ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ದಿ| ಪುನೀತ್ ರಾಜಕುಮಾರ್ (Appu Namana) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಹಿನ್ನೆಲೆಯಲ್ಲಿ ಅಪ್ಪುವಿಗಾಗಿ ದೂರದ ಹಾವೇರಿಯಿಂದ ಅಭಿಮಾನಿಯೊಬ್ಬ ಪಾದಯಾತ್ರೆ ಮಾಡಿದ್ದಾರೆ.
ಕೈಯಲ್ಲಿ ಅಪ್ಪು ಫೋಟೊ ಹಿಡಿದು ಹಾವೇರಿಯಿಂದ ಉದ್ಯಾನನಗರಿ ಬೆಂಗಳೂರಿಗೆ ಶಾಂತಯ್ಯ ಮಳೀಮಠ್ ಎಂಬುವವರು ನಡೆದುಕೊಂಡೇ ಬಂದಿದ್ದಾರೆ. ಅಕ್ಟೋಬರ್ 22ಕ್ಕೆ ಹಾವೇರಿಯಿಂದ ಹೊರಟ ಶಾಂತಯ್ಯ ಅಕ್ಟೋಬರ್ 31ಕ್ಕೆ ಬೆಂಗಳೂರು ತಲುಪಿದ್ದಾರೆ.
ಪುನೀತ್ ರಾಜಕುಮಾರ್‌ಗಾಗಿ 10 ದಿನಗಳ ಏಕಾಂಗಿ ನಡಿಗೆ ನಡೆಸಿರುವ ಶಾಂತಯ್ಯ 336 ಕಿ.ಮೀ ಕ್ರಮಿಸಿದ್ದಾರೆ. ಅಲ್ಲಿಂದ ಇಲ್ಲಿವರೆಗೂ ಬರೀ ಕಾಲಲ್ಲಿ ನಡೆದ ಪರಿಣಾಮ ಕಾಲಿನಲ್ಲಿ ಬೊಬ್ಬೆಯಾಗಿದೆ. ಆದರೂ ಅದರ ನಡುವೆಯೇ ಸೋಮವಾರ ಅಪ್ಪು ಮನೆಗೆ ಹೋಗಿ, ಅಶ್ವಿನಿ ಪುನೀತ್ ರಾಜಕುಮಾರ್‌ರನ್ನು ಭೇಟಿ ಮಾಡಿದರು. ಇವರ ಈ ಪ್ರಯತ್ನಕ್ಕೆ ಅಶ್ವಿನಿ ಅವರು ಧನ್ಯವಾದವನ್ನು ತಿಳಿಸಿದ್ದಾರೆ. ಮಂಗಳವಾರ ನಟ ಶಿವರಾಜಕುಮಾರ್ ಅವರನ್ನು ಭೇಟಿ ಮಾಡಿ ಮಾತನಾಡಿಸಿ ಹೋಗುತ್ತೇನೆ ಎಂದಿದ್ದಾರೆ.
ಒಂದಿಡೀ ಊರಿಗೆ ಅಪ್ಪು ಹೆಸರಲ್ಲಿ ಬಾವುಟ ಹಂಚಿಕೆ
ಕರ್ನಾಟಕ ರಾಜ್ಯೋತ್ಸವ ಹಾಗೂ ದಿವಂಗತ ಡಾ.ಪುನೀತ್ ರಾಜಕುಮಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನೌಕರರೆಲ್ಲ ಸೇರಿ ಪ್ರತಿ ಮನೆಗೆ ಕನ್ನಡ ಧ್ವಜ ನೀಡಿ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಗ್ರಾಮದ ಪ್ರತಿ ಮನೆಗಳಿಗೂ ಕನ್ನಡದ ಧ್ವಜ ನೀಡಿ ಧ್ವಜಾರೋಹಣ ಮಾಡುವ ಕಾರ್ಯವನ್ನು ನೇರಲಿ ಗ್ರಾಮ ಪಂಚಾಯಿತಿ ವತಿಯಿಂದ ಮಾಡಲಾಗಿದೆ. ರಾಜ್ಯೋತ್ಸವ ದಿನದಂದು ನೇರಲಿ ಗ್ರಾಮದ ಪ್ರತಿ ಮನೆ ಮನೆಗಳಲ್ಲೂ ಕನ್ನಡ ಬಾವುಟ ರಾರಾಜಿಸುತ್ತಿತ್ತು. ಪವರ್ ಸ್ಟಾರ್ ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ದೊರಕಿದ್ದು ಸಂತಸ ತಂದಿದೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಖುಷಿ ಹಂಚಿಕೊಂಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವದಲ್ಲೂ ಅಪ್ಪು ಸ್ಮರಣೆ
ವಿಜಯಪುರದ ಗುಮ್ಮಟನಗರಿಯ ದರ್ಗಾ ಪ್ರದೇಶದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ಈ ವೇಳೆ ಪುನೀತ್‌ರನ್ನು ಸ್ಮರಿಸಲಾಯಿತು. ದರ್ಗಾ ಪ್ರದೇಶದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಸ್ಥಳೀಯರು, ಅಪ್ಪು ಭಾವಚಿತ್ರ ಇರಿಸಿ, ಅದಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.
ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಇಂದು ಪುನೀತ್‌ಗೆ ಕರ್ನಾಟಕ ರತ್ನ ಪ್ರದಾನ, ರಜನಿಕಾಂತ್, ಜ್ಯೂ.ಎನ್‌ಟಿಆರ್ ಭಾಗಿ