Site icon Vistara News

Elephant Arjuna: ಮೈಸೂರು, ಹಾಸನದಲ್ಲಿ ಅರ್ಜುನ ಆನೆಯ ಸ್ಮಾರಕ ನಿರ್ಮಾಣ: ಈಶ್ವರ ಖಂಡ್ರೆ

Elephant Arjuna

ಬೆಳಗಾವಿ: ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಆನೆ ಕಾರ್ಯಾಚರಣೆ ವೇಳೆ ಪುಂಡಾನೆಯ ಜೊತೆ ಕಾದಾಡಿ ಮಡಿದ ಕ್ಯಾಪ್ಟನ್, ಸೀನಿಯರ್, ಬಲಭೀಮ ಎಂದೇ ಖ್ಯಾತವಾಗಿದ್ದ ಹಾಗೂ ಮೈಸೂರಿನ ಜಗದ್ವಿಖ್ಯಾತ ದಸರಾ ಜಂಬೂಸವಾರಿಯಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಸ್ಮಾರಕವನ್ನು (Elephant Arjuna) ಹಾಸನ ಮತ್ತು ಮೈಸೂರು ಜಿಲ್ಲೆಯಲ್ಲಿ ನಿರ್ಮಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಅರ್ಜುನನ ಸಾವಿನ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಸಚಿವರು, ನಾಡಿನ ಜನರ ಪ್ರೀತಿಗೆ ಪಾತ್ರವಾಗಿದ್ದ ಅರ್ಜನನ ಸಾವು ಅತ್ಯಂತ ದುಃಖದಾಯಕ. ಅರ್ಜನ ಮತ್ತು ನಾಡಿನ ಜನತೆಯ ನಡುವೆ ಭಾವನಾತ್ಮಕ ಸಂಬಂಧ ಇತ್ತು. ಈ ಆನೆ ಸಾವು ನಾಡಿನಾದ್ಯಂತ ಇರುವ ಪ್ರಾಣಿ ಪ್ರಿಯರಿಗೆ ಮತ್ತು ಸಾರ್ವಜನಿಕರಿಗೆ ನೋವು ತಂದಿದೆ.
ಹಲವು ಹುಲಿ, ಆನೆ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದ ಎಂದು ಸ್ಮರಿಸಿದ್ದಾರೆ.

ಅರ್ಜುನನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದ್ದು, ಅರ್ಜುನ ಸೇವೆಯನ್ನು ನಾಡಿನ ಜನರು ಸದಾ ಸ್ಮರಿಸುವಂತೆ ಹಾಸನ ಮತ್ತು ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಆನೆ ಕಾರ್ಯಾಚರಣೆ ವಿಧಾನ ಮಾರ್ಪಾಡಿಗೆ ಸೂಚನೆ

ಆನೆ ಕಾರ್ಯಾಚರಣೆ ವೇಳೆ ಲೋಲಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಆನೆ ಕಾರ್ಯಾಚರಣೆ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಒ.ಪಿ.)ದಲ್ಲಿ ಏನಾದರೂ ತಿದ್ದುಪಡಿ ಅಥವಾ ಮಾರ್ಪಾಡು ಮಾಡಬೇಕಾಗಿದೆಯೇ ಎಂಬ ಬಗ್ಗೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು, ತಜ್ಞರೊಂದಿಗೆ ಸಮಾಲೋಚನೆ ನಡೆಸಿ 3 ದಿನಗಳ ಒಳಗಾಗಿ ಕಡತದಲ್ಲಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅರಣ್ಯ ಸಚಿವ ಸೂಚಿಸಿದ್ದಾರೆ.

ರಾಜ್ಯದ ಆನೆಗಳ ಸಂಖ್ಯೆಯಲ್ಲಿ ರಾಷ್ಟ್ರದಲ್ಲೇ ಮೊದಲ ಸ್ಥಾನದಲ್ಲಿರುವುದು ಸಂತೋಷದ ವಿಷಯವಾದರೂ, ಕೆಲವು ಪುಂಡಾನೆಗಳು ಪದೇ ಪದೇ ನಾಡಿಗೆ ಬರುತ್ತಿರುವುದು ಮತ್ತು ಜೀವಹಾನಿ, ಬೆಳೆ ಹಾನಿ ಆಗುತ್ತಿರುವುದಲ್ಲದೆ, ಆನೆ ಕಾರ್ಯಾಚರಣೆ ವೇಳೆ ಆನೆಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಸಾವಿಗೀಡಾಗುತ್ತಿರುವುದು ಅತ್ಯಂತ ಆತಂಕದ ಸಂಗತಿಯಾಗಿದೆ. ಹೀಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಒ.ಪಿ.)ದಲ್ಲಿ ತಿದ್ದುಪಡಿ ಅಥವಾ ಮಾರ್ಪಾಡು ಮಾಡಬೇಕಾಗಿದೆಯೇ ಎಂಬ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ | Elephant Arjuna : ಅಧಿಕಾರಿಗಳ ಗುಂಡಿನಿಂದಲೇ ಅರ್ಜುನನ ಮರಣ?; ಇಲ್ಲಿದೆ ವಿಡಿಯೊ ಸಾಕ್ಷಿ

ಕಾಡಾನೆ ಸೆರೆ ಕಾರ್ಯಾಚರಣೆಗೆ 64 ವರ್ಷದ ಅರ್ಜುನನನ್ನು ಬಳಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅರ್ಜುನನಿಗೆ ವಯಸ್ಸಾದ ಕಾರಣಕ್ಕೆ ಅರ್ಜುನನಿಗೆ ಅಂಬಾರಿ ಹೋರುವುದನ್ನೇ ನಿಲ್ಲಿಸಲಾಗಿದೆ. ಆದರೂ 64 ವರ್ಷದ ಅರ್ಜುನನ್ನು ಕಾಡಿನ ಪುಂಡಾನೆ ಸೆರೆ ಕಾರ್ಯಾಚರಣೆಗೆ ಬಳಿಸರುವುದು ಕಾನೂನು ಬಾಹಿರ ಎಂದು ಅರಣ್ಯಾಧಿಕಾರಿಗಳ ವಿರುದ್ಧ ವನ್ಯಜೀವಿ ತಜ್ಞರು ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಕಾರ್ಯಾಚರಣೆ ವಿಧಾನದಲ್ಲಿ ಬದಲಾವಣೆ ಮಾಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version