Site icon Vistara News

ಭೂತಾನ್‌ ಅಡಕೆ; ಕೇಂದ್ರಕ್ಕೆ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ನಿರ್ಧರಿಸಿದ ಅಡಕೆ ಕಾರ್ಯಪಡೆ

Arecanut Task Force

ಬೆಂಗಳೂರು: ಭೂತಾನ್‌ನಿಂದ ಹಸಿ ಅಡಕೆ ಆಮದು ಮಾಡಿಕೊಳ್ಳುವುದರಿಂದ ಆಗುವ ಪರಿಣಾಮಗಳ ಕುರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು, ಭೂತಾನ್‌ ಮಾತ್ರವಲ್ಲದೆ, ಬೇರೆ ದೇಶಗಳಿಂದಲೂ ಒಪ್ಪಂದದ ಮೇರೆಗೆ ಅಡಕೆ ಆಮದು ಮಾಡಿಕೊಳ್ಳದಂತೆ ಕೋರಲು ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಅಡಕೆ ಕಾರ್ಯಪಡೆಯ ಸಭೆಯು (Arecanut Task Force) ನಿರ್ಧರಿಸಿದೆ.

ತೆರಿಗೆ ವಂಚಿಸಿ ಬರುವ ಉತ್ಪನ್ನಕ್ಕೆ ಕಡಿವಾಣ ಹಾಕಬೇಕು. ಸ್ಮಗ್ಲಿಂಗ್ ಸಂಪೂರ್ಣವಾಗಿ ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಿರ್ಣಯ ಪತ್ರ ಕಳಿಸಬೇಕು ಎಂದು ಇಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಅಡಕೆ ಆಮದು ಹೇಗೆ ಕಡಿಮೆ ಮಾಡಬೇಕು ಎಂದು ಸೂಚಿಸುವ ತಜ್ಞರ ಸಲಹೆಗಳನ್ನು ಒಳಗೊಂಡ ಈ ಪತ್ರವನ್ನು ಎರಡು ದಿನಗಳಲ್ಲಿ ಕಳಿಸಲು ಅಡಕೆ ಕಾರ್ಯಪಡೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದೆ ಎಂದು ಸಭೆಯ ನಂತರ ಅಡಕೆ ಕಾರ್ಯಪಡೆಯ ಅಧ್ಯಕ್ಷ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಈಗಾಗಲೇ ರಾಜ್ಯದ ನಿಯೋಗವೊಂದು ದೆಹಲಿಗೆ ಹೋಗಿ ಈ ಎಲ್ಲ ವಿಷಯಗಳ ಕುರಿತು ಕೇಂದ್ರದೊಂದಿಗೆ ಮಾತುಕತೆ ನಡೆಸಿದೆ. ಆದರೂ ಇನ್ನೊಮ್ಮೆ ಕಾರ್ಯಪಡೆ ನಿಯೋಗ ದೆಹಲಿಗೆ ಹೋಗಿ ಸಭೆಯಲ್ಲಿ ಆಗಿರುವ ನಿರ್ಣಯಗಳನ್ನು ಕೇಂದ್ರದ ನಾಯಕರಿಗೆ ತಿಳಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಅಡಕೆ ಹಾನಿಕರ; ನವೆಂಬರ್‌ನಲ್ಲಿ ವರದಿ
ಅಡಕೆ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ಬೆಳವಣಿಗೆಗಳ ಕುರಿತು ಕಾರ್ಯಪಡೆಯ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಅಡಕೆ ಕ್ಯಾನ್ಸರ್ ಕಾರಕ ಅಲ್ಲ. ಆರೋಗ್ಯ ವರ್ಧಕ ತೋಟಗಾರಿಕಾ ಉತ್ಪನ್ನ ವೆಂದು ಸುಪ್ರೀಂ ಕೋರ್ಟ್‌ನ ಮುಂದೆ ಸಮರ್ಥವಾಗಿ ಪ್ರತಿಪಾದನೆ ಮಾಡಬೇಕು ಎಂದು ಸಭೆಯು ನಿರ್ಧಾರ ತೆಗೆದುಕೊಂಡಿದೆ.

ಅಡಕೆ ಸೇವನೆ ಆರೋಗ್ಯ ಹಾನಿಕರವಲ್ಲ ಎಂದು ರಾಮಯ್ಯ ಯುನಿವರ್ಸಿಟಿ ತಜ್ಞರು ಸಂಶೋಧನೆ ನಡೆಸಿ ಸಾಬೀತುಪಡಿಸಲಿದ್ದಾರೆ. ಈ ಸಂಶೋಧನಾ ವರದಿಯನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುತ್ತದೆ. ಈಗಾಗಲೇ ಸಂಶೋಧನೆಯು ಶೇ.90ರಷ್ಟು ಮುಗಿದಿದ್ದು, ಬರುವ ನವೆಂಬರ್‌ನಲ್ಲಿ ಅಂತಿಮ ವರದಿ ಸಲ್ಲಿಸುವುದಾಗಿ ಸಂಶೋಧಕರು ತಿಳಿಸಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಎಲೆ ಚುಕ್ಕಿ ರೋಗ; ತಜ್ಞರ ನೆರವು ಕೋರಲಿರುವ ಕಾರ್ಯಪಡೆ
ಎಲೆ ಚುಕ್ಕಿ ರೋಗ ತೀವ್ರಗೊಂಡ ನಂತರ ಇದೇ ಮೊದಲ ಬಾರಿಗೆ ನಡೆದ ಅಡಕೆ ಕಾರ್ಯಪಡೆಯ ಈ ಸಭೆಯಲ್ಲಿ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ರೋಗ ವ್ಯಾಪಕವಾಗಿ ಹಬ್ಬುತ್ತಿರುವ ಕುರಿತು ಗಂಭೀರ ಚರ್ಚೆ ನಡೆದಿದೆ. ಈ ರೋಗವನ್ನು ನಿಯಂತ್ರಿಸಲು ಸೂಕ್ತ ಔಷಧಿ ಇಲ್ಲದಿರುವ ಕುರಿತು ಕಾರ್ಯಪಡೆಯ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಈ ಕುರಿತು ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್ ಹಾಗೂ ಸಿಬಿಸಿಐಆರ್ ಐ ತಜ್ಞರ ಜತೆ ಸಭೆ ನಡೆಸಲು ಸಭೆಯಲ್ಲಿ ನಿರ್ಧಾರಿಸಲಾಗಿದೆ.

ಸಭೆಯಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ, ಹಬ್ಬುತ್ತಿರುವ ರೋಗ ನಿಯಂತ್ರಣಕ್ಕೆ ಅಗತ್ಯವಾಗಿರುವ ಔಷಧಿ ಸಿಂಪಡಣೆ ಮಾಡಲು ಈಗಾಗಲೇ ಸರ್ಕಾರ 4 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಹಣ ಸಂಪೂರ್ಣವಾಗಿ ಬಳಕೆಯಾದ ಬಳಿಕ ಸರ್ಕಾರದಿಂದ ಹೆಚ್ಚಿನ ಹಣ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಅಲ್ಲದೆ, ಈಗಾಗಲೇ ಸ್ಥಳಕ್ಕೆ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದರು.

ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಈಗ ನೀಡಿರುವ ಹಣ ಸಾಲುತ್ತಿಲ್ಲ ಎಂಬ ಅಭಿಪ್ರಾಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರಗ ಜ್ಞಾನೇಂದ್ರ ಸದ್ಯ 4 ಕೋಟಿ ಬಿಡುಗಡೆ ಮಾಡಿದೆ. ಇಷ್ಟೇ ಹಣ ನೀಡುವುದು ಎಂದು ಸರ್ಕಾರ ಎಲ್ಲಿಯೂ ಹೇಳಿಲ್ಲ. ಈ ಹಣ ಖರ್ಚಾದ ನಂತರ ಮತ್ತಷ್ಟು ಬಿಡುಗಡೆ ಮಾಡಲಾಗುತ್ತದೆ. ಅಡಕೆ ಬೆಳೆಗಾರರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದರು.

ಅಡಕೆ ಕಾರ್ಯಪಡೆಯ ಸಭೆಯಲ್ಲಿ ಕಾರ್ಯಪಡೆಯ ಸದಸ್ಯರಾದ ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಕೆ.ಆರ್.ಎ.ಎಂ, ಲಿಮಿಟೆಡ್ ಅಧ್ಯಕ್ಷ ಸೊರಬದ ಮಂಜಪ್ಪ, ನಿವೃತ್ತ ನಿರ್ದೇಶಕ ಪಿ.ಚೌಡಪ್ಪ, ಮ್ಯಮ್ಕೋಸ್ ಉಪಾಧ್ಯಕ್ಷ ಸುಬ್ರಹ್ಮಣ್ಯ ವೈ.ಎಸ್, ತೋಟಗಾರಿಕೆ ಇಲಾಖೆ ನಿರ್ದೇಶಕ ನಾಗೇಂದ್ರ ಪ್ರಸಾದ್ ಹಾಜರಿದ್ದರು.

ಇದನ್ನೂ ಓದಿ | ವಿರೋಧದ ನಡುವೆಯೂ ಭೂತಾನ್‌ನಿಂದ ಅಡಕೆ ಆಮದು; ಅಗತ್ಯ ಕ್ರಮಗಳಿಗೆ ಕೇಂದ್ರದ ಸೂಚನೆ

Exit mobile version