ಬೆಂಗಳೂರು: ಕನ್ನಡಿಗರ ಕಣ್ಮಣಿ, ಪ್ರೀತಿಯ ಮನೆ ಮಗನಂತಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡುವ ಅದ್ಧೂರಿ ಕಾರ್ಯಕ್ರಮಕ್ಕೆ ಸಕಲ ರೀತಿಯಲ್ಲೂ ಸಿದ್ಧತೆ ನಡೆದಿದೆ. ವಿಧಾನ ಸೌಧದ ಮುಂದಿನ ಮೆಟ್ಟಿಲುಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ರಾಜರತ್ನ ಪುನೀತ್ ರಾಜ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮಕ್ಕೆ ಮೂವರು ಮುಖ್ಯ ಅತಿಥಿಗಳಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಜ್ಯೂನಿಯರ್ ಎನ್‌ಟಿಆರ್ ಮತ್ತು ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥರಾಗಿರುವ ಸುಧಾ ಮೂರ್ತಿ. ಈ ಪೈಕಿ ಸೂಪರ್‌ಸ್ಟಾರ್ ರಜನೀಕಾಂತ್ ಅವರು ಈಗಾಗಲೇ ಬೆಂಗಳೂರು ತಲುಪಿದ್ದಾರೆ.
ಅವರು ಮಧ್ಯಾಹ್ನ ಒಂದು ಗಂಟೆಗೆ ಚೆನ್ನೈನಿಂದ ಹೊರಟು ಮೂರು ಗಂಟೆಗೆ ಬೆಂಗಳೂರು ತಲುಪುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಪುನೀತ್ ಬಗ್ಗೆ ಅಪಾರ ಪ್ರೀತಿ ಹೊಂದಿರುವ ರಜನಿಕಾಂತ್ ಅವರು ಮಧ್ಯಾಹ್ನ ೧೨ ಗಂಟೆಯ ಹೊತ್ತಿಗೇ ಬೆಂಗಳೂರು ವಿಮಾನ ನಿಲ್ದಾಣ ತಲುಪಿದ್ದಾರೆ. ಅವರನ್ನು ರಾಜ್ಯದ ಆರೋಗ್ಯ ಸಚಿವ ಕೆ. ಸುಧಾಕರ್ ಮತ್ತು ತೋಟಗಾರಿಕಾ ಸಚಿವ ಮುನಿರತ್ನ ಅವರು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದರು. ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುತ್ತಿದ್ದಂತೆಯೇ ರಜನಿಕಾಂತ್ ಅವರು ಇಳಿದು ಓಡೋಡಿ ಬಂದು ಸುಧಾಕರ್ ಅವರ ಕೈ ಹಿಡಿದುಕೊಂಡ ಮತ್ತು ಮುನಿರತ್ನ ಅವರನ್ನು ತಬ್ಬಿಕೊಂಡ ರೀತಿಯೇ ಕರ್ನಾಟಕದ ಬಗ್ಗೆ ಅವರಿಗಿರುವ ಪ್ರೀತಿಯನ್ನು ತೋರಿಸುತ್ತಿತ್ತು.
ರಜನಿಕಾಂತ್ ಅವರು ಈ ಹಿಂದೆ ಅಂದು ʼಸಿಂಹದ ಹೊಟ್ಟೆಯಲ್ಲಿ ಸಿಂಹದ ಮರಿಯೇ ಹುಟ್ಟುತ್ತದೆʼʼ ಎಂದು ಪುನೀತ್ ಅವರನ್ನು ಉದ್ದೇಶಿಸಿ ಹೇಳಿದ್ದರು. ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಅವರು ತಮ್ಮ ನೆನಪುಗಳನ್ನು ಮೆಲುಕು ಹಾಕಲಿದ್ದಾರೆ.
ಮುಖ್ಯಮಂತ್ರಿಯಿಂದ ಪ್ರಶಸ್ತಿ ಪ್ರದಾನ
ದೊಡ್ಮನೆ ಅಭಿಮಾನಿಗಳ ಸಂಭ್ರಮಕ್ಕೆ ಸಾಕ್ಷಿಯಾಗಲಿರುವ ಸಂಜೆ ಕಾರ್ಯಕ್ರಮದಲ್ಲಿ ಸಿಎಂ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದಕ್ಕೂ ಮುನ್ನ ಮಧ್ಯಾಹ್ನ 2 ಘಂಟೆಯಿಂದ ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧದವರೆಗೆ ಪುನೀತ್ ಅಭಿಮಾನಿಗಳ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಅದ್ಧೂರಿ ವೇದಿಕೆ ನಿರ್ಮಿಸಲಾಗಿದೆ.
ಟ್ರಾಫಿಕ್ ನಿರ್ಬಂಧ
ಭವ್ಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂಭಾಗದ ರಸ್ತೆಯನ್ನು ಮಧ್ಯಾಹ್ನ ಪೂರ್ಣ ಬಂದ್ ಮಾಡಲಾಗುತ್ತಿದೆ. ಬಾಳೆಕುಂದ್ರಿ ಸರ್ಕಲ್ ಹಾಗೂ ಮೀಸೆ ತಿಮ್ಮಯ್ಯ ಸರ್ಕಲ್‌ನಿಂದ ಮತ್ತು ಕೆ.ಆರ್ ವೃತ್ತದಿಂದ ವಿಧಾನಸೌಧದ ಕಡೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದ್ದರಿಂದ ವಾಹನ ಸವಾರರು ಈ ರಸ್ತೆಗಳನ್ನು ಬಳಸದಿರಲು ಮತ್ತು ಪರ್ಯಾಯ ಮಾರ್ಗಗಳನ್ನು ಬಳಸಲು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಿಧಾನಸೌಧದ ಮುಂಭಾಗದ ಡಾ.ಬಿಆರ್ ಅಂಬೇಡ್ಕರ್ ರಸ್ತೆಯನ್ನು ಬಂದ್ ಮಾಡಲಾಗುತ್ತಿದ್ದು, ಬದಲಿ ಮಾರ್ಗದಲ್ಲಿ ಸಂಚರಿಸಬಹುದು. ಈ ಸಂದರ್ಭದಲ್ಲಿ ಅಂಬೇಡ್ಕರ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಆಲಿ ಆಸ್ಕರ್ ರಸ್ತೆ, ಅರಮನೆ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಕ್ಲೀನ್ಸ್ ರಸ್ತೆ ಮತ್ತು ಕನ್ನಿಂಗ್ ಹ್ಯಾಮ್ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಇದನ್ನೂ ಓದಿ | Appu Namana | ಅಪ್ಪುಗೆ ನಾಳೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ, ಸಾವಿರಾರು ಜನರ ಆಗಮನ ನಿರೀಕ್ಷೆ