ನವ ದೆಹಲಿ: ಎಲೆ ಚುಕ್ಕಿ ರೋಗ, ಧಾರಣೆ ಕುಸಿತ ಮತ್ತಿತರ ಅಡಿಕೆ ಬೆಳೆಗಾರರ ಸಮಸ್ಯೆಗಳು ಗುರುವಾರ ಲೋಕಸಭೆಯಲ್ಲಿ ಪ್ರಸ್ತಾಪಗೊಂಡಿದ್ದು, ಸಮಸ್ಯೆ ಹೇಳಲು ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರ ಅವರಿಗೆ ಕೇವಲ ಒಂದು ನಿಮಿಷ ಕಾಲಾವಕಾಶ (Arecanut News) ನೀಡಲಾಗಿತ್ತು.
ಈ ಅವಧಿಯಲ್ಲಿ ಅವರು ಮುಖ್ಯವಾಗಿ ಅಡಿಕೆ ಮರಗಳನ್ನು ಕಾಡುತ್ತಿರುವ ಎಲೆಚುಕ್ಕಿ ರೋಗಕ್ಕೆ ವೈಜ್ಞಾನಿಕವಾಗಿ ಔಷಧಿಯನ್ನು ಕಂಡು ಹಿಡಿಯಬೇಕು ಮತ್ತು ಅಡಿಕೆ ಆಮದಿನ ಮೇಲೆ ಸುಂಕವನ್ನು ಹೆಚ್ಚಿಸಿ, ಅಡಿಕೆ ಧಾರಣೆ ಕುಸಿತವಾಗುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಶಿವಮೊಗ್ಗ ಸೇರಿದಂತೆ ರಾಜ್ಯದ 16 ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಹತ್ತು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಅಡಿಕೆ ಬೆಳೆಯನ್ನು ಆಶ್ರಯಿಸಿವೆ. ನಮ್ಮ ರಾಜ್ಯ ಶೇ.69 ರಷ್ಟು ಅಡಿಕೆ ಉತ್ಪಾದಿಸುತ್ತಿದೆ. ಒಟ್ಟಾರೆ 16,50,000 ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ. ಇದರಿಂದಾಗಿ ಜಿಎಸ್‌ಟಿ, ಇನ್ನಿತರ ತೆರಿಗೆಗಳ ಮೂಲಕ ಸರ್ಕಾರಕ್ಕೆ 24,750 ಕೋಟಿ ಆದಾಯ ಬರುತ್ತಿದೆ ಎಂದು ರಾಘವೇಂದ್ರ ವಿವರಿಸಿದರು.
ಈಗ ಅಡಿಕೆ ಬೆಳೆಗಾರರು ಎಲೆಚುಕ್ಕಿ ರೋಗದಿಂದ ಸಂಕಷ್ಟದಲ್ಲಿದ್ದು, ಇಳುವರಿಯು ಈಗಾಗಲೇ ಶೇ.40ರಿಂದ 50 ರಷ್ಟು ಕಡಿಮೆಯಾಗಿದೆ. ಇನ್ನೊಂದೆಡೆ ಅಡಿಕೆಯ ಬೆಲೆಯು ಕುಸಿಯುತ್ತಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಕ್ವಿಂಟಾಲ್‌ಗೆ 58 ಸಾವಿರ ರೂ. ಇದ್ದಿದ್ದ ಧಾರಣೆಯು ಈಗ 39 ಸಾವಿರಕ್ಕೆ ಇಳಿದಿದೆ ಎಂದು ಅಡಿಕೆ ಬೆಳೆಗಾರರ ಪರಿಸ್ಥಿತಿಯನ್ನು ಅವರು ಸದನದ ಗಮನಕ್ಕೆ ತಂದರು.
ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡಿಸಲು ಆಮದು ಅಡಿಕೆಯ ಮೇಲೆ ಹೆಚ್ಚಿನ ಸುಂಕ ವಿಧಿಸಬೇಕು. ಅಡಿಕೆಯನ್ನು ಕಾಡುವ ಎಲ್ಲ ರೋಗಗಳಿಗೆ ವೈಜ್ಞಾನಿಕವಾಗಿ ಔಷಧಿಯನ್ನು ಅಭಿವೃದ್ಧಿಪಡಿಸಿಕೊಡಬೇಕು ಮತ್ತು ಕಾನೂನು ಬಾಹಿರವಾಗಿ ಅಡಿಕೆ ವ್ಯಾಪಾರ ನಡೆಯುವುದನ್ನು ತಡೆಯಲು ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಒಂದು ನಿಮಿಷ ಕಾಲಾವಕಾಶ ನೀಡಲಾಗಿದ್ದರೂ ಸಂಸದರು 1.34 ನಿಮಿಷ ಮಾತನಾಡಿ, ರಾಜ್ಯದ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ.
ಇದನ್ನೂ ಓದಿ | Arecanut Price | ಕುಸಿಯುತ್ತಲೇ ಇರುವ ಅಡಿಕೆ ಧಾರಣೆ; 2 ತಿಂಗಳಿನಲ್ಲಿ 20 ಸಾವಿರ ರೂ. ಇಳಿಕೆ