ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಬದಲಿ ನಿವೇಶನ ಪಡೆಯಲು ಯಾವುದೇ ಪ್ರಭಾವ ಬಳಸಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. ಕಳೆದ 17 ವರ್ಷಗಳ ಹಿಂದೆ ಹಿಂದೆ ಬಿಡಿಎ (BDA Site) ನಿಂದ ಮಂಜೂರಾದ ನಿವೇಶನವನ್ನು, ವಿವಿಧ ಕಾರಣಗಳನ್ನು ನೀಡಿ ಮಂಜೂರಾತಿ ಮಾಡಿದ ಸಂಸ್ಥೆಯೇ (ಬಿಡಿಎ) ವಾಪಸು ಪಡೆದಿದೆ. ಮಂಜೂರಾತಿ ಪಡೆದ ನಿವೇಶನಕ್ಕಾಗಿ ಕಳೆದ ಹದಿನೇಳು ವರ್ಷಗಳಲ್ಲಿ ಮೂರು ಬಾರಿ ನೋಂದಣಿ ಸಂಬಂಧ ಶುಲ್ಕ ಪಾವತಿ ಮಾಡಿದ್ದೇನೆ. ಬಿಡಿಎ ನಿವೇಶನ ಪಡೆದು ಮನೆ ಕಟ್ಟಲು ಸಾಧ್ಯವಾಗಿಲ್ಲ. ಬಿಡಿಎಯಿಂದ ನ್ಯಾಯ ಪಡೆಯಲು, ನ್ಯಾಯಾಲಯದ ಮೊರೆ ಹೋಗಲು ಸಹ ನಿರ್ಧರಿಸಿದ್ದೇನೆ ಎಂದೂ ಅವರು ತಿಳಿಸಿದ್ದಾರೆ.
ಈ ಹಿಂದೆ, ಶಾಸಕರೂ ಹಾಗೂ ಸಚಿವರಿಗೆ, ಬಿಡಿಎ ನಿವೇಶನ ಹಂಚಿಕೆ ಬಗ್ಗೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿಯ ಸಂಬಂಧ ನ್ಯಾಯಮೂರ್ತಿ ಫಾರೂಖ್ ಸಮಿತಿಯೂ ಸರ್ಕಾರ ಸ್ವೀಕರಿಸಿದ್ದು, ಬಿಡಿಎ ನಿಯಮಾವಳಿಗಳ ಅನುಸಾರವಾಗಿಯೇ, ನನಗೆ ನಿವೇಶನ ಮಂಜೂರಾತಿ ಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.
ಅಧಿಕಾರ ದುರ್ಬಳಕೆ ಇಲ್ಲ
ಬಿಡಿಎದಿಂದ ನಿವೇಶನ ಮಂಜೂರಾತಿಗಾಗಿ ಯಾವುದೇ ಪ್ರಭಾವ ಅಥವಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ. G ಕೆಟಗರಿ ಅಡಿಯಲ್ಲಿ, ಈ ಹಿಂದೆ ಇತರ ಶಾಸಕರೂ ಹಾಗೂ ಸಚಿವರು ಮಂಜೂರಾತಿ ಪಡೆದ ರೀತಿಯಲ್ಲಿಯೇ ನನಗೂ ಬಿಡಿಎ ನಿವೇಶನ ಮಂಜೂರಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಹಿಂದೆ ನೂರಾರು ಮಂದಿ, ಬಿಡಿಎದಿಂದ ನಿವೇಶನ ಮಂಜೂರಾತಿ ಪಡೆದು, ನೋಂದಣಿ ಶುಲ್ಕ ಕಟ್ಟಿದ್ದರೂ, ನಿವೇಶನವನ್ನು ಪಡೆಯುವುದರಿಂದ ವಂಚಿತರಾಗಿದ್ದರು. ನಂತರ ನ್ಯಾಯಾಲಯದ ಆದೇಶದ ಮೇರೆಗೆ ಅವರಿಗೆ, ಬಿಡಿಎ ಪರ್ಯಾಯ ನಿವೇಶನ ನೀಡಿ, ಪರಿಹಾರ ಒದಗಿಸಿದೆ ಎಂದು ತಿಳಿಸಿದ್ದಾರೆ.
ಆರಗ ಜ್ಞಾನೇಂದ್ರ ವಿರುದ್ಧ ಆರೋಪ ಏನು?
ಬಿಡಿಎ ಬದಲಿ ನಿವೇಶನ ಪಡೆಯಲು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಲೋಕಾಯುಕ್ತದಲ್ಲಿ ದೂರು ಕೂಡ ದಾಖಲಾಗಿತ್ತು. ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸುವ ಜಿ ಕೆಟಗರಿ ನಿವೇಶನ ವಿತರಣೆಯನ್ನು ಕೈ ಬಿಡಲಾಗಿದೆ. ಆದರೆ, ಬದಲಿ ನಿವೇಶನ ಎಂಬ ಮಾರ್ಗವನ್ನು ಬಳಸಿಕೊಂಡು ಆರಗ ಜ್ಞಾನೇಂದ್ರ ಸೇರಿದಂತೆ ಇತರ ಪ್ರಮುಖರಿಗೆ ಭೂಮಿಯನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಸುಪ್ರೀಂ ಕೋರ್ಟ್ ಛೀಮಾರಿ
ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಗಣ್ಯರಿಗೆ ಬದಲಿ ನಿವೇಶನ ಮಂಜೂರು ಮಾಡುವ ಮೂಲಕ ಬಿಡಿಎ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ, ಬಿಡಿಎ ಆಯುಕ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೇ ಆಯುಕ್ತರ ಸ್ಥಳಾಂತರಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್, ಯಾವುದೇ ಪ್ರಮುಖ ಆದೇಶಗಳಿಗೆ ಅವರು ಹಾಕುವಂತಿಲ್ಲ ಎಂದು ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ | Amit shah in state | ಸರಕಾರದ ನಡೆ ಬಗ್ಗೆ ಅಮಿತ್ ಶಾಗೆ ತೃಪ್ತಿ ಎಂದ ಆರಗ ಜ್ಞಾನೇಂದ್ರ