ಬೆಂಗಳೂರು: ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಮತ್ತೆ ಏರಲಾರಂಭಿಸಿದ್ದು (Areca News), ಎಲೆಚುಕ್ಕಿ ರೋಗ, ಕೊಳೆರೋಗ ಮತ್ತು ಅಡಿಕೆ ಧಾರಣೆ ಕುಸಿತದ ಕಾರಣದಿಂದ ಕಂಗೆಟ್ಟಿದ್ದ ಅಡಿಕೆ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ.
ಶಿವಮೊಗ್ಗ ಅಡಿಕೆ ಮಾರುಕಟ್ಟೆಯಲ್ಲಿ ಸರಕಿನ ಧಾರಣೆ ನಿರೀಕ್ಷೆಯನ್ನೂ ಮೀರಿ ಕ್ವಿಂಟಾಲ್‌ಗೆ 80 ಸಾವಿರದ ಸಮೀಪಕ್ಕೆ ಏರಿದ್ದರೆ, ಶಿರಸಿಯಲ್ಲಿ ಚಾಲಿಯ ಧಾರಣೆ 43 ಸಾವಿರದ ಗಡಿ ದಾಟಿದೆ. ಕಳೆದ ತಿಂಗಳು ಅಂದರೆ ಡಿಸೆಂಬರ್‌ನಲ್ಲಿ 20 ಸಾವಿರ ರೂ. ಗಳಷ್ಟು ಕುಸಿತಕ್ಕೆ ಒಳಗಾಗಿದ್ದ ರಾಶಿ ಇಡಿಯ ಬೆಲೆಯು ಈಗ ಏರುತ್ತಿದ್ದು, 47 ಸಾವಿರವನ್ನು ತಲುಪಿದೆ.
ಉತ್ತರ ಭಾರತದಲ್ಲಿ ಚಳಿಯು ಕಡಿಮೆಯಾಗಿ, ಮತ್ತೆ ಗುಟ್ಕಾ ಕಂಪನಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ಅಡಿಕೆಗೆ ಬೇಡಿಕೆ ಹೆಚ್ಚುತ್ತಿದ್ದು, ಬೆಲೆಯೂ ನಿಧಾನವಾಗಿ ಏರುತ್ತಿದೆ. ಕಳ್ಳ ಮಾರ್ಗದ ಮೂಲಕ ಬರುತ್ತಿದ್ದ ವಿದೇಶಿ ಅಡಿಕೆ ಆಮದಿನ ಮೇಲೆ ತನಿಖಾ ಏಜೆನ್ಸಿಗಳು ಹದ್ದಿನ ಕಣ್ಣಿಟ್ಟಿರುವುದರಿಂದ ಧಾರಣೆ ಇನ್ನಷ್ಟು ಏರುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್ ಅರೆಸ್ಟ್; ಇನ್ನಾದರೂ ಏರೀತೆ ಅಡಿಕೆಯ ಬೆಲೆ?
ಯಾವುದರ ಬೆಲೆ ಎಷ್ಟು ಏರಿಕೆ?
ಶಿವಮೊಗ್ಗದ ಮ್ಯಾಮ್‌ಕೋಸ್ ಪ್ರಕಾರ ಕಳೆದ 2020ರಲ್ಲಿ ಇದೇ ಸಮಯದಲ್ಲಿ ಹಸದ (ಸರಕು) ಧಾರಣೆಯು ಗರಿಷ್ಠ 62 ಸಾವಿರವಿತ್ತು. ಬೆಟ್ಟೆಯು 38 ಸಾವಿರ, ಆಪಿ 39 ಸಾವಿರ, ರಾಶಿ ಇಡಿ 36 ಸಾವಿರ, ಗೊರಬಲು 22 ಸಾವಿರ ರೂ.ಗಳಿಗೆ ಮಾರಾಟವಾಗಿತ್ತು.
ಕಳೆದ ವರ್ಷ ಅಂದರೆ 2022 ರಲ್ಲಿ ಹಸದ (ಸರಕು) ಧಾರಣೆಯು ಗರಿಷ್ಠ 71 ಸಾವಿರವಿತ್ತು. ಬೆಟ್ಟೆಯು 52ಸಾವಿರ, ರಾಶಿ ಇಡಿ 46 ಸಾವಿರ, ಗೊರಬಲು 35 ಸಾವಿರ ರೂ.ಗಳಿಗೆ ಮಾರಾಟವಾಗಿತ್ತು. ಈಗ ಹಸದ (ಸರಕು) ಧಾರಣೆಯು ಗರಿಷ್ಠ 80 ಸಾವಿರವನ್ನು ಮುಟ್ಟಿ ಬಂದಿದೆ. ಬೆಟ್ಟೆಯು 53ಸಾವಿರ, ರಾಶಿ ಇಡಿ 46 ಸಾವಿರ, ಗೊರಬಲು 35 ಸಾವಿರ ರೂ.ಗಳಿಗೆ ಮಾರಾಟವಾಗುತ್ತಿದೆ (today arecanut price). ಹೆಚ್ಚು ಕಡಿಮೆ ಕಳೆದ ವರ್ಷ ಇದೇ ಸಮಯದಲ್ಲಿ ಇದ್ದ ಧಾರಣೆಯಷ್ಟೇ ಇದೆ. ಹೀಗಾಗಿ ಧಾರಣೆ ಕುಸಿಯುತ್ತದೆ ಎಂಬ ಆತಂಕ ಅಡಿಕೆ ಬೆಳೆಗಾರರಿಂದ ದೂರವಾಗಿದೆ.
ದಾವಣಗೆರೆ, ಹೊನ್ನಾಳಿ, ಭೀಮನ ಸಮುದ್ರಾ ಮಾರುಕಟ್ಟೆಗಳಲ್ಲಿ ಕೂಡ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಬಂದಿದ್ದು, ಈಗ ರಾಶಿ ಇಡಿಯು ಕ್ವಿಂಟಾಲ್‌ಗೆ 47 ಸಾವಿರ ರೂ. ಮುಟ್ಟಿದೆ. ಶಿರಸಿ ಮಾರುಕಟ್ಟೆಯಲ್ಲಿ ರಾಶಿ ಇಡಿಯ ಗರಿಷ್ಠ ಧಾರಣೆಯು 44 ಸಾವಿರವಿದೆ. ಬೆಟ್ಟೆ ಮತ್ತು ಚಾಲಿ 42 ಸಾವಿರಕ್ಕೆ ಮಾರಾಟವಾಗುತ್ತಿದೆ. ಮಂಗಳೂರು ಮಾರುಕಟ್ಟೆಯಲ್ಲಿಯೂ ಚಾಲಿ ಬೆಲೆ ಏರುತ್ತಲೇ ಇದೆ.
ಇನ್ನು ಧಾರಣೆ ಕುಸಿಯದು
ಈ ಹಿಂದಿನ ಧಾರಣೆಗೆ ಹೋಲಿಸಿದರೆ ರಾಶಿ ಇಡಿಯ ಧಾರಣೆಯು ಈಗ ಸ್ವಲ್ಪ ಕಡಿಮೆ ಇದೆ. ಆದರೆ 45 ಸಾವಿರ ರೂ.ಗಳಿರುವುದು ಒಳ್ಳೆಯ ಧಾರಣೆಯೇ. ಇದೇನು ಕಡಿಮೆ ಏನಲ್ಲ. ಮುಂದೆ ಬೇಡಿಕೆ ಹೆಚ್ಚಿದರೆ 50 ಸಾವಿರದವರೆಗೂ ಹೋಗಬಹುದು ಎಂದು ಮ್ಯಾಮ್‌ಕೋಸ್‌ನ ಉಪಾಧ್ಯಕ್ಷ ಮಹೇಶ್ ಹೆಚ್.ಎಸ್.ಹುಲ್ಕುಳಿ “ವಿಸ್ತಾರ ನ್ಯೂಸ್ʼʼಗೆ ತಿಳಿಸಿದ್ದಾರೆ.
ಅಡಿಕೆ ಧಾರಣೆ ಏರಿಳಿತ ಯಾರ ಕೈಯಲ್ಲೂ ಇಲ್ಲ. ಹೀಗೇ ಆಗುತ್ತದೆ ಎಂದು ಹೇಳಲಾಗದು. ಆದರೆ ಈ ವರ್ಷ ಅಡಿಕೆ ಬೆಲೆ ಕುಸಿಯಬಹುದು ಎಂದು ಬೆಳೆಗಾರರು ಆತಂಕ ಪಡಬೇಕಾಗಿಲ್ಲ. ಈಗಿರುವ ಧಾರಣೆಯೇ ಮುಂದುವರಿಯುವ ಎಲ್ಲ ಅವಕಾಶಗಳಿವೆ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ : Areca News | ಅಕ್ರಮವಾಗಿ ಆಮದಾಗುತ್ತಲೇ ಇದೆ ಅಡಿಕೆ; ಆಮದು ಅಡಿಕೆಯಿಂದ ಬೆಲೆ ಕುಸಿತವಾಗಿಲ್ಲ ಎಂದ ಕೇಂದ್ರ