Site icon Vistara News

Mandya Crime | ಆಭರಣ ದೋಚಲು ಮಹಿಳೆಯರ ರುಂಡ, ಮುಂಡ ಭೇದಿಸಿದ್ದ ಆರೋಪಿಗಳ ಬಂಧನ

Accident

ಮಂಡ್ಯ : ಮೂವರು ಮಹಿಳೆಯರ ರುಂಡ, ಮುಂಡ ಪ್ರತ್ಯೇಕಿಸಿ ಕೊಲೆ ಮಾಡಿ ಅವರ ನಗ-ನಗದು ದೋಚಿದ್ದ ಆರೋಪಿಗಳನ್ನು ಶ್ರೀರಂಗಪಟ್ಟಣ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕೊಡಿಹಳ್ಳಿ ಕಾಲೊನಿಯ ಸಿದ್ದಲಿಗಸ್ವಾಮಿ(31) ಹಾಗೂ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹರವು ಗ್ರಾಮದ ಚಂದ್ರಕಲಾ (29) ಬಂಧಿತರು. ಆರೋಪಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆಯಲ್ಲಿದ್ದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿದ ಐಜಿಪಿ ಮಧುಕರ್ ಪವಾರ್, ಆರೋಪಿಗಳು ಈಗಾಗಲೇ ಮೂವರನ್ನು ಕೊಲೆ ಮಾಡಿದ್ದು, ಇನ್ನೂ ಹಲವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂಬುದು ತನಿಖೆ ವೇಳೆ ಬಹಿರಂಗಗೊಂಡಿದೆ ಎಂಬುದಾಗಿ ಹೇಳಿದ್ದಾರೆ.

ಏನಿದು ಕೊಲೆ ಪ್ರಕರಣ?
ಜೂನ್ 7ರಂದು ಪಾಂಡವಪುರ ತಾಲೂಕಿನ ಬೇಬಿ ಕೆರೆ ಕೋಡಿ ಬಳಿ ಒಂದು ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಭತ್ತದ ಗದ್ದೆಯಲ್ಲಿ ಮಹಿಳೆಯರಿಬ್ಬರ ಮೃತದೇಹಗಳು ಪತ್ತೆಯಾಗಿದ್ದವು. ಎರಡೂ ದೇಹಗಳ ತಲೆಯಿಂದ ಕೆಳಭಾಗ ಮಾತ್ರ ಪತ್ತೆಯಾಗಿದ್ದವು. ತಲೆ ಇರಲಿಲ್ಲ. ಪ್ರಕರಣವನ್ನು ವಿಚಾರಣೆ ನಡೆಸಿದ್ದ ಪೊಲೀಸರು ಒಂದೇ ತಂಡದಿಂದ ನಡೆದಿರುವ ಕೊಲೆ ಎಂಬುದನ್ನು ಊಹಿಸಿ ತನಿಖೆ ನಡೆಸಿದ್ದರು.
ಮಂಡ್ಯ ಎಸ್ಪಿ ಯತೀಶ್ , ಶ್ರೀರಂಗಪಟ್ಟಣ ಡಿವೈಎಸ್ಪಿ ಸಂದೇಶ್ ಮಾರ್ ನೇತೃತ್ವದಲ್ಲಿ ೯ ತಂಡ ರಚಿಸಿದ್ದರು. ತನಿಖಾ ತಂಡಗಳು ರಾಜ್ಯ ಮತ್ತು ಹೊರ ರಾಜ್ಯಗಳ 1116 ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ಪರಿಶೀಲಿಸಿದ್ದವು. ಅಂತೆಯೇ ಚಾಮರಾಜನಗರದಲ್ಲಿ ಮಹಿಳೆ ಕಾಣೆಯಾದ ಪ್ರಕರಣದ ಜಾಡು ಹಿಡಿದು, ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಬೆಂಗಳೂರು ಹೊರವಲಯದ ದಾಬಸ್‌ಪೇಟೆಯಲ್ಲಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಹಣಕಾಸು ವಂಚನೆ, ಚಿನ್ನಾಭರಣ ದೋಚಲು ಆರೋಪಿಗಳು ಒಟ್ಟು ಮೂರು ಕೊಲೆಗಳನ್ನು ಮಾಡಿದ್ದರು. ಕೊಲೆಯಾದ ಮೂವರು ಮಹಿಳೆಯರನ್ನು ಗಾರ್ಮೆಂಟ್ಸ್‌ಗಳಲ್ಲಿ ಹಾಗೂ ಹೋಮ್‌ ನರ್ಸ್‌ ಅಗಿ ಕೆಲಸ ಕೊಡಿಸುವುದಾಗಿ ನಂಬಿಸಿ ಮೈಸೂರಿಗೆ ಕರೆದುಕೊಂಡು ಬಂದಿದ್ದರು. ಬಳಿಕ ಅವರ ಬಳಿಯಿದ್ದ ಚಿನ್ನಾಭರಣಗಳನ್ನು ಕಸಿದುಕೊಂಡು, ಗಿರವಿ ಅಂಗಡಿಯಲ್ಲಿ ಮಾರಾಟ ಮಾಡಿದ್ದರು. ನಂತರ ಅವರನ್ನು ಕೊಲೆ ಮಾಡಿ ಶವಗಳ ರುಂಡವನ್ನು ನಾಲೆಗೆ ಎಸೆದಿದ್ದರು. ಬಂಧಿತರು

ಆರೋಪಿಗಳನ್ನು ಬಂಧಿಸಿರುವ ಪೊಲೀಸರ ತಂಡವನ್ನು ಐಜಿಪಿ ಮಧುಕರ್ ಪವಾರ್ ಮತ್ತು ಎಸ್ಪಿ ಯತೀಶ್ ಅಭಿನಂದಿಸಿದ್ದು, 1 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

ಇದನ್ನೂ ಓದಿ | ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಇನ್ನೂ ಎನ್‌ಐಎಗೆ ಹಸ್ತಾಂತರವಾಗಿಲ್ಲ, ಪೊಲೀಸರಿಂದಲೇ ತನಿಖೆ: ಎಡಿಜಿಪಿ

Exit mobile version