ಮಂಗಳೂರು: ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಅಪ್ಪು ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಪುನೀತ್ ರಾಜ್ ಕುಮಾರ್ ನೆನಪುಗಳನ್ನು ಹಸಿರಾಗಿಡಲು ವಿಭಿನ್ನವಾಗಿ ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಮಂಗಳೂರಿನ ಅಪ್ಪು ಅಭಿಮಾನಿಯೊಬ್ಬರು ‘ಗಂಧದ ಗುಡಿ’ ಫೇಸ್ ಪೇಂಟಿಂಗ್ ಮೂಲಕ ಪುನೀತ್‌ಗೆ ವಿಭಿನ್ನ ಗೌರವ ಸಲ್ಲಿಸಿದ್ದಾರೆ (Appu Namana).
ಮೇಕಪ್ ಆರ್ಟ್ ಮೂಲಕ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಬ್ಯೂಟಿಷಿಯನ್, ಅಪ್ಪು ಅವರ ಅಭಿಮಾನಿ, ಮಂಗಳೂರಿನ ಬೆಂದೂರ್ ವೆಲ್‌ನಲ್ಲಿರುವ ಹೆಸರಾಂತ ಚೇತನಾ ಬ್ಯೂಟಿ ಲೌಂಜ್‌ನ ಚೇತನಾ ಅವರ ಕೈ ಚಳಕದಲ್ಲಿ ಅಪ್ಪು ಅಭಿನಯದ ʻಗಂಧದ ಗುಡಿʼ ಫೇಸ್ ಪೇಂಟಿಂಗ್ ಬಹಳ ಅದ್ಭುತವಾಗಿ ಮೂಡಿಬಂದಿದೆ.
ಮೇಕಪ್ ಆರ್ಟಿಸ್ಟ್ ಚೇತನಾ ಗಂಧದ ಗುಡಿ ಸಿನಿಮಾದಿಂದ ಪ್ರೇರಣೆಗೊಂಡು, ಆ ಸಿನಿಮಾದ ಪ್ರಾಕೃತಿಕ ಕಲ್ಪನೆಯನ್ನು ತಮ್ಮ ಕಲೆಯ ಮೂಲಕ ಬಿಂಬಿಸಿದ್ದಾರೆ. ಗಂಧದ ಗುಡಿಯ ಸಂಪೂರ್ಣ ದೃಶ್ಯವನ್ನು ಕೇವಲ ಒಂದು ಮೊಗದ ಮೇಲೆ ಸುಂದರವಾಗಿ ಚಿತ್ರಿಸಿ ಗಮನ ಸೆಳೆದಿದ್ದಾರೆ.
ಗಂಧದ ಗುಡಿ ಚಿತ್ರದಲ್ಲಿ ಕಂಡು ಬರುವ ಹಸಿರಿನ ಬನಸಿರಿಯನ್ನು ವಿದ್ಯಾರ್ಥಿಯೊಬ್ಬನ ಮುಖದ ಮೇಲೆ ಚಿತ್ರಿಸುವ ವಿಶಿಷ್ಟ ಪ್ರಯೋಗ ಇದಾಗಿದೆ. ʻಕಾಡನ್ನು ರಕ್ಷಿಸಿ-ಪ್ರಾಣಿಗಳನ್ನು ಉಳಿಸಿʼ ಎಂಬ ಧ್ಯೇಯ ವಾಕ್ಯದೊಂದಿಗೆ ತಮ್ಮ ಕಲೆಯನ್ನು ಅನಾವರಣಗೊಳಿಸಿದ್ದು, ಅವರ ಪರಿಸರ ಪ್ರೇಮವನ್ನು ಕೂಡ ಪ್ರತಿಬಿಂಬಿಸುತ್ತಿದೆ.
ಯಕ್ಷಗಾನ ರಂಗದಲ್ಲಿ ಸದಾ ಬಣ್ಣಹಚ್ಚಿ ಕುಣಿಯುವ ಯಕ್ಷಗಾನ ಕಲಾವಿದ, ಮಾಡೆಲ್, ಬಿಬಿಎ ವಿದ್ಯಾರ್ಥಿ ಭುವನ್ ಶೆಟ್ಟಿ ಅವರು ಈ ಗಂಧದ ಗುಡಿಯ ಚಿತ್ರಕಲೆಗೆ ಸಹಕರಿಸಿದ್ದಾರೆ. ಅಲ್ಲದೇ ಚೇತನಾ ಅವರ ಈ ವಿಭಿನ್ನ ಕಲಾಕುಂಚವನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದು, ಖ್ಯಾತ ಛಾಯಾಗ್ರಾಹಕ ಪುನೀಕ್ ಶೆಟ್ಟಿ.
ಕೆಲವು ದಿನಗಳ ಹಿಂದೆಯಷ್ಟೇ, ಯುವತಿಯೊಬ್ಬಳ ಮೊಗದ ಮೇಲೆ ಮೂರನೇ ಕಣ್ಣಿನ ಆರ್ಟ್ ಚಿತ್ರಿಸುವ ಮೂಲಕ ಜನಮನ ಸೆಳೆದಿದ್ದರು. ಅವರ ಈ ಮೂರನೇ ಕಣ್ಣಿನ ಫೇಸ್ ಪೇಂಟಿಂಗ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತಲ್ಲದೇ, ಕಲಾ ಪ್ರೇಮಿಗಳ ಹೃದಯ ಗೆದ್ದಿತ್ತು. ಚೇತನಾ ಬ್ಯೂಟಿ ಲೌಂಜ್‌ನ ಚೇತನಾ ಅವರು ರಿಯಲಿಸ್ಟಿಕ್ ಮೇಕಪ್, ಫೇಸ್ ಪೇಂಟಿಂಗ್ ಹಾಗೂ ಇನ್ನಿತರ ವಿಭಿನ್ನ ವಿನೂತನ ಪ್ರಯೋಗಗಳ ಮೂಲಕವೇ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.
ಇದನ್ನೂ ಓದಿ | Puneeth Parva | ಕಾಡು ಪ್ರಾಣಿ, ಗಿಡ-ಮರಗಳಲ್ಲೂ ಅಪ್ಪುವನ್ನು ನೋಡೋಣ: ರಾಘವೇಂದ್ರ ರಾಜಕುಮಾರ್