Site icon Vistara News

Appu Namana | ಎರಡನೇ ದಿನವೂ ಅಭಿಮಾನಿಗಳಿಂದ ಅಪ್ಪು ಹೆಸರಲ್ಲಿ ಸಮಾಜಮುಖಿ ಕಾರ್ಯ

appu namana

ಬೆಂಗಳೂರು: ದಿವಂಗತ ಡಾ.ಪುನೀತ್‌ ರಾಜಕುಮಾರ್‌ ಇಲ್ಲ ಎಂಬ ನೋವಿನಲ್ಲೂ ಅವರ ಅಭಿಮಾನಿಗಳು ಅಪ್ಪು ಆದರ್ಶಗಳನ್ನು ಪಾಲಿಸುವುದರ ಮೂಲಕ ಅವರ ಹೆಸರು ಶಾಶ್ವತವಾಗಿ ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಮೊದಲ ವರ್ಷದ ಪುಣ್ಯಸ್ಮರಣೆ (Appu Namana) ಮುಗಿದರೂ ಎರಡನೇ ದಿನವೂ ಸಮಾಜಮುಖಿ ಕಾರ್ಯಗಳ ಮೂಲಕ ಅಭಿಮಾನ ಮೆರೆದಿದ್ದಾರೆ. ಹಾಗಾದರೆ ಎಲ್ಲಿಲ್ಲಿ ಅಭಿಮಾನಿ ದೇವರುಗಳು ಯಾವೆಲ್ಲ ಕಾರ್ಯ ಕೈಗೊಂಡರು ಎಂಬುದರ ಮಾಹಿತಿ ಇಲ್ಲಿದೆ.

Appu Namana

ಕೇದಾರನಾಥ ದೇಗುಲದ ಮುಂದೆ ಅಭಿಮಾನಿಗಳಿಂದ ಅಪ್ಪು ನಮನ
ಕೊಪ್ಪಳದ ಗಂಗಾವತಿ ನಗರದ ಯುವ ಉದ್ಯಮಿ ದೀಪಕ್ ಭಾಂಟಿಯಾ ಹಾಗೂ ಅವರ ಸ್ನೇಹಿತ ಕಟ್ಟಾರ್ ಎಂಬುವವರು ಉತ್ತರಾಖಂಡದ ಕೇದಾರನಾಥ ದೇಗುಲದ‌ ಮುಂದೆ ಅಪ್ಪು ಭಾವಚಿತ್ರವಿರುವ ಕನ್ನಡ ಬಾವುಟ ಪ್ರದರ್ಶಿಸಿ ನಮಿಸಿದ್ದಾರೆ. ಉತ್ತರ ಭಾರತದ ಪ್ರವಾಸಕ್ಕೆ ತೆರಳಿರುವ ಈ ಸ್ನೇಹಿತರು ಕೇದಾರನಾಥದಲ್ಲಿ ಬಾವುಟ ಪ್ರದರ್ಶಿಸಿ ಸಂಭ್ರಮಿಸಿದ್ದಾರೆ. ಪುನೀತ್ ಕುಟುಂಬಕ್ಕೆ ಒಳಿತಾಗಲಿ, ಪುನೀತ್ ಮತ್ತೆ ಹುಟ್ಟಿ ಬರಲಿ ಎಂದು ಕೇದಾರನಾಥದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಅಪ್ಪು ಹೆಸರಲ್ಲಿ ಚಿಕನ್‌ ಬಿರಿಯಾನಿ ಹಂಚಿಕೆ
ಮೈಸೂರಿನಲ್ಲಿ ಡಾ.ಪುನೀತ್ ರಾಜಕುಮಾರ್ ಅವರ ಮೊದಲನೇ ಪುಣ್ಯ ಸ್ಮರಣಾರ್ಥ ಅಪ್ಪು ಅಭಿಮಾನಿ ಯೋಗೀಶ್ ಅವರು ಅಪ್ಪು ಹೆಸರಲ್ಲಿ ಬಿರಿಯಾನಿ ಹಂಚಿದರು. ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು, ಆಟೋ ಚಾಲಕರಿಗೆ ಚಿಕನ್‌ ಬಿರಿಯಾನಿ ಊಟ ಹಾಕಿಸಿದರು. ಇದಕ್ಕೂ ಮೊದಲು ಪುನೀತ್ ಫೋಟೊಗೆ ಪೂಜೆ ಸಲ್ಲಿಸಿ ನಮಿಸಿದರು.

Appu Namana

ಎರಡನೇ ದಿನವೂ ಮುಂದುವರಿದ ರಕ್ತದಾನ ಶಿಬಿರ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಅಪ್ಪು ಅಭಿಮಾನಿ ಬಳಗ ಹಾಗೂ ಸಮುದಾಯ ಆರೋಗ್ಯ ಕೇಂದ್ರ ನಾಲತವಾಡ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದರು. ಜತೆಗೆ ನಗರದ ಕಾಲೇಬಾಗ್ ಪ್ರದೇಶದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳು ಅವರ ಪುಣ್ಯ ಸ್ಮರಣೆಯನ್ನ ವಿಶೇಷವಾಗಿ ಆಚರಿಸಿದರು. ಪುನೀತ್ ರಾಜಕುಮಾರ್ ಭಾವಚಿತ್ರವನ್ನಿಟ್ಟು, ಹಾರ ಹಾಕಿ ಅಕ್ಕಪಕ್ಕದಲ್ಲಿ ದೀಪಗಳನ್ನು ಬೆಳಗಿಸಿ, ತೆಂಗಿನಕಾಯಿಯ ಕರ್ಪೂರದಾರತಿ ಬೆಳಗಿ ಪೂಜೆ ಸಲ್ಲಿಸಿದರು. ಇದರ ಜತೆಗೆ ಬೃಹತ್ ಕಟೌಟ್ ಹಾಕಿ ಅದಕ್ಕೆ ಹಾರ ಹಾಕಿದರು. ಪ್ರದೇಶದ ನೂರಾರು ಅಭಿಮಾನಿ ಯುವಕರು ಪುನೀತ್ ಭಾವಚಿತ್ರಕ್ಕೆ ಮೋಂಬತ್ತಿ ಬೆಳಗುವ ಮೂಲಕ ಅಭಿಮಾನ ಮೆರೆದರು.

Appu Namana

ಬರಮಪ್ಪನ ಜಾತ್ರೆಯಲ್ಲಿ ಅಪ್ಪು ನಮನ
ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ನೀಲಕಂಠೇಶ್ವರ ಮಠದಲ್ಲಿ ನಡೆದ ಬರಮಪ್ಪನ ಜಾತ್ರೆಯಲ್ಲಿ ಪುನೀತ್‌ ರಾಜಕುಮಾರ್‌ ಸ್ಮರಣೆ ಮಾಡಲಾಯಿತು. ಜಾತ್ರೆಯಲ್ಲಿ ದೇವರ ಮೂರ್ತಿ ಪಕ್ಕ ಅಪ್ಪು ಭಾವಚಿತ್ರ ಇಟ್ಟು ಪೂಜೆ ಮಾಡಿದರು. ಮಹಿಳೆಯರು ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.

ಅಪ್ಪು ಸ್ಮರಣೆಯಲ್ಲಿ ಬೆಟ್ಟ ಹತ್ತಿದ ಪುಟಾಣಿಗಳು
ಡಾ.ಪುನೀತ್ ರಾಜಕುಮಾರ್ ಪ್ರಥಮ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟ ಹತ್ತಿ ನೂರಾರು ನಾಗರಿಕರು ಹಾಗೂ ಮಕ್ಕಳು ಸ್ಮರಿಸಿದರು. ಮೈಸೂರಿಗೆ ಬಂದಾಗಲೇ ಅಪ್ಪು ಟ್ರಕ್ಕಿಂಗ್ ಮಾಡುತ್ತಿದ್ದರು. ವಾಕಿಂಗ್, ಜಾಗಿಂಗ್ ಬದಲು ಮೆಟ್ಟಿಲು ಹತ್ತಲು ಇಷ್ಟ ಪಡುತ್ತಿದ್ದರು. ಹೀಗಾಗಿ ಅವರ ಅಭಿಮಾನಿಗಳು ಬೆಟ್ಟ ಹತ್ತಿ ಅಭಿಮಾನ ಮರೆದರು.

Appu Namana

ಸಮಾಧಿ ಬಳಿ ಮುಗಿಯದ ಜನ ಸಾಗರ
ದೇವರ ದರ್ಶನ ಪಡೆಯುವ ರೀತಿ ಅಪ್ಪು ಇರುವ ಸಮಾಧಿ ಬಳಿಯು ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಪುನೀತರಾದರು. ಎರಡನೇ ದಿನವೂ ಕಂಠೀರವ ಸ್ಟುಡಿಯೊಗೆ ಮಕ್ಕಳು ಮರಿಯನ್ನದೇ ಕುಟುಂಬ ಸಮೇತ ಆಗಮಿಸಿದರು. ಈ ವೇಳೆ ಕುಶಾಲ್ ಎಂಬ ಪುಟ್ಟ ಅಭಿಮಾನಿಯೊಬ್ಬ ಮಾಸ್‌ ಡೈಲಾಗ್‌ ಮೂಲಕ ಎಲ್ಲರ ಗಮನ ಸೆಳೆದರು. ʻನಾವು ಇಲ್ಲಿ ಎಷ್ಟೇ ಐಷರಾಮಿ ಮನೆ ಕಟ್ಟಿದರೂ, ಅದು ಕಸ್ತೂರಿ ನಿವಾಸ ಆಗಲ್ಲ. ನಾವು ಇಲ್ಲಿ ಎಷ್ಟೇ ಬ್ರ್ಯಾಂಡ್ ಆಗಿರೋ ವಾಹನ ತಗೊಂಡ್ರೂ, ಅದು ಬಬ್ರುವಾಹನ ಆಗಲ್ಲ. ನೀನು ಇಲ್ಲಿ ಎಷ್ಟೇ ಸಾವಿರ ಕನಸು ಕಾಣು, ಆದರೆ ಅದು ಎರಡು ಕನಸು ಆಗೋದಿಲ್ಲ. ಎಷ್ಟೇ ಗಂಡುಗಳು ಬಂದ್ರೂ, ಬಹದ್ದೂರ್ ಗಂಡು ತರಹ ಕತ್ತಿವರಸೆ ಮಾಡೋಕೆ ಬರೋದಿಲ್ಲʼ ಎಂದು ಬೆಂಗಳೂರು ಮೂಲದ ಹುಡುಗ ಕುಶಾಲ್ ಡೈಲಾಗ್‌ ಹೇಳಿದ.

ಇದನ್ನೂ ಓದಿ | Puneeth Rajkumar | ಮಲ್ಲೇಶ್ವರದಲ್ಲಿ ಪುನೀತ್ ಸ್ಯಾಟಲೈಟ್ ವರ್ಕ್ ಸ್ಟೇಷನ್ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

Exit mobile version