ಉಡುಪಿ: ಮಹಾರಾಷ್ಟ್ರದಿಂದ ರಾಜ್ಯದ ಕರಾವಳಿಗೆ ಬಂದು 18 ಲಕ್ಷ ರೂಪಾಯಿ ಚಿನ್ನಾಭರಣ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳರು ಪೊಲೀಸರ ಅತಿಥಿಯಾಗಿದ್ದಾರೆ. ಜುವೆಲ್ಲರ್ಸ್‌ಗಳಲ್ಲಿ ಚಿನ್ನ ಖರೀದಿಸುವ, ಬ್ಯಾಂಕುಗಳಲ್ಲಿ ಲಕ್ಷಾಂತರ ರೂಪಾಯಿ ಹಣ ಡ್ರಾ ಮಾಡುವವರನ್ನು ಹೊಂಚು ಹಾಕಿ ಇವರು ದರೋಡೆ ಮಾಡುತ್ತಿದ್ದರು.
ಮಧ್ಯಪ್ರದೇಶ ಮೂಲದ ಅಲೀಖಾನ್, ಅಮ್ಜತ್, ಇಕ್ರಾರ್ ಖಾನ್, ಗೋಪಾಲ್ ಅಮಾಲೋವರ್ ಬಂಧಿತರು. ಮುಂಬೈ ಮೂಲದ ಚಿನ್ನದ ವ್ಯಾಪಾರಿ ಈಶ್ವರ್ 18 ಲಕ್ಷ ರೂಪಾಯಿ ಆಭರಣಗಳನ್ನು ಖರೀದಿಸಿ ಮಂಗಳೂರಿನತ್ತ ಹೊರಟಿದ್ದರು. ಇವರು ಪ್ರಯಾಣಿಸುತ್ತಿದ್ದ ಬಸ್ ಜೂನ್ 16ರಂದು ಉಡುಪಿ ಜಿಲ್ಲೆ ಬೈಂದೂರಿನ ಅರೆ ಶಿರೂರು ಬಳಿ ನಿಂತಿತ್ತು. ಪ್ರಯಾಣಿಕರು ಬಸ್ ಇಳಿದು ಹೋಟೆಲ್‌ಗೆ ಹೋದಾಗ ನಾಲ್ವರು ಕಳ್ಳರ ತಂಡ ಬಸ್‌ನಲ್ಲಿದ್ದ 18 ಲಕ್ಷ ರೂಪಾಯಿ ಮೊತ್ತದ ಚಿನ್ನದ ಆಭರಣಗಳನ್ನು ಎಗರಿಸಿತ್ತು.
ಬಸ್ ಕಂಡಕ್ಟರ್ ಮಾಹಿತಿಯ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ಬೈಂದೂರು ಪೊಲೀಸರು, ತಕ್ಷಣಕ್ಕೆ ಒಂದು ತಂಡ ರಚಿಸಿ ಕಳ್ಳರ ಹುಡುಕಾಟ ನಡೆಸಿದ್ದರು. ಭಟ್ಕಳ, ಹೊನ್ನಾವರ ತಾಲೂಕುಗಳಲ್ಲಿ ತಪಾಸಣೆ ಮಾಡಿದಾಗ ಮಿಸ್ಸಾಗಿದ್ದ ಕಳ್ಳರ ಕಾರು, ಮರುದಿನ ಬೆಂಗಳೂರಿನಲ್ಲಿ ಪತ್ತೆ ಆಗಿತ್ತು. ದೇವನಹಳ್ಳಿಯಲ್ಲಿ ಮತ್ತೆ ಮಿಸ್ ಆಗಿ ಮಹಾರಾಷ್ಟ್ರದಲ್ಲಿ ಟ್ರ್ಯಾಕ್ ಆಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಬೈಂದೂರು ಪಿ.ಎಸ್.ಐ ಪವನ್ ನಾಯಕ್, ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹಾಗೂ ಡಿ.ವೈ.ಎಸ್.ಪಿ ಶ್ರೀಕಾಂತ್ ಮತ್ತು ಸಂತೋಷ್ ಕಾಯ್ಕಿಣಿ ಅವರ ಮಾರ್ಗದರ್ಶನ ಪಡೆದು ಗಂಗೊಳ್ಳಿ ಪಿ.ಎಸ್.ಐ ವಿನಯ ಎಂ ಕೊರ್ಲಹಳ್ಳಿ ಮತ್ತು ಸಿಬ್ಬಂದಿ ಮೋಹನ ಪೂಜಾರಿ, ನಾಗೇಂದ್ರ, ಕೃಷ್ಣ ದೇವಾಡಿಗ, ಶ್ರೀಧರ್, ಸುಜಿತ್, ಪ್ರಿನ್ಸ್, ಶ್ರೀನಿವಾಸ, ರಾಘವೇಂದ್ರ, ನಾಗೇಶ ಗೌಡ ತಂಡದೊಂದಿಗೆ ಆರೋಪಿಗಳನ್ನು ಮಹಾರಾಷ್ಟ್ರದ ದುಲೇ ಜಿಲ್ಲೆ ಪೊಲೀಸರ ಸಹಕಾರದಲ್ಲಿ ಸೆರೆ ಹಿಡಿದಿದ್ದಾರೆ.
ಸ್ಥಳೀಯ ಕ್ರೈಂ ಬ್ರ್ಯಾಂಚ್ ಟೀಂ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುದ ವೇಳೆ ಈ ತಂಡ ಮಧ್ಯಪ್ರದೇಶ ಮೂಲದ್ದು ಎಂದು ಗೊತ್ತಾಗಿದೆ. ಈ ತಂಡದ ಮೇಲೆ ಹಲವಾರು ಕೇಸುಗಳು ಇವೆ ಎಂಬ ಮಾಹಿತಿ ಉಡುಪಿ ಪೊಲೀಸರಿಗೆ ಸಿಕ್ಕಿದೆ. ಕಸ್ಟಡಿಗೆ ಪದವಿ ಪಡೆದು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿಗಳ ಪತ್ತೆಗೆ ನೆರವಾಯಿತು ಫಾಸ್ಟ್‌ಟ್ಯಾಗ್
ಟೋಲ್‌ಗೇಟ್ ಮತ್ತು ಫಾಸ್ಟ್‌ಟ್ಯಾಗ್ ಪೊಲೀಸರಿಗೆ ಈ ಪ್ರಕರಣದಲ್ಲಿ ವರವಾಗಿ ಪರಿಣಮಿಸಿದೆ. ಫಾಸ್ಟ್‌ಟ್ಯಾಗ್ ನಂಬರ್ ಮತ್ತು ಸಿಸಿಟಿವಿ ಫುಟೇಜ್‌ಗಳು ದರೋಡೆಕೋರರ ಪತ್ತೆಗೆ ಪ್ರಮುಖ ಅಸ್ತ್ರವಾಗಿವೆ. ಸದ್ಯ ಬೈಂದೂರು ಕೋರ್ಟಿಗೆ ಆರೋಪಿಗಳನ್ನು ಹಾಜರುಪಡಿಸಿ ನಂತರ ಹೆಚ್ಚಿನ ವಿಚಾರಣೆಗೆ ಪೋಲಿಸ್ ವಶಕ್ಕೆ ಪಡೆಯಲಾಗಿದೆ. 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣದ ಜತೆಗೆ 10 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.