ಉಡುಪಿ: ಇಲ್ಲಿನ ಬೈಂದೂರು ತಾಲೂಕಿನ ಕೊಲ್ಲೂರು (Kolluru incident) ಬಳಿಯಿರುವ ಅರಶಿನಗುಂಡಿ ಜಲಪಾತ (Arashina gundi Falls) ನೋಡಲು ಹೋಗಿ ಕಾಲು ಜಾರಿ ಬಿದ್ದು ನೀರುಪಾಲಾದ ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತದೇಹವು ಪತ್ತೆಯಾಗಿದೆ.
ಶರತ್ ಮೃತದೇಹವು ಅರಶಿನಗುಂಡಿ ಜಲಪಾತದಿಂದ 200 ಮೀಟರ್ ಕೆಳಗಡೆ ಪತ್ತೆ ಆಗಿದೆ. ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರು ಸತತ 7 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ಬಂಡೆ ಕಲ್ಲಿನ ಒಳಗಡೆ ಶರತ್ ಮೃತದೇಹವು ಸಿಲುಕಿತ್ತು. ಜುಲೈ 23ರಂದು ಕಾಲು ಜಾರಿ ನಾಪತ್ತೆಯಾಗಿದ್ದ ಶರತ್ ಜು.30ರಂದು ಶವವಾಗಿ ಪತ್ತೆ ಆಗಿದ್ದಾನೆ.
ಭದ್ರಾವತಿ ಮೂಲದ ಶರತ್ ಕುಮಾರ್ (23) ಸ್ನೇಹಿತರ ಜತೆ ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದರು. ಇಲ್ಲಿ ಜಲಪಾತ ವೀಕ್ಷಣೆಗೆ ತೆರಳಿದ್ದ ಆತ ಭೋರ್ಗರೆಯುತ್ತಿದ್ದ ಜಲಪಾತದ ಎದುರು ಕಲ್ಲಿನ ಅಂಚಿನಲ್ಲಿ ನಿಂತಿದ್ದ. ಈ ವೇಳೆ ಸಣ್ಣಗೆ ಕಾಲು ಜಾರಿದ್ದು ಯುವಕ ಅಲ್ಲಿಂದಲೇ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದ.
ಇದೊಂದು ಅತ್ಯಂತ ದುರ್ಗಮ ಜಲಪಾತವಾಗಿದ್ದು, ಮಳೆಯಿಂದಾಗಿ ಧುಮ್ಮಿಕ್ಕಿ ಹರಿಯುತ್ತಿದೆ. ಮೇಲಿನಿಂದ ಬೀಳುವ ನೀರು ಅತ್ಯಂತ ಕಿರಿದಾದ ಕಲ್ಲುಗಳ ಬಂಡೆಗಳ ನಡುವೆ ಇಳಿದುಹೋಗುತ್ತಿದೆ. ಕಲ್ಲುಗಳ ನಡುವೆ ವೇಗವಾಗಿ ತೆವಳಿಕೊಂಡು ಜಿಗಿದುಕೊಂಡು ನೀರು ಹಾರುತ್ತದೆ. ಇದರಿಂದಾಗಿ ಶರತ್ ಕುಮಾರ್ ಅವರ ಶವವನ್ನು ಎಲ್ಲಿ ಹುಡುಕುವುದು ಎಂದು ತಿಳಿಯದೆ ಅಗ್ನಿ ಶಾಮಕ ದಳ ಕೂಡಾ ಕೈಚೆಲ್ಲುವ ಹಂತಕ್ಕೆ ಬಂದಿತ್ತು.
ಜಲಪಾತದಲ್ಲಿ ಕೊಚ್ಚಿಹೋದ ಯುವಕನನ್ನು ಪತ್ತೆ ಹಚ್ಚುವುದು ಹೇಗೆ ಎಂದು ತಿಳಿಯದೆ ಅಗ್ನಿಶಾಮಕ ದಳ ಕಂಗಾಲಾಗಿದ್ದ ಹೊತ್ತಿನಲ್ಲಿ ಉಡುಪಿಯ ಸಾಹಸಿ ಈಶ್ವರ ಮಲ್ಪೆ ಅವರ ಸಹಾಯವನ್ನು ಪಡೆದಿದ್ದರು. ಈ ಹಿಂದೆಯೂ ಕೆಲವೊಂದು ಅಪಾಯಕಾರಿ ಸನ್ನಿವೇಶಗಳಲ್ಲಿ ಧೈರ್ಯದಿಂದ ಮುನ್ನುಗ್ಗಿ ಕಾರ್ಯಾಚರಣೆ ನಡೆಸಿದ್ದ ಈಶ್ವರ ಮಲ್ಪೆ ಅವರು ಈ ಬಾರಿಯೂ ಮುನ್ನುಗ್ಗಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ