ಬೆಂಗಳೂರು: ಅಡಿಕೆ ಬೆಲೆ ಕುಸಿಯುತ್ತಲೇ ಇದ್ದು, ರಾಜ್ಯದ ಅಡಿಕೆ ಬೆಳೆಗಾರರು ಆತಂಕ್ಕೊಳಗಾಗಿದ್ದಾರೆ. ವಿದೇಶದಿಂದ ಅಡಿಕೆ ಆಮದಾಗುತ್ತಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಧಾರಣೆ ಕುಸಿಯುತ್ತಿದೆ (Areca News) ಎಂದು ಅಡಿಕೆ ಬೆಳೆಗಾರರು, ವರ್ತಕರು ಮತ್ತು ರೈತ ಸಂಘದ ನಾಯಕರು ಆರೋಪಿಸುತ್ತಿದ್ದಾರೆ.
ಈ ನಡುವೆ ಕಾನೂನು ಬಾಹಿರವಾಗಿ ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ವ್ಯಾಪಾರಿಗಳ ವಿರುದ್ಧ, ಕಳ್ಳಸಾಗಾಣೆದಾರರ ವಿರುದ್ಧ ಈಶಾನ್ಯ ರಾಜ್ಯಗಳ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿಯೇ ಅಡಿಕೆ ಸ್ಮಗ್ಲಿಂಗ್ ಕಿಂಗ್‌ಪಿನ್, “ಕ್ಯಾಪ್ಟನ್ʼʼ ಎಂದೇ ಕುಖ್ಯಾತಿ ಪಡೆದಿದ್ದ ಜಸ್‌ಬಿರ್ ಸಿಂಗ್ ಚತ್ವಾಲ ಸೇರಿದಂತೆ ಮೂವರು ಪ್ರಮುಖ ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ.
ಸ್ಮಗ್ಲರ್ ಜಸ್‌ಬಿರ್ ಸಿಂಗ್ ಚತ್ವಾಲ ಮಹಾರಾಷ್ಟ್ರದ ನಾಗ್‌ಪುರದ ನಿವಾಸಿಯಾಗಿದ್ದು, ಬರ್ಮಾದಿಂದ ಕಳ್ಳಮಾರ್ಗದಲ್ಲಿ ಅಡಿಕೆ ಆಮದು ಮಾಡಿಕೊಳ್ಳಲು ತನ್ನದೇ ಆದ ನೆಟ್‌ವರ್ಕ್ ಹೊಂದಿದ್ದ. ಅಡಿಕೆಯನ್ನು ಕಳ್ಳ ಮಾರ್ಗದಲ್ಲಿ ಆಮದು ಮಾಡಿಕೊಳ್ಳುವಲ್ಲಿ ಈತ ಪ್ರಮುಖ ಪಾತ್ರ ವಹಿಸುತ್ತಿದ್ದನೆಂದು ಅಸ್ಸಾಂ ಪೊಲೀಸರು ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಈತನ ಪತ್ತೆಗೆ ಮಹಾರಾಷ್ಟ್ರದ, ದೆಹಲಿ, ಹಿಮಾಚಲ ಪ್ರದೇಶ ರಾಜ್ಯದ ಅನೇಕ ಕಡೆ ದಾಳಿ ನಡೆಸಲಾಗಿತ್ತಾದರೂ ಆತನ ಸುಳಿವು ಸಿಕ್ಕಿರಲಿಲ್ಲ. ಇಪ್ಪತ್ತು ದಿನಗಳ ಹಿಂದೆ ಈತ ಗುವಾಹಟಿಗೆ ಆಗಮಿಸಿದ್ದ ಸಂದರ್ಭದಲ್ಲಿ ಅಸ್ಸಾಂನ ವಿಶೇಷ ಪೊಲೀಸ್ ಪಡೆ ಬಂಧಿಸಿದ್ದು, ನ್ಯಾಯಾಲಯದಲ್ಲಿ ತನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದೆ. ಈತನ ಬಂಧನದೊಂದಿಗೆ ಕಳ್ಳಮಾರ್ಗದ ಮೂಲಕ ಅಡಿಕೆ ಆಮದು ಮಾಡಿಕೊಳ್ಳುವ ಜಾಲಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಈತ ನೀಡಿದ ಮಾಹಿತಿಯ ಮೇರೆಗೆ ಸಾವನ್ ಕುಮಾರ್ ಮತ್ತು ಅರುಣ್ ತ್ಯಾಗಿ ಎಂಬ ಕಳ್ಳ ಸಾಗಾಣೆದಾರರನ್ನೂ ಬಂಧಿಸಿಲಾಗಿದೆ.
ಈ ಗ್ಯಾಂಗ್‌ನ ಬಂಧನದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ನಾಗ್‌ಪುರದಲ್ಲಿ ದಾಳಿ ನಡೆಸಿದ್ದು, 11.5 ಕೋಟಿ ರೂ. ಮೌಲ್ಯದ 288 ಮೆಟ್ರಿಕ್ ಟನ್ ಅಕ್ರಮ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಜತೆಗೆ 16.5 ಲಕ್ಷ ರೂ. ನಗದನ್ನೂ ವಶಪಡಿಸಿಕೊಳ್ಳಲಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಈ ದಾಳಿ ನಡೆದಿದ್ದು, ನಾಗ್‌ಪುರನ ಮಸ್ಕಸತ್, ಇತ್ವಾರಿ ಮತ್ತು ಕಲಮನ್‌ನಲ್ಲಿ ಈ ದಾಳಿ ನಡೆಸಲಾಗಿತ್ತು. ಅಡಿಕೆ ಮಾತ್ರವಲ್ಲದೇ ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿದ್ದ ಜಾಲದ ಕುರಿತೂ ಅಮೂಲ್ಯ ದಾಖಲೆಗಳನ್ನು ಇಡಿಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅಕ್ರಮ ಸಾಗಾಟ; ಆರು ಅಡಿಕೆ ಲಾರಿಗಳಿಗೆ ಬೆಂಕಿ
ಅಕ್ರಮ ಅಡಿಕೆ ಆಮದನ್ನು ನಿಷೇಧಿಸಲಾಗಿದ್ದರೂ ಅಡಿಕೆ ಮ್ಯಾನ್ಮಾರ್‌ನಿಂದ ಲಾರಿಗಟ್ಟಲೆ ಬರುತ್ತಲೇ ಇದೆ. ಅಸ್ಸಾಂ ರಾಜ್ಯವಂತೂ ಅಕ್ರಮ ವಿದೇಶಿ ಅಡಿಕೆ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ರಾಜ್ಯದ ಮೂಲಕ ಸಾಗಾಟವಾಗುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮವನ್ನೂ ತೆಗೆದುಕೊಂಡಿದೆ. ಇದರಿಂದಾಗಿ ಮಿಜೋರಾಂ, ತ್ರಿಪುರಾ ರಾಜ್ಯಗಳಲ್ಲಿನ ಸ್ಥಳೀಯ ಅಡಿಕೆ ಬೆಳೆಗಾರರಿಗೆ ತಾವು ಬೆಳೆದ ಅಡಿಕೆಯನ್ನು ಮಾಹಾರಾಷ್ಟ್ರಕ್ಕೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ದೇಶೀಯ ಅಡಿಕೆ ಮಾರಾಟಕ್ಕೆ ಅವಕಾಶಮಾಡಿಕೊಡುವಂತೆ ಮಿಜೋರಾಂ ಮತ್ತು ತ್ರಿಪುರ ಸರ್ಕಾರಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇವೆ.
ಈ ನಡುವೆ, ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದಾಗುತ್ತಿರುವುದರಿಂದ ನಮ್ಮ ಅಡಿಕೆ ಮಾರಾಟಕ್ಕೂ ತೊಂದರೆಯಾಗುತ್ತಿದೆ ಎಂದು ರೊಚ್ಚಿಗೆದ್ದ ಪಶ್ಚಿಮ ಮಿಜೋರಾಂನ ಮಮಿತ್ ಜಿಲ್ಲೆಯ ಹಳ್ಳಿಯೊಂದರ ಅಡಿಕೆ ಬೆಳೆಗಾರರು ಮ್ಯಾನ್ಮಾರ್‌ನಿಂದ ಅಡಿಕೆ ತರುತ್ತಿದ್ದ ಆರು ಲಾರಿಗಳಿಗೆ ಬೆಂಕಿ ಹಚ್ಚಿದ ಘಟನೆ ಡಿ.10ರಂದು ನಡೆದಿದೆ.
ಅಲ್ಲದೆ, ಕಳೆದ ಶುಕ್ರವಾರ ಬರ್ಮಾದಿಂದ ಮಿಜೋರಾಂ ಮೂಲಕ ರಾಜ್ಯಕ್ಕೆ ಬರುತ್ತಿದ್ದ 50 ಲಕ್ಷ ರೂ. ಮೌಲ್ಯದ ಬರ್ಮಾ ಅಡಿಕೆಯನ್ನು ಅಸ್ಸಾಂ ಪೊಲೀಸರು ಮಿಜೋರಾಂ-ಅಸ್ಸಾಂ ಗಡಿಯಲ್ಲಿ ವಶಪಡಿಸಿಕೊಂಡಿದ್ದಾರೆ. ಬಿದಿರು ಸಾಗಿಸುತ್ತಿದ್ದ ಲಾರಿಯಲ್ಲಿ ಅಕ್ರಮವಾಗಿ ಅಡಿಕೆಯನ್ನು ಇರಿಸಲಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.
ಎಷ್ಟೇ ನಿಯಂತ್ರಣವಿದ್ದರೂ ಕಳ್ಳಮಾರ್ಗದಲ್ಲಿ ಮ್ಯಾನ್ಮಾರ್‌ನಿಂದ ಭಾರಿ ಪ್ರಮಾಣದಲ್ಲಿ ಅಡಿಕೆ ಆಮದಾಗುತ್ತಲೇ ಇದೆ ಎಂಬುದಕ್ಕೆ ಈ ಮೇಲಿನ ಎರಡು ಘಟನೆಗಳು ಸಾಕ್ಷಿಯಾಗಿವೆ.
ಸುಮಾರು ನೂರು ಮಂದಿ ಇಡಿ ಅಧಿಕಾರಿಗಳು ಸತತ ಎರಡುದಿನಗಳ ಕಾಲ ದಾಳಿ ನಡೆಸಿ, ಅಕ್ರಮ ಅಡಿಕೆ ವ್ಯಾಪಾರಿಗಳನ್ನು ಪತ್ತೆ ಹಚ್ಚಿದ್ದಾರೆ. ಇವರ ವಿರುದ್ಧ “ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ” ಮತ್ತು “ಅಕ್ರಮ ವಿದೇಶಿವಿನಿಯಮ ನಿಯಂತ್ರಣ ಕಾಯ್ದೆʼʼ ಅಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ.
ಇಂಡೋನೇಷ್ಯಾದಿಂದ ಬರುತ್ತಿತ್ತು ಅಡಿಕೆ
ಜಸ್‌ಬಿರ್ ಸಿಂಗ್ ಚತ್ವಾಲ ಇಂಡೋನೇಷ್ಯಾದಿಂದ ಅಕ್ರಮವಾಗಿ ಅಡಿಕೆಯನ್ನು ಮ್ಯಾನ್ಮಾರ್‌ಗೆ ತಂದು, ಅಲ್ಲಿಂದ ಭಾರತಕ್ಕೆ ತರಿಸಿಕೊಳ್ಳುತ್ತಿದ್ದ. ನಾಗ್‌ಪುರ ಮತ್ತು ವಿದರ್ಭದ ಕೆಲ ವ್ಯಾಪಾರಿಗಳಿಗೆ ಈ ಅಡಿಕೆಯನ್ನು ಮಾರುತ್ತಿದ್ದನೆಂದು ಹೇಳಲಾಗಿದೆ. ಒಟ್ಟು 17 ಕಡೆ ದಾಳಿ ನಡೆಸಿ, ಈ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದ ಅನೇಕರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಇಡಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 2021ರ ಮಾರ್ಚ್‌ನಲ್ಲಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಿಬಿಐ ನಾಗ್‌ಪುರದಲ್ಲಿ ಇದೇ ರೀತಿಯ ದಾಳಿಗಳನ್ನು ನಡೆಸಿ, ಅಕ್ರಮ ವ್ಯಾಪಾರಿಗಳಲ್ಲಿ ನಡುಕ ಹುಟ್ಟಿಸಿತ್ತು.
2006ರಲ್ಲಿಜಾರಿಗೆ ಬಂದಿರುವ ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದ(ಸಫ್ಟಾ)ದ ಅಡಿಯಲ್ಲಿ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಮುಕ್ತವಾಗಿ ಅಡಿಕೆ ಆಮದು ಮಾಡಿಕೊಳ್ಳಲು ಅವಕಾಶವಿದೆ. ಇಂಡೋನೇಷ್ಯಾ ಸೇರಿದಂತೆ ಬೇರೆ ದೇಶಗಳಲ್ಲಿ ಬೆಳೆದ ಅಡಿಕೆಯನ್ನು ಈ ದೇಶಗಳ ಮೂಲಕ ಭಾರತಕ್ಕ ಅಕ್ರಮವಾಗಿ ಸಾಗಿಸಲಾಗುತ್ತಲೇ ಬರಲಾಗಿದೆ.
ಇದನ್ನೂ ಓದಿ | Arecanut Price | ಕುಸಿಯುತ್ತಲೇ ಇರುವ ಅಡಿಕೆ ಧಾರಣೆ; 2 ತಿಂಗಳಿನಲ್ಲಿ 20 ಸಾವಿರ ರೂ. ಇಳಿಕೆ