Site icon Vistara News

Areca News : ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ! ಕನಿಷ್ಠ ಆಮದು ಬೆಲೆಯನ್ನು 351 ರೂ.ಗಳಿಗೆ ಹೆಚ್ಚಿಸಿದ ಕೇಂದ್ರ ಸರ್ಕಾರ

areca news

areca nut

ಬೆಂಗಳೂರು: ಚುನಾವಣೆಯ ಹೊತ್ತಿನಲ್ಲಿ ಕೇಂದ್ರ ಸರ್ಕಾರ ರಾಜ್ಯದ ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ (Areca News) ನೀಡಿದೆ. ಅಡಿಕೆಯ ಕನಿಷ್ಠ ಆಮದು ಬೆಲೆಯನ್ನು (ಎಂಐಪಿ) 351 ರೂ. ಗೆ ಹೆಚ್ಚಿಸಲಾಗಿದೆ. ಈ ಸಂಬಂಧ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಮಂಗಳವಾರದಂದು ಅಧಿಸೂಚನೆ ಹೊರಡಿಸಿದೆ.

ಇದುವರೆಗೆ ಅಡಿಕೆಯ ಮೇಲಿನ ಕನಿಷ್ಠ ಆಮದು ಬೆಲೆಯು (ಎಂಐಪಿ) 251 ರೂ.ಗಳಾಗಿತ್ತು. ಇದೀಗ ನೂರು ರೂ. ಏರಿಸಿದಂತಾಗಿದೆ. ಇದರಿಂದಾಗಿ ವಿದೇಶಿ ಅಡಿಕೆಯನ್ನು ಕಡಿಮೆ ಬೆಲೆಗೆ ಆಮದು ಮಾಡಿಕೊಳ್ಳುವುದು ತಪ್ಪಲಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆಯ ಧಾರಣೆಯಲ್ಲಿ ಸ್ಥಿರತೆ ಕಂಡು ಬರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ರಾಶಿ ಇಡಿ, ಚಾಲಿ, ಬೆಟ್ಟೆ, ಗೊರಬಲು ಹೀಗೆ ಎಲ್ಲ ಪ್ರಕಾರಗಳ ಅಡಿಕೆಯ ಕನಿಷ್ಠ ಆಮದು ಬೆಲೆ ಹೆಚ್ಚಿಸಲಾಗಿದೆ. ಅಲ್ಲದೆ ʻಸುಪಾರಿʼ ಹೆಸರಿನಲ್ಲಿ ಆಮದು ಮಾಡಿಕೊಳ್ಳುವ ಅಡಿಕೆಯ ಆಮದು ಬೆಲೆಯೂ ಹೆಚ್ಚಿದೆ. ಅಡಿಮೆಯ ಆಮದಿಗೆ ಅನುಸರಿಸಲಾಗುತ್ತಿದ್ದ ನಿರ್ಬಂಧಿತ ಆಮದು ನೀತಿಯನ್ನು ಮುಂದುವರಿಸಲಾಗಿದೆ.

ಕಳೆದ ವಾರ ಕ್ಯಾಂಪ್ಕೋ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ಆಮದು ಬೆಲೆಯ ಏರಿಕೆಯ ಕುರಿತು ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿತ್ತು. ಆದರೆ ಅವರು ಈ ಬಗ್ಗೆ ಪ್ರಸ್ತಾಪಿಸದೇ ಇದ್ದುದ್ದರಿಂದ ಅಡಿಕೆ ಬೆಳೆಗಾರರಿಗೆ ನಿರಾಸೆಯಾಗಿತ್ತು. ಆದರೆ ಅವರು ದೆಹಲಿಗೆ ಹಿಂತಿರುಗಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ.

ಫೆ.10 ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಅಡಿಕೆ ಬೆಳೆಗಾರರ ಸಮಾವೇಶ ನಡೆಯಲಿದ್ದು, ಇದರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾಗವಹಿಸಲಿದ್ದಾರೆ. ಹೀಗಾಗಿ ಆಮದು ಬೆಲೆ ಹೆಚ್ಚಳದ ಕುರಿತು ವಾಣಿಜ್ಯ ಇಲಾಖೆಯು ನಿರೀಕ್ಷೆಗಿಂತಲೂ ಮೊದಲೇ ತೀರ್ಮಾನ ತೆಗೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕ್ಯಾಂಪ್ಕೋ ಪುತ್ತೂರಿನಲ್ಲಿ ಏರ್ಪಡಿಸಿದ್ದ ಬೃಹತ್‌ ಕೃಷಿ ಯಂತ್ರ ಮೇಳವನ್ನು ಉದ್ಘಾಟಿಸಿದ್ದ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಅಡಿಕೆಯ ಆಮದು ಬೆಲೆಯನ್ನು 251ರಿಂದ 351ರೂ.ಗೆ ಏರಿಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕೃಷಿ ಇಲಾಖೆ ಪ್ರಸ್ತಾವನೆಯನ್ನು ವಿದೇಶಿ ವ್ಯಾಪಾರದ ನಿರ್ದೇಶನಾಲಯಕ್ಕೆ (DGFT) ಕಳುಹಿಸಿದೆ. ಅಲ್ಲಿಂದ ವಾಣಿಜ್ಯ ಸಚಿವಾಲಯಕ್ಕೆ ಈ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಸದ್ಯವೇ ಈ ಕುರಿತು ಅಧಿಸೂಚನೆ ಪ್ರಕಟವಾಗಲಿದೆ ಎಂದು ಹೇಳಿದ್ದರು. ಅದರಂತೆಯೇ ಈಗ ಕೇಂದ್ರ ವಾಣಿಜ್ಯ ಇಲಾಖೆ ಆಮದು ಬೆಲೆಯನ್ನು ಹೆಚ್ಚಿಸಿ ಅಧಿಸೂಚನೆ ಹೊರಡಿಸಿದೆ.

ಕನಿಷ್ಠ ಆಮದು ಬೆಲೆ ಹೆಚ್ಚಳದ ಅಧಿಸೂಚನೆ ಇಲ್ಲಿದೆ ನೋಡಿ;

ಈಗಾಗಲೇ ಅಡಿಕೆಗೆ ಆಮದು ಸುಂಕವನ್ನು ಶೇ.100ರಷ್ಟು ವಿಧಿಸಲಾಗುತ್ತಿದೆ. ರಾಜ್ಯದ ಎಲ್ಲ ಅಡಿಕೆ ಮಾರಾಟ ಸಹಕಾರ ಸಂಘಗಳ ಮತ್ತು ಬೆಳೆಗಾರರ ಸಂಘಟನೆಗಳ ಒತ್ತಾಯದಿಂದಾಗಿಯೇ ಕೇಂದ್ರ ಸರ್ಕಾರ ಅಡಕೆಯ ಕನಿಷ್ಠ ಆಮದು ಬೆಲೆಯನ್ನು (ಎಂಐಪಿ) 2015ರಲ್ಲಿ 52 ರೂ.ಗಳಿಂದ 162 ರೂ.ಗಳಿಗೆ ನಂತರ, 2017ರ ಜನವರಿಯಲ್ಲಿ 251 ರೂ.ಗಳಿಗೆ ಏರಿಸಿತ್ತು.

ಇದನ್ನು 360 ರೂ. ಗೆ ಹೆಚ್ಚಿಸಬೇಕು ಎಂದು ಅಡಿಕೆ ಬೆಳೆಗಾರರು, ಸಂಘಟನೆಗಳು ಹಲವಾರು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು. ಅಲ್ಲದೆ, ಸಹಕಾರ ಸಂಘಟನೆಗಳು ರಾಜ್ಯದಿಂದ ನಿಯೋಗವನ್ನು ಕರೆದುಕೊಂಡು ಹೋಗಿ ಕೇಂದ್ರದ ಮೇಲೆ ಒತ್ತಡ ಕೂಡ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು. ಕಳೆದ ನಾಲ್ಕು ವರ್ಷಗಳ ಹೋರಾಟಕ್ಕೆ ಈಗ ಪ್ರತಿಫಲ ದೊರೆತಿದೆ.

ಇದನ್ನೂ ಓದಿ : Areca News: ಅಡಿಕೆ ಆರೋಗ್ಯಕ್ಕೆ ಮಾರಕವಲ್ಲ, ಔಷಧೀಯ ಗುಣವಿದೆ: ರಾಮಯ್ಯ ವಿವಿ ಸಂಶೋಧನೆ

Exit mobile version