Site icon Vistara News

Appu Namana | ಅಪ್ಪುಗೆ ನಾಳೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ, ಸಾವಿರಾರು ಜನರ ಆಗಮನ ನಿರೀಕ್ಷೆ

puneet invite

ಬೆಂಗಳೂರು: ನಾಡಿಗೆ ನಾಡೇ ಪ್ರೀತಿಸುವ, ಸಜ್ಜನಿಕೆಯ ಸಾಕಾರಮೂರ್ತಿ, ನಟ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡುವ ಕಾರ್ಯಕ್ರಮಕ್ಕೆ ಎಲ್ಲ ರೀತಿಯಲ್ಲೂ ಸಿದ್ಧತೆಗಳು ನಡೆಯುತ್ತಿವೆ.

ಕನ್ನಡ ರಾಜ್ಯೋತ್ಸವದ ದಿನವಾದ ಮಂಗಳವಾರ ಸಂಜೆ ನಾಲ್ಕು ಗಂಟೆಗೆ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಖ್ಯಾತ ನಟರಾದ ರಜನೀಕಾಂತ್‌ ಮತ್ತು ಜ್ಯೂನಿಯರ್‌ ಎನ್‌ಟಿಆರ್‌ ಅವರು ಅತಿಥಿಗಳಾಗಿದ್ದಾರೆ. ಜತೆಗೆ ಇನ್ಫೋಸಿಸ್‌ ಫೌಂಡೇಷನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಕೂಡಾ ಈ ವೇದಿಕೆಯನ್ನು ಅಲಂಕರಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸಾವಿರಾರು ಜನರಿಗೆ ವ್ಯವಸ್ಥೆ
ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ನಡೆಯಲಿರುವ ಈ ಕಾರ್ಯಕ್ರಮದ ಉಸ್ತುವಾರಿಯನ್ನು ಕಂದಾಯ ಸಚಿವ ಆರ್‌. ಅಶೋಕ್‌ ಅವರಿಗೆ ವಹಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸುನಿಲ್‌ ಕುಮಾರ್‌ ಅವರು ಸಮಾರಂಭದ ಮೇಲುಸ್ತುವಾರಿ ವಹಿಸಿದ್ದಾರೆ. ಸೋಮವಾರ ಬೆಳಗ್ಗಿನಿಂದಲೇ ಕಾರ್ಯಕ್ರಮಕ್ಕೆ ವೇದಿಕೆ ರಚಿಸುವುದೂ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಕಾರ್ಯಕ್ರಮದ ಸಿದ್ಧತೆಯ ನಡುವೆಯೇ ಮಾತನಾಡಿದ ಸಚಿವ ಆರ್‌. ಅಶೋಕ್ ಅವರು, ಐದು ಸಾವಿರ ಮಂದಿಗೆ ಪಾಸ್‌ ನೀಡಲಾಗಿದೆ. ಸುಮಾರು ಎಂಟು ಸಾವಿರ ಮಂದಿ ವಿಧಾನಸೌಧದ ಮೆಟ್ಟಿಗಳುಗಳ ಆಸುಪಾಸಿನಲ್ಲಿ ನಿಂತು, ಕುಳಿತು ಕಾರ್ಯಕ್ರಮ ನೋಡಬಹುದು ಎಂದರು.

ವಿಧಾನಸೌಧ ಮತ್ತು ಹೈಕೋರ್ಟ್‌ ನಡುವಿನ ರಸ್ತೆಯನ್ನು ಮಂಗಳವಾರದ ಮಟ್ಟಿಗೆ ಬಂದ್‌ ಮಾಡಲಾಗುತ್ತಿದ್ದು, ಅಲ್ಲಿ ರಾಜ್ಯಾದ್ಯಂತದಿಂದ ಬರುವ ಅಭಿಮಾನಿಗಳಿಗೆ ಅವಕಾಶ ನೀಡಲಾಗುತ್ತದೆ. ಅಲ್ಲಿರುವ ಹುಲ್ಲು ಹಾಸಿನಲ್ಲೂ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ವೇದಿಕೆಯಲ್ಲಿ ೨೫ ಮಂದಿ ಗಣ್ಯರು
ವೇದಿಕೆಯಲ್ಲಿ ರಾಜ್‌ ಕುಟುಂಬದ ಮೂವರು (ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ ಕುಮಾರ್‌, ಶಿವರಾಜ್‌ ಕುಮಾರ್‌) ಸೇರಿದಂತೆ ೨೫ ಜನರಿಗೆ ವ್ಯವಸ್ಥೆ ಮಾಡಲಾಗಿದೆ. ವಿಐಪಿಗಳಿಗೆ ೨೦೦ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ರಾಜ್‌ ಕುಮಾರ್‌ ಕುಟುಂಬದವರೇ ಒಟ್ಟು ೩೦ ಮಂದಿ ಬರಲಿದ್ದಾರೆ. ಅವರಿಗೆ ಮನೆಯಿಂದಲೇ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೂವರು ಮುಖ್ಯ ಅತಿಥಿಗಳು, ವಿಧಾನಸಭೆಯ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಮೇಲ್ಮನೆಯ ಸಭಾಧ್ಯಕ್ಷ ರಘುನಾಥ ರಾವ್‌ ಮಲ್ಕಾಪುರೆ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮೇಲ್ಮನೆಯ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಬೆಂಗಳೂರು ಸೆಂಟ್ರಲ್‌ ಸಂಸದ ಪಿ.ಸಿ. ಮೋಹನ್‌, ಶಿವಾಜಿ ನಗರ ಶಾಸಕ ರಿಜ್ವಾನ್‌ ಅರ್ಷದ್‌, ಸಚಿವರಾದ ಆರ್‌. ಅಶೋಕ್‌ ಮತ್ತು ಸುನಿಲ್‌ ಕುಮಾರ್‌ ವೇದಿಕೆಯಲ್ಲಿ ಇರಲಿದ್ದಾರೆ.

ಪುನೀತ್‌ ರಾಜ್‌ ಕುಮಾರ್‌ ಕುಟುಂಬಕ್ಕೆ ಸರಕಾರದಿಂದ ಅಧಿಕೃತ ಆಹ್ವಾನ

ಕುಟುಂಬಕ್ಕೆ ಅಧಿಕೃತ ಆಹ್ವಾನ
ರಾಜ್ಯ ಸರಕಾರ ಈ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕೆ ಸಂಬಂಧಪಟ್ಟಂತೆ ರಾಜ್‌ ಕುಟುಂಬಕ್ಕೆ ಸೋಮವಾರ ಅಧಿಕೃತ ಆಹ್ವಾನ ನೀಡಲಾಯಿತು. ಕಂದಾಯ ಸಚಿವ ಆರ್. ಅಶೋಕ್ ಹಾಗೂ ಸಚಿವ ಸುನಿಲ್‌ ಕುಮಾರ್ ಪುನೀತ್ ನಿವಾಸಕ್ಕೆ ಭೇಟಿ ಕೊಟ್ಟು ಸರ್ಕಾರದ ಪರವಾಗಿ ಅಧಿಕೃತ ಆಹ್ವಾನ ನೀಡಿದರು.

ಮೂರು ಗಂಟೆಗೆ ರಜನಿ, ಜೂನಿಯರ್‌ ಎನ್‌ಟಿಆರ್‌ ಆಗಮನ
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅತಿಥಿಗಳಾಗಿರುವ ರಜನಿಕಾಂತ್ ಮತ್ತು ಜೂನಿಯರ್ ಎನ್‌ಟಿ‌ಆರ್ ಅವರು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿಸಲಿದ್ದಾರೆ. ಸಚಿವರಾದ ಮುನಿರತ್ನ ಮತ್ತು ಕೆ. ಸುಧಾಕರ್ ಅವರು ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಿ, ಖಾಸಗಿ ಹೋಟೆಲ್‌ಗೆ ಕರೆದುಕೊಂಡು ಹೋಗಿ ಸಮಾರಂಭಕ್ಕೆ ಕರೆದುಕೊಂಡು ಬರಲಿದ್ದಾರೆ.
ಸಭಾ ಕಾರ್ಯಕ್ರಮಕ್ಕೆ ಮುನ್ನ ವಿಜಯಪ್ರಕಾಶ್‌ ಅವರ ನೇತೃತ್ವದಲ್ಲಿ ಅಪ್ಪು ಅವರ ಸಿನಿಮಾಗಳ ಹಾಡುಗಳ ಗುಂಜನವಿದೆ.

ಇದನ್ನೂ ಓದಿ | Puneeth Parva | ನವೆಂಬರ್‌ 1ರಂದು ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ನಾಡಿನ ಜನತೆಗೆ ಬೊಮ್ಮಾಯಿ ಆಹ್ವಾನ!

Exit mobile version