ಬೆಂಗಳೂರು: ರಾಜರತ್ನ ಮರೆಯಾಗಿ ವರ್ಷ ಕಳೆದರೂ, ಅಭಿಮಾನಿಗಳಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ದಿವಂಗತ ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ (Appu Namana) ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ರಕ್ತದಾನ, ಅನ್ನಸಂತರ್ಪಣೆಗಳನ್ನು ಮಾಡಿದ್ದಾರೆ. ಇನ್ನು ಹಲವು ನೇತ್ರಾದಾನ, ದೇಹದಾನಕ್ಕೆ ಸಹಿ ಹಾಕಿದ್ದಾರೆ. ಕೆಲವರು ಬಡ ವಿದ್ಯಾರ್ಥಿಗಳಿಗೆ ಸೈಕಲ್, ಪುಸ್ತಕ ವಿತರಣೆ ಮಾಡಿದ್ದರೆ, ಅಭಿಮಾನಿ ಸಂಘವೊಂದು ವೃದ್ಧಾಶ್ರಮ ಆರಂಭಕ್ಕೆ ಭೂ ಪೂಜೆಯನ್ನೂ ನೆರವೇರಿಸಿದೆ.
ವಿಜಯನಗರದಲ್ಲಿ ಬಡ ವಿದ್ಯಾರ್ಥಿಗಳಿಗೆ ಸೈಕಲ್-ಪುಸ್ತಕ ವಿತರಣೆ
ದೊಡ್ಮನೆ ಹುಡುಗ ಅಪ್ಪು ನಮ್ಮನ್ನಗಲಿ ಒಂದು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ವಿಜಯನಗರದಲ್ಲಿ ಮೊದಲ ವರ್ಷದ ಪುಣ್ಯಸ್ಮರಣೆ ಆಯೋಜನೆ ಮಾಡಲಾಗಿತ್ತು. ಹೊಸಪೇಟೆಯ ಪುನೀತ್ ರಾಜಕುಮಾರ್ ವೃತ್ತದಲ್ಲಿರುವ ಅಪ್ಪು ಕಂಚಿನ ಪ್ರತಿಮೆಯ ಬಳಿ ಬೆಳಗ್ಗೆಯಿಂದಲೇ ಆಗಮಿಸುತ್ತಿದ್ದ ಅಭಿಮಾನಿಗಳು, ಪೂಜೆ ಮಾಡಿ, ಸೆಲ್ಫಿ ತೆಗೆದುಕೊಳ್ಳುತ್ತಿದ್ದ, ಚಿತ್ರಣ ಕಂಡು ಬಂತು.
ಹೊಸಪೇಟೆಯ ಅಭಿಮಾನಿಗಳಾದ ಕಿಚಡಿ ವಿಶ್ವ, ಜೋಗಿ ತಾಯಪ್ಪ ಮತ್ತು ಸಚಿವ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ಅವರು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಸಮಾಜ ಸೇವೆ ನಾವು ಮಾಡುತ್ತಿದ್ದೇವೆ. ದೇವರು ಎಷ್ಟು ಶಕ್ತಿ ಕೊಟ್ಟಿದ್ದಾನೋ, ಅಷ್ಟು ಸೇವೆ ಮಾಡುತ್ತೇವೆ. ಈಗ ಬಡ ವಿದ್ಯಾರ್ಥಿಗಳಿಗೆ ಸೈಕಲ್ ಹಾಗೂ ಪುಸ್ತಕಗಳನ್ನು ವಿತರಿಸಿದ್ದೇವೆ ಎಂದು ಸಿದ್ದಾರ್ಥ ಸಿಂಗ್ ಹೇಳಿದರು. ಪೂಜೆಗೂ ಮುನ್ನ ಹಂಪಿಯಿಂದ ಹೊಸಪೇಟೆಯ ಪುನೀತ್ ಸರ್ಕಲ್‌ಗೆ ಜ್ಯೋತಿ ತರಲಾಯಿತು. ಈ ವೇಳೆ ಅಪ್ಪು ಪರ ಜಯಘೋಷ ಕೂಗಲಾಯಿತು.
ಮಂತ್ರಾಲಯಕ್ಕೂ ಪುನೀತ್‌ಗೂ ಉಂಟು ನಂಟು
ನಟ ಪುನೀತ್ ರಾಜಕುಮಾರ್‌ಗೆ ಗುರು ರಾಘವೇಂದ್ರ ಎಂದರೆ ಅದೇನೋ ಪ್ರೀತಿ. ಮಂತ್ರಾಲಯಕ್ಕೂ ಅವರಿಗೂ ಬಹಳಷ್ಟು ನಂಟು ಇತ್ತು. ಈ ಹಿನ್ನೆಲೆ ಮಂತ್ರಾಲಯದಲ್ಲಿ ಅಪ್ಪು ಫ್ಯಾನ್ಸ್ ನಿರ್ಗತಿಕರಿಗೆ ಮಾರ್ನಿಂಗ್ ಟಿಫಿನ್ ವಿತರಣೆ ಮಾಡಿದ್ದಾರೆ. ರಾಯಚೂರಿನ ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ಸುಮಾರು 300 ಜನರಿಗೆ ಉಪಾಹಾರ ವಿತರಣೆ ಮಾಡಿದರು. ಜತೆಗೆ ಪಲಾವ್, ಬಾಳೆಹಣ್ಣು ವಿತರಣೆ ಮಾಡಲಾಯಿತು.
ಅಪ್ಪು ಹೆಸರಿನಲ್ಲಿ ವೃದ್ಧಾಶ್ರಮ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭೌತಿಕವಾಗಿ ಅಗಲಿ ಒಂದು ವರ್ಷವಾಗುತ್ತಿದ್ದು, ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಾಮಾಜಿಕ ಕೆಲಸಗಳನ್ನು ಮುಂದುವರಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಅಪ್ಪು ಅಭಿಮಾನಿಗಳು ಅವರ ಹೆಸರಿನಲ್ಲಿ ವೃದ್ಧಾಶ್ರಮದ ಭೂಮಿಪೂಜೆ ನೆರವೇರಿಸಲಾಗಿದೆ. ಗಂಗಾವತಿ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಎಲ್‌ವಿಟಿ ಕಾಲೋನಿಯಲ್ಲಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಂದ ವೃದ್ಧಾಶ್ರಮ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಭೂಪೂಜೆ ನೆರವೇರಿಸಿದ್ದಾರೆ.
ಮತ್ತೊಂದು ಕಡೆ ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ನೂರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಒಂದು ಕ್ವಿಂಟಾಲ್ ಅಕ್ಕಿಯಲ್ಲಿ ತಯಾರಿಸಿದ್ದ ವಿವಿಧ ಖಾದ್ಯಗಳನ್ನು ನೀಡಲಾಯಿತು. ಇದರ ಜತೆಗೆ ಅನೇಕರು ನೇತ್ರದಾನಕ್ಕೆ ಒಪ್ಪಿಗೆ ಪತ್ರ ನೀಡಿದರು. ಬಸ್ ನಿಲ್ದಾಣದ ಬಳಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಭಾವಚಿತ್ರದ ಬಳಿ ಸೆಲ್ಫಿ ತೆಗೆದುಕೊಂಡು ನೆಚ್ಚಿನ ನಟನನ್ನು ಸ್ಮರಿಸಿದರು.
2 ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ
ಕೋಲಾರದ ಶ್ರೀನಿವಾಸಪುರ ಪಟ್ಟಣದ ಪುರಸಭೆ ಕಚೇರಿ ಮುಂಭಾಗದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಅಪ್ಪು ಭಾವಚಿತ್ರವಿಟ್ಟು ಅಲಂಕರಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಅರಮನೆ ನಗರಿ ಮೈಸೂರಿನಲ್ಲಿ ಅಭಿಮಾನಿಗಳಿಂದ ರಕ್ತದಾನ
ಮೈಸೂರಿನಲ್ಲೂ ಅಪ್ಪು ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಲಯನ್ಸ್ ಜೀವಾಧಾರ ರಕ್ತ ನಿಧಿ ವತಿಯಿಂದ ಶಿಬಿರ ಆಯೋಜನೆ ಆಯೋಜಿಸಲಾಗಿತ್ತು. ನ್ಯೂ ಸಯ್ಯಾಜಿರಾವ್ ರಸ್ತೆಯ ರಕ್ತನಿಧಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿಮಾನಿಗಳು ರಕ್ತದಾನ ಮಾಡಿದರು. ಡಾ.ಪುನೀತ್ ರಾಜಕುಮಾರ್ ಅವರಿಂದ ಸ್ಫೂರ್ತಿ ಪಡೆದ ಅಭಿಮಾನಿಗಳು ರಕ್ತದಾನ, ನೇತ್ರದಾನಕ್ಕೆ ಆಸಕ್ತಿ ತೋರುತ್ತಿದ್ದಾರೆ.
ಡಾ.ಪುನೀತ್ ರಾಜಕುಮಾರ್ ಬಸ್ ನಿಲ್ದಾಣವೆಂದು ನಾಮಕರಣ
ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ಪುನೀತ್ ಅಭಿಮಾನಿಗಳು ಬಸ್ ತಂಗುದಾಣಕ್ಕೆ “ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಬಸ್ ನಿಲ್ದಾಣ”ವೆಂದು ನಾಮಕರಣ ಮಾಡಿದ್ದಾರೆ.
ಶ್ರೀಗಂಧದ ಸಸಿ ವಿತರಣೆ
ಕೋಲಾರದ ಬಂಗಾರಪೇಟೆ ಪಟ್ಟಣದ ವಿಜಯ ಚಿತ್ರಮಂದಿರದ ಎದುರು ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿಸಲಾಯಿತು. ಜತೆಗೆ ಗಂಧದ ಗುಡಿ ಸಿನಿಮಾ ಬಿಡುಗಡೆ ಹಿನ್ನೆಲೆ ಶ್ರೀಗಂಧದ ಸಸಿಯನ್ನು ಅಭಿಮಾನಿಗಳ ಸಂಘದ ವತಿಯಿಂದ ವಿತರಣೆ ಮಾಡಲಾಗಿದೆ.
ಗಾಜನೂರಿನಲ್ಲಿ ಎಡೆ ಇಟ್ಟು ಸ್ಮರಣೆ
ಚಾಮರಾಜನಗರದ ಡಾ.ರಾಜಕುಮಾರ್ ಹುಟ್ಟೂರು ಗಾಜನೂರಿನಲ್ಲಿ ಅಪ್ಪು ಪುಣ್ಯಸ್ಮರಣೆಯನ್ನು ವಿಶೇಷವಾಗಿ ಮಾಡಲಾಯಿತು. ತೋಟದ ಕಾರ್ಮಿಕರು ಹಾಗೂ ಅಭಿಮಾನಿಗಳು ಅಪ್ಪು ಭಾವಚಿತ್ರವಿಟ್ಟು, ಇಷ್ಟ ತಿನಿಸುಗಳನ್ನು ಎಡೆ ಇಟ್ಟು ನಮಿಸಿದರು. ಇದೇ ವೇಳೆ 300 ಕಿಲೋ ಮೀಟರ್ ದೂರದ ಶಿವಮೊಗ್ಗದಿಂದ ಬಂದ ಅಪ್ಪು ಅಭಿಮಾನಿಗಳು, ಕಟೌಟ್ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಜತೆಗೆ ದೀರ್ಘದಂಡ ನಮಸ್ಕರಿಸಿ ಮತ್ತೆ ಹುಟ್ಟಿ ಬನ್ನಿ ಎಂದು ಘೋಷಣೆ ಕೂಗಿದರು.
ಇದನ್ನೂ ಓದಿ | Appu Namana | ಅಪ್ಪು ಇಲ್ಲದೆ 1 ವರ್ಷ: ಅಂದು ಮುತ್ತಿಟ್ಟು ಕಳುಹಿಸಿಕೊಟ್ಟಿದ್ದ ಸಿಎಂ ಬೊಮ್ಮಾಯಿ ವರ್ಷದ ಬಳಿಕ ಹೇಳಿದ್ದೇನು?