ಬೆಂಗಳೂರು: ವಿಧಾನಸೌಧದ ಕ್ಯಾಬಿನೆಟ್ ಹಾಲ್‌ನಲ್ಲಿ ಬುಧವಾರ ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ (Cabinet Meeting) ನಡೆಯಿತು. ಸಭೆಯಲ್ಲಿ ಹಲವು ಮೂಲಸೌಕರ್ಯ ಹಾಗೂ ಜನಪರ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ. ಸರ್ಕಾರಿ ನೌಕರರ ಶೇ.17 ವೇತನ ಏರಿಕೆಗೂ ಅನುಮತಿ ನೀಡಲಾಗಿದೆ.
ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ರಾಜ್ಯದ ಪಾಲಿನ 954 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಯೋಜನೆಗಳಿಗೆ ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ತುಮಕೂರು-ರಾಯದುರ್ಗ, ಗಿಣಿಗೇರಾ-ರಾಯಚೂರು, ಬಾಗಲಕೋಟೆ-ಕುಡುಚಿ, ಚಿಕ್ಕಮಗಳೂರು- ಬೇಲೂರು ರೈಲು ಮಾರ್ಗ ರೈಲು ಮಾರ್ಗಗಳಿಗೆ ರಾಜ್ಯದ ಪಾಲಿನ ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಫ್ತು ಘಟಕ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ಇನ್ವೆಸ್ಟ್ ಕರ್ನಾಟಕ 2022 ಅನ್ನು ಆಯೋಜಿಸುವ ಸಲುವಾಗಿ ಇವೆಂಟ್ ಮ್ಯಾನೇಜ್‌ಮೆಂಟ್ ಪಾರ್ಟ್‌ನರ್‌ಅನ್ನು ನೇಮಿಸಲು ಹೊರಡಿಸಲಾದ ಸರ್ಕಾರಿ ಆದೇಶಕ್ಕೆ ಘಟನೋತ್ತರ 74.99 ರೂಪಾಯಿ ಕೋಟಿ ರೂಪಾಯಿ ಪರಿಷ್ಕೃತ ಅಂದಾಜು ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಗಣಿ ಬಾಧಿತ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಅಧಿಕಾರವನ್ನು ಕರ್ನಾಟಕ ಗಣಿ ಪರಿಸರ ಪುನಶ್ಚೇತತನ ನಿಗಮ ಪ್ರತ್ಯಾಯೋಜಿಸಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್, ವಿಧಾನ ಸಭೆಯನ್ನು ಸಮಾಪನಗೊಳಿಸಿದ್ದೇವೆ. ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘಕ್ಕೆ ಶಿವಮೊಗ್ಗದ ಕಲ್ಲಹಳ್ಳಿ ಗ್ರಾಮದಲ್ಲಿ 1.31 ಎಕರೆ ಜಮೀನು ಮಂಜೂರು ಮಾಡಿದ್ದು, ಸ್ಮಶಾನದ ಉದ್ದೇಶದ ಬದಲಾಗಿ ಶೈಕ್ಷಣಿಕ ಉದ್ದೇಶ ಎಂದು ಮಾರ್ಪಾಡು ಮಾಡಲಾಗಿದೆ. ಶ್ರೀಹರ ಪಂಚಮಸಾಲಿ ಸೇವಾ ಟ್ರಸ್ಟ್‌ಗೆ ಶಿಕಾರಿಪುರ ತಾಲೂಕು, ದೂಪದಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣದ ಉದ್ದೇಶಕ್ಕಾಗಿ 20 ಗುಂಟೆ ಜಮೀನು ಮಂಜೂರು ಮಾಡಲಾಗಿದೆ. ಅದೇ ಗ್ರಾಮದಲ್ಲಿ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಸಮುದಾಯ ಭವನಕ್ಕೆ 2 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ದೂರ ಸಂಪರ್ಕ ಜಾಲವಿಲ್ಲದ ಗ್ರಾಮಗಳಲ್ಲಿ ದೂರ ಸಂಪರ್ಕ ಸ್ಥಾವರಗಳನ್ನು ಸ್ಥಾಪಿಸಲು ಒಪ್ಪಿಗೆ ನೀಡಲಾಗಿದ್ದು, ಪ್ರತಿ ಗ್ರಾಮದಲ್ಲಿ 2000 ಚದರ ಅಡಿ ಜಮೀನನ್ನು ಬಿಎಸ್‌ಎನ್‌ಎಲ್ ಸಂಸ್ಥೆಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಬಿಡಲು ನಿರ್ಧಾರ ಮಾಡಲಾಗಿದೆ. ಭಾರತ ಸರ್ಕಾರದ “4-ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಕಾರ್ಯಕ್ರಮದ ಅಡಿಯಲ್ಲಿ ಸ್ಥಾವರಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ 2022-23ನೇ ಸಾಲಿನ ಮೋಟಾರು ವಾಹನ ತೆರಿಗೆಯಿಂದ (166.99 ಕೋಟಿ ರೂ.) ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. ಇನ್ನು ರಾಯಚೂರು ವಿಮಾನ ನಿಲ್ದಾಣಕ್ಕೆ 266 ಕೋಟಿ ರೂಪಾಯಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ನೌಕರರಿಗೆ ಶೇ. 17 ವೇತನ ಹೆಚ್ಚಳ ಮಾಡಿರುವುದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ 7246.85 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ವಿಜಯನಗರದಲ್ಲಿ 454 ಕೋಟಿ ರೂ. ವೆಚ್ಚದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಒಡೆತನದ ಹಂಪಿ ಶುಗರ್ಸ್ ಲಿಮಿಟೆಡ್ ಕಂಪನಿಯ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಮಾರ್ಗಸೂಚಿ ದರದಲ್ಲಿ 82 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಇದರಿಂದ 2 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ ಮಾಡಲಾಗಿದೆ ಎಂದು ಹೇಳಿದರು.
ಕುರುಬರಹಳ್ಳಿಯಲ್ಲಿ ಜನಸೇವಾ ಟ್ರಸ್ಟ್‌ಗೆ 10 ಗುಂಟೆ, ಹಾವೇರಿಯ ದೇವಗಿರಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ 10 ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ಯಲಹಂಕದ ಜಾಲಹಳ್ಳಿಯಲ್ಲಿ ಕೊಡವ ಸಮಾಜಕ್ಕೆ ಮಾರ್ಗಸೂಚಿ ದರದಲ್ಲಿ 7 ಎಕರೆ ಮಾರಾಟಕ್ಕೆ ನಿರ್ಧಾರ ಮಾಡಲಾಗಿದೆ. ಚಿತ್ರದುರ್ಗದ ಹಿರಿಯೂರಿನಲ್ಲಿ ಜಲಜೀವನ್ ಮಿಷನ್‌ಗೆ 49 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ | Karnataka Bandh: ಪಿಯು ಪರೀಕ್ಷೆಯ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ ವಾಪಸ್ ಪಡೆದ ಕಾಂಗ್ರೆಸ್
ಕಲಬುರಗಿಯಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದ್ದು, ಗೋಕಾಕ್ ನಗರವನ್ನು ಪ್ರವಾಹದಿಂದ ರಕ್ಷಿಸಲು ರಕ್ಷಣಾ ಗೋಡೆಗಾಗಿ 650 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಗೋಕಾಕ್ ಪಟ್ಟಣ ಮತ್ತು ರಾಜ್ಯ ಹೆದ್ದಾರಿ 31ರ ತನಕ ನದಿಯುದ್ದಕ್ಕೂ ರಕ್ಷಣಾ ಗೋಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಶೇ.40ರಷ್ಟು ಪದವೀಧರ ಶಿಕ್ಷಕರನ್ನು 6 ರಿಂದ 8ನೇ ತರಗತಿಗೆ ನಿಯುಕ್ತಿಗೊಳಿಸುವ ಬಗ್ಗೆ ಚರ್ಚೆಯಾಗಿದೆ, ಆದರೆ ಯಾವುದೇ ನಿರ್ಧಾರ ಆಗಿಲ್ಲ. ಒಳ ಮೀಸಲಾತಿ ಸಂಬಂಧ ಸಚಿವ ಸಂಪುಟ ಉಪಸಮಿತಿ ವರದಿಯನ್ನು ಸಭೆಯಲ್ಲಿ ಮಂಡಿಸಿಲ್ಲ ಎಂದು ಮಾಹಿತಿ ನೀಡಿದರು.