ಹಾಸನ: ಅಗ್ನಿಪಥ್ ಹೋರಾಟದ ಹಿಂದಲ್ಲ ಮುಂದಿರೋದೆ ಕಾಂಗ್ರೆಸ್. ಅವರಿಗೆ ಮೋದಿ ಸರ್ಕಾರ ಮಾಡಿದ್ದೆಲ್ಲಾ ವಿರೋಧಿಸುವ ಚಟವಿದೆ. ಅಗ್ನಿಪಥ್ ಬಹಳ ಒಳ್ಳೆಯ ಯೋಜನೆಯಾಗಿದ್ದು, ಸೇನೆಗೆ ಯುವಶಕ್ತಿಯ ಅಗತ್ಯವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ನಗರದಲ್ಲಿ ಪೊಲೀಸ್ ಇಲಾಖೆಯ ಕಟ್ಟಡಗಳ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿ ಮಾತನಾಡಿದ ಅವರು, ಸೇನೆಯಲ್ಲಿ ಪೆನ್ಷನ್‌ಗೆ ಹೆಚ್ಚು ಹಣ ಖರ್ಚಾಗುತ್ತಿದೆ. ಇದರಿಂದ ಅಭಿವೃದ್ಧಿಗೆ ಹಣ ಸಾಕಾಗುತ್ತಿಲ್ಲ. ಹೀಗಾಗಿ ಈ ಯೋಜನೆ ಮಾಡಲಾಗಿದೆ. ರಾಜ್ಯ ಸರ್ಕಾರದ ಪೊಲೀಸ್ ನೇಮಕಾತಿಯಲ್ಲೂ ಅಗ್ನಿವೀರರಿಗೆ ಹೆಚ್ಚಿನ ಮೀಸಲಾತಿ ಕೊಡುವ ಬಗ್ಗೆ ಯೋಚಿಸಲಾಗಿದೆ, ಪೊಲೀಸ್ ಇಲಾಖೆಯಲ್ಲಿ ಶೇ.10, ಅಗ್ನಿಶಾಮಕ ದಳದಲ್ಲಿ ಶೇ.50 ಮೀಸಲಾತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇ.ಡಿ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು “”ಯಾರು ತಪ್ಪು ಮಾಡಿದ್ದಾರೆ ಅವರನ್ನು ಇ.ಡಿ. ಕರೆಯುತ್ತದೆ. ವಿಚಾರಣೆಗೆ ಕರೆಯಬಾರದು ಅಂತ ಹೇಳಲು ಆಗುತ್ತದಾ, ಈ ದೇಶದಲ್ಲಿ ಗಾಂಧಿ ಕುಟುಂಬಕ್ಕೆ ಒಂದು ಕಾನೂನು, ಜನಸಾಮಾನ್ಯರಿಗೆ ಒಂದು ಕಾನೂನಿಲ್ಲ. ತನಿಖೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್‌ನವರಿಗೆ ನಾಚಿಕೆ ಆಗಬೇಕು, ಕಾನೂನನ್ನು ಗೌರವಿಸದೇ ಇವರನ್ನು ಇನ್ಯಾರು ಗೌರವಿಸುತ್ತಾರೆ ಎಂದು ಹರಿಹಾಯ್ದರು.
ಇದನ್ನೂ ಓದಿ | ಮೂರೂ ಸೇನಾ ಮುಖ್ಯಸ್ಥರಿಂದ ನಾಳೆ ಪ್ರಧಾನಿ ಮೋದಿ ಭೇಟಿ, ಅಗ್ನಿಪಥ್ ಚರ್ಚೆ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ “”ಯತ್ನಾಳ್ ಅವರು ಇಷ್ಟ ಬಂದ ಹಾಗೆ ಹೇಳುತ್ತಾ ಇರುತ್ತಾರೆ. ಇದರಿಂದ ಯಾವುದೇ ವ್ಯತ್ಯಾಸವಾಗದು. ನಮ್ಮ ಹಿರಿಯ ನಾಯಕರು ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ವಿಚಾರದಲ್ಲಿ ಹೈಕಮಾಂಡ್ ಸಶಕ್ತವಾಗಿದ್ದು, ಎಲ್ಲವನ್ನೂ ನಿಭಾಯಿಸುತ್ತದೆ, ಮುಂದೆ ಎಲ್ಲವೂ ಸರಿಯಾಗುತ್ತದೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಬಗ್ಗೆ ಮಾಹಿತಿ ನೀಡಿ ಅವರು, ಅಕ್ರಮದ ಸಂಪೂರ್ಣ ತನಿಖೆಗೆ ಆದೇಶ ಕೊಟ್ಟಿದ್ದೇವೆ. ಅಕ್ರಮದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳು ಹಾಗೂ ಬ್ರೋಕರ್‌ಗಳನ್ನು ಜೈಲಿಗೆ ಕಳುಹಿಸುತ್ತೇವೆ ಎಂದರು.
ಇದನ್ನೂ ಓದಿ | ಹೊಸ ಮಾದರಿಯ ಯುದ್ಧ ಎದುರಿಸಲು ಅಗ್ನಿಪಥ್ ಅಸ್ತ್ರ; ಎನ್‌ಎಸ್‌ಎ ಅಜಿತ್ ದೋವಲ್ ಪ್ರತಿಪಾದನೆ