Site icon Vistara News

Appu Namana | ಅಪ್ಪು ಇಲ್ಲದೆ 1 ವರ್ಷ: ಅಂದು ಮುತ್ತಿಟ್ಟು ಕಳುಹಿಸಿಕೊಟ್ಟಿದ್ದ ಸಿಎಂ ಬೊಮ್ಮಾಯಿ ವರ್ಷದ ಬಳಿಕ ಹೇಳಿದ್ದೇನು?

puneet

ಬೆಂಗಳೂರು: ಪುನೀತ್‌ ರಾಜ್‌ ಕುಮಾರ್‌ ಅವರಿಲ್ಲದೆ ಇಂದಿಗೆ (ಅಕ್ಟೋಬರ್‌ ೨೯) ಒಂದು ವರ್ಷ. ಆದರೆ ಕನ್ನಡ ನಾಡಿನಲ್ಲಿ ಯಾರೂ ಕೂಡಾ ಕೂಡಾ ಪುನೀತ್‌ ನಮ್ಮ ಜತೆಗಿಲ್ಲ ಎನ್ನುವುದನ್ನು ಒಪ್ಪುವುದಕ್ಕೆ ಸಿದ್ಧರಿಲ್ಲ. ಕನ್ನಡ ನಾಡಿನ ಪ್ರತಿ ಹಬ್ಬದಲ್ಲೂ, ಪ್ರತಿ ಉತ್ಸವದಲ್ಲೂ, ಮನೆ ಮನೆಯ ಸಮಾರಂಭದಲ್ಲೂ ತಮ್ಮ ಮನೆ ಮಗನೇ ಎಂಬಷ್ಟು ಪ್ರೀತಿಯಿಂದ ಪುನೀತ್‌ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇದೀಗ ಕಣ್ಮರೆಯಾಗಿ ಒಂದು ವರ್ಷವಾದ ಸಂದರ್ಭದಲ್ಲಂತೂ ಪ್ರತಿಯೊಬ್ಬರೂ ಮನಸು ಬಿಚ್ಚಿ ಮಾತನಾಡುತ್ತಿದ್ದಾರೆ.

ಪದಗಳು ಸಾಲದು ಎಂದ ಬೊಮ್ಮಾಯಿ
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪ್ರೀತಿಯ ಅಪ್ಪು, ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಪ್ರೀತಿ ಪೂರ್ವಕ ನಮನಗಳು. ಅತಿ ಚಿಕ್ಕ ವಯಸ್ಸಿನಲ್ಲಿ ಅವರು ಮಾಡಿದ ಸಾಧನೆ, ಗಳಿಸಿದ ಜನಪ್ರಿಯತೆ, ಕೈಗೊಂಡ ಜನಸೇವೆಯನ್ನು ವರ್ಣಿಸಲು ಪದಗಳೇ ಸಾಲದು- ಹೀಗೆಂದು ನೆನಪು ಮಾಡಿಕೊಂಡಿದ್ದಾರೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ವರ್ಷದ ಹಿಂದೆ ಪುನೀತ್‌ ಮೃತಪಟ್ಟಾಗ ಅತಿ ಹೆಚ್ಚು ಕಣ್ಣೀರು ಸುರಿಸಿದವರಲ್ಲಿ ಬೊಮ್ಮಾಯಿ ಅವರೂ ಒಬ್ಬರು. ಆವತ್ತು ಅವರೊಳಗಿನ ಭಾವುಕತೆ ಕಣ್ಣೀರಾಗಿ ಹರಿದಿದ್ದು ಮಾತ್ರವಲ್ಲ, ಅಪ್ಪು ಹಣೆಗೆ ಪ್ರೀತಿಯಿಂದ ಮುತ್ತಿಟ್ಟು ಕಳುಹಿಸಿಕೊಟ್ಟಿದ್ದರು ನಾಡಿನ ಮುಖ್ಯಮಂತ್ರಿ.
ಪುನೀತ್‌ ಅವರನ್ನು ಅತ್ಯಂತ ಹತ್ತಿರದಿಂದ ಬಲ್ಲ ಸಿಎಂ ಬೊಮ್ಮಾಯಿ, ವರ್ಷದ ಹಿಂದೆ ಅವರ ಅಂತ್ಯಕ್ರಿಯೆ ಅತ್ಯಂತ ಸಾಂಗವಾಗಿ ನೆರವೇರಲು ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿದ್ದರು.

ಪುನೀತ್‌ಗೆ ಆರ್‌ಸಿಬಿ ನಮನ
ಪುನೀತ್‌ ರಾಜ್‌ ಕುಮಾರ್‌ ಕ್ರಿಕೆಟ್‌ ಆಟಗಾರರೇನೂ ಅಲ್ಲ. ಆದರೆ, ಆರ್‌ಸಿಬಿ ಕೂಡಾ ಅವರಿಗೆ ಪ್ರೀತಿಯಿಂದ ನಮಿಸಿದೆ. ʻಸೂರ್ಯನೊಬ್ಬ ಚಂದ್ರನೊಬ್ಬ, ರಾಜನೂ ಒಬ್ಬ, ಈ ರಾಜನೂ ಒಬ್ಬ… ಮತ್ತೆ ಹುಟ್ಟಿ ಬನ್ನಿ, ಅಪ್ಪು! In the dearest memory of Namma Karnataka Ratna, Dr Puneeth Rajkumar.ʼʼ ಎಂದು ಅದು ಹೇಳಿದೆ.

ಡಿ.ಕೆ. ಶಿವಕುಮಾರ್‌ ಸ್ಮರಣೆಒಳ್ಳೆಯದನ್ನು ಬಯಸುವವರ ಮನಸ್ಸು, ಹೃದಯದಲ್ಲಿ ಅಪ್ಪು ಇನ್ನೂ ಬದುಕಿದ್ದಾರೆ. ತಮ್ಮ ಕನಸಿನ #ಗಂಧದಗುಡಿಯ ಮೂಲಕ ಅವರು ಪರಿಸರದಲ್ಲಿ ಲೀನವಾಗಿದ್ದಾರೆ. ನಿಮ್ಮನು ಪಡೆದ ನಾವು ನಿಜಕ್ಕೂ ಪುನೀತ- ಹೀಗೆ ಹೇಳಿದವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌. ಜತೆಗೆ ನಗುವಿನ ಒಡೆಯ ಎಂಬ ವಿಡಿಯೊವನ್ನು ಟ್ವೀಟ್‌ ಮಾಡಿದ್ದಾರೆ.

ಇಂದು ಅಪ್ಪು ಪುಣ್ಯ ಸ್ಮರಣೆ, ಪುನೀತ್‌ಗೆ ಗೀತ ನಮನ

Exit mobile version