಯವಸ್ಥೆ, ಓವರ್‌ಹೆಡ್ ಟ್ಯಾಂಕ್‌ಗಳ ಸ್ವಚ್ಛತೆ ಮತ್ತು impounding reservoirs ಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವುದು ಹಾಗೂ ಅತಿವೃಷ್ಟಿ ಮತ್ತು ಅನಾವೃಷ್ಠಿಗಳಂತಹ ಸಂದರ್ಭದಲ್ಲಿ ತಾಲೂಕಿನ ವಿವಿಧ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪ್ರಕೃತಿ ವಿಕೋಪಕ್ಕೀಡಾದ ಪ್ರದೇಶಗಳಲ್ಲಿ ತುರ್ತು ಕ್ರಮವಹಿಸುವುದು.
- ತಾಲೂಕಿನಲ್ಲಿ ದೌರ್ಜನ್ಯ ಪ್ರಕರಣಗಳನ್ನು ಪರಿಶೀಲಿಸಿ ಕ್ರಮವಹಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವುದು.
- ಪ್ರತಿ ತಾಲೂಕಿಗೆ ಸಂಬಂಧಪಟ್ಟಂತೆ, ನಿಯೋಜಿಸಲ್ಪಟ್ಟ ಕೆ.ಎ.ಎಸ್. ಅಧಿಕಾರಿಯು ಪ್ರತಿ ಮಾಹೆ ಕನಿಷ್ಠ ಎರಡು ಬಾರಿ ಭೇಟಿ ನೀಡುವುದು. ಸದರಿ ಭೇಟಿ ಸಮಯದಲ್ಲಿ ಇಲಾಖೆಗಳ ಕಾರ್ಯ ಪರಿಶೀಲನೆ, ಇಲಾಖೆಗಳು ಕೈಗೊಂಡಿರುವ ವಿವಿಧ ಯೋಜನೆಗಳಡಿ ಅಭಿವೃದ್ಧಿ ಯೋಜನೆಗಳು ಸ್ಥಳಪರಿಶೀಲನೆ ಮಾಡುವುದರೊಂದಿಗೆ ನಗರ ಸ್ಥಳೀಯ ಸಂಸ್ಥೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳು(ಪಂಚಾಯತ್) ತಯಾರಿಸುವ ಕ್ರಿಯಾಯೋಜನೆಗಳ ಪರಿಶೀಲನೆ ಮಾಡುವುದು ಹಾಗೂ ಸದರಿ ಕಾರ್ಯ ಯೋಜನೆಗಳನ್ನು ನಾಗರೀಕ ಸ್ನೇಹಮಯ ಮಾಡಲು ಸೂಕ್ತ ಸಲಹೆಗಳನ್ನು ನೀಡುವುದು, ಸರ್ಕಾರದ ಹಿತದೃಷ್ಟಿಗೆ ಧಕ್ಕೆಯಾಗದಂತಹ ರೀತಿಯಲ್ಲಿ ತಮ್ಮ ಮಟ್ಟದಲ್ಲಿ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುವುದು.
- ತಾಲೂಕು ಉಸ್ತುವಾರಿ ಅಧಿಕಾರಿಗಳು ಮೇಲ್ಕಂಡ ಕಾರ್ಯಗಳನ್ನು ಅತ್ಯಂತ ಬದ್ಧತೆಯಿಂದ ನಿರ್ವಹಿಸಲು ಸೂಚಿಸಿದೆ ಹಾಗೂ ಪ್ರತಿಮಾಹೆ ತಾವು ನಿರ್ವಹಿಸಿದ ಕಾರ್ಯವರದಿಯನ್ನು ಸರ್ಕಾರಕ್ಕೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಿಗೆ ಹಾಗೂ ಜಿಲ್ಲಾಧಿಕಾರಿಯವರಿಗೆ ಸಲ್ಲಿಸುವುದು.
- ತಾಲೂಕು ಉಸ್ತುವಾರಿ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವುದು ಮತ್ತು ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ವಹಿಸುವ ಹೆಚ್ಚುವರಿ ಕಾರ್ಯಗಳನ್ನು ನಿರ್ವಹಿಸುವುದು.
ಇದನ್ನೂ ಓದಿ | ಮೊಗಸಾಲೆ ಅಂಕಣ: ಕಿರಿಯರ ಸಚಿವಗಿರಿ, ಸೀನಿಯರ್‌ಗಳ ಕಿರಿಕಿರಿ