Site icon Vistara News

ಎಲೆಕ್ಷನ್‌ ಮೋಡ್‌ನಲ್ಲಿ ಸರ್ಕಾರ: ಸ್ಥಳೀಯ ಸಂಸ್ಥೆಗಳಿಗೆ ಕೋಟಿ ಕೋಟಿ ಹಂಚಿಕೆ

MTB meetng

ಬೆಂಗಳೂರು: ಮುಂಬರುವ ಬಿಬಿಎಂಪಿ ಚುನಾವಣೆ, ಸ್ಥಳೀಯ ಸಂಸ್ಥೆಗಳು, ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಿದೆ. ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 4ನೇ ಹಂತದಲ್ಲಿ ರಾಜ್ಯದ 291 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳಲಿರುವ ₹2,993 ಕೋಟಿ ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ಪೌರಾಡಳಿತ ಇಲಾಖೆ ಅನುಮೋದನೆ ನೀಡಿದೆ.

ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಶುಕ್ರವಾರ ಏರ್ಡಿಸಿದ್ದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ 4ನೇ ಹಂತದ ಯೋಜನೆಗಳ ರಾಜ್ಯ ಮಟ್ಟದ ಸಮಿತಿ ಸಭೆಯಲ್ಲಿ 9 ಜಿಲ್ಲೆಗಳ ₹503.25 ಕೋಟಿ ಕ್ರಿಯಾ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ.

ಇದನ್ನೂ ಓದಿ | BBMP Election | ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಪ್ರಾರಂಭಿಸಿದ BJP

ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ₹80.75 ಕೋಟಿ., ಬೆಂಗಳೂರು ನಗರ ಜಿಲ್ಲೆಯ ₹123.25 ಕೋಟಿ, ಕೋಲಾರ ಜಿಲ್ಲೆ(ಬಂಗಾರ ಪೇಟೆ ಪುರಸಭೆ ಮಾತ್ರ) ₹8.5 ಕೋಟಿ, ತುಮಕೂರು ಜಿಲ್ಲೆಯ (ತಿಪಟೂರು ನಗರ ಸಭೆ ಮತ್ತು ಹುಳಿಯಾರ್ ಪಟ್ಟಣ ಪಂಚಾಯಿತಿ ಹೊರತು ಪಡಿಸಿ) ₹72.25 ಕೋಟಿ, ಹಾಸನ ನಗರ ಸಭೆಗೆ ಹೆಚ್ಚುವರಿ ಮೊತ್ತ ₹6 ಕೋಟಿ, ಬೆಳಗಾವಿ (ಚಿಕ್ಕೋಡಿ ಪುರಸಭೆ ಮಾತ್ರ) ₹8.5 ಕೋಟಿ, ಉತ್ತರ ಕನ್ನಡ (ಕಾರವಾರ,ದಾಂಡೇಲಿ, ಕುಮಟ, ಅಂಕೋಲ, ಹೊನ್ನಾವರ ನಗರ ಸ್ಥಳೀಯ ಸಂಸ್ಥೆಗಳು ಮಾತ್ರ) ₹80.75 ಕೋಟಿ, ಹಾಗೂ ಕಲಬುರಗಿ ಜಿಲ್ಲೆಗೆ ₹97.75 ಕೋಟಿ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಇದರಿಂದಾಗಿ ಈವರೆಗೆ ರಾಜ್ಯದ 291 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳಲಿರುವ ₹2,993 ಕೋಟಿ ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಿದಂತಾಗಿದೆ.

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ 4ನೇ ಹಂತದ ಯೋಜನೆಯ ₹3,885 ಕೋಟಿ ಮೊತ್ತದ ಕ್ರಿಯಾಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಕಳೆದ ಜನವರಿಯಲ್ಲಿ ಅನುಮೋದನೆ ನೀಡಿತ್ತು. ಅದಕ್ಕೆ ಪೂರಕವಾಗಿ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳ ಮೂಲಕ ಕ್ರಿಯಾ ಯೋಜನೆಗಳು ಸಲ್ಲಿಕೆಯಾಗಿದ್ದವು.
ಈ ಯೋಜನೆಯಡಿ 117 ಪಟ್ಟಣ ಪಂಚಾಯಿತಿಗಳು ತಲಾ ₹5 ಕೋಟಿ, 124 ಪುರಸಭೆಗಳು ತಲಾ ₹10 ಕೋಟಿ ಹಾಗೂ 38 ನಗರಸಭೆಗಳು ತಲಾ ₹30 ಕೋಟಿ, 23 ಜಿಲ್ಲಾ ಕೇಂದ್ರದ ನಗರಸಭೆಗಳು ಮತ್ತು ಪ್ರಥಮ ದರ್ಜೆ ನಗರಸಭೆಗಳು ತಲಾ ₹40 ಕೋಟಿ ಪಡೆಯಲಿವೆ. ಈ ಹಣದಲ್ಲಿ 2022-23 ರಿಂದ 2023-24ನೇ ಸಾಲಿನ ಹಣಕಾಸು ವರ್ಷದವರೆಗೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಮಳೆ ನೀರು ಚರಂಡಿ ಅಭಿವೃದ್ಧಿ ಮತ್ತು ಕಟ್ಟಡ ನಿರ್ಮಾಣ ಹಾಗೂ ಇತರ ಕಾಮಗಾರಿಗಳನ್ನು ಕೈಗೊಳ್ಳಲಿವೆ.

ಇದಕ್ಕಾಗಿ ಈಗಾಗಲೇ ಪೌರಾಡಳಿತ ನಿರ್ದೇಶನಾಲಯ ಜಿಲ್ಲಾವಾರು ಯೋಜನಾ ಸಮಾಲೋಚಕರನ್ನು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಕೆ, ಟೆಂಡರ್ ಪ್ರಕ್ರಿಯೆಯಲ್ಲಿ ನೆರವು, ಕ್ರಿಯಾ ಯೋಜನೆ ತಯಾರಿಕೆ, ಅನುಷ್ಠಾನ ಮತ್ತು ಮೇಲ್ವಿಚಾರಣೆ ಹಾಗೂ ಗುಣಮಟ್ಟ ನಿಯಂತ್ರಣಕ್ಕಾಗಿ ನೇಮಕ ಮಾಡಿಕೊಳ್ಳಲು ಆಸಕ್ತ ಯೋಜನಾ ಸಮಾಲೋಚಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಇದನ್ನೂ ಓದಿ | ಹೊಸ ಮದರಸಾಗಳಿಗೆ ಇಲ್ಲ ಅನುದಾನ; ಯೋಗಿ ಆದಿತ್ಯನಾಥ್‌ ಸರ್ಕಾರದ ನೂತನ ನಿಯಮ

Exit mobile version