Site icon Vistara News

JDS Politics: ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್‌ ಸೇರ್ಪಡೆ ಫಿಕ್ಸ್‌; ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನ

assembly-session-insteresting discussion over arasikere mla Shivalingegowda

ಹಾಸನ: ಹಲವು ತಿಂಗಳಿಂದ ಜೆಡಿಎಸ್‌ನೊಂದಿಗೆ (JDS Politics) ಅಂತರ ಕಾಯ್ದುಕೊಂಡಿದ್ದ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಕೊನೆಗೂ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಲು ತೀರ್ಮಾನಿಸಿದ್ದಾರೆ. ಅರಸೀಕೆರೆಯಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಬಹುತೇಕ ಬೆಂಬಲಿಗರು ಕಾಂಗ್ರೆಸ್‌ ಸೇರ್ಪಡೆಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಕಾಂಗ್ರೆಸ್‌ ಪಕ್ಷ ಸೇರಲು ನಿರ್ಧರಿಸಿದ್ದಾರೆ.

ಇತ್ತೀಚೆಗೆ ಅರಕಲಗೂಡು ಕ್ಷೇತ್ರದಲ್ಲಿ ಹಾಲಿ ಜೆಡಿಎಸ್‌ ಶಾಸಕ ಎ.ಟಿ.ರಾಮಸ್ವಾಮಿ ಬದಲಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಜಿ ಸಚಿವ ಎ.ಮಂಜುಗೆ ವಿಧಾನಸಭಾ ಚುನಾವಣೆ ಟಿಕೆಟ್‌ ಘೋಷಿಸಿದ್ದರು. ಇದರಿಂದ ಎ.ಟಿ.ರಾಮಸ್ವಾಮಿ ಅವರು ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಅರಸೀಕೆರೆ ಜೆಡಿಎಸ್ ಶಿವಲಿಂಗೇಗೌಡ ಕೂಡ ಕಾಂಗ್ರೆಸ್ ಸೇರಲು ತೀರ್ಮಾನಿಸಿರುವುದರಿಂದ ಜೆಡಿಎಸ್‌ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ನ ಮತ್ತೊಂದು ವಿಕೆಟ್‌ ಪತನವಾದಂತಾಗಿದೆ.

ಇದನ್ನೂ ಓದಿ | Karnataka politics : ಆಪ್‌ಗೆ ಗುಡ್‌ಬೈ ಹೇಳಿ ಕಮಲ ಪಾಳಯ ಸೇರಿದ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ ರಾವ್‌

ಅರಸೀಕೆರೆಯ ತೋಟದ ಮನೆಯಲ್ಲಿ ಶಾಸಕ ಶಿವಲಿಂಗೇಗೌಡ ಕಾರ್ಯಕರ್ತರ ಸಭೆ ಕರೆದಿದ್ದರು. ಸಭೆಯಲ್ಲಿ ಒಕ್ಕೊರಲಿನಿಂದ ಶಿವಲಿಂಗೇಗೌಡ ಕಾಂಗ್ರೆಸ್ ಸೇರಲಿ ಎಂದ ನೆರೆದಿದ್ದ ಅಭಿಮಾನಿಗಳು, ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಶಿವಲಿಂಗೇಗೌಡ, ನನ್ನನ್ನು ಕೂಡ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರಂತೆ ರಾಜಿ ಮಾಡಿಸಬಹುದಿತ್ತು. ಆದರೆ ನನ್ನೊಟ್ಟಿಗೆ ಗುರುತಿಸಿಕೊಂಡ ಎಲ್ಲರನ್ನು ಪಕ್ಷದಿಂದ ತೆಗೆದರು. ಹಾಗಾಗಿ ಅವರೇ ನಮ್ಮನ್ನು ಬರಿ ಬೆತ್ತಲೆ ಮಾಡಲು ನೋಡಿದರು. ಆದರೆ ಜನ ನಮ್ಮನ್ನು ಕೈ ಬಿಡಲಿಲ್ಲ ಎಂದು ಹೇಳಿದ್ದಾರೆ.

ನೀವು ಯಾವುದಾದರೂ ರಾಷ್ಟ್ರೀಯ ಪಕ್ಷದ ಚಿಹ್ನೆಯಿಂದ ಸ್ಪರ್ಧೆ ಮಾಡಿ ಎಂದು ಬೆಂಬಲಿಗರು ಹಸ್ತದ ಗುರುತು ತೋರಿಸಿದ್ದಾರೆ. ಈ ವೇಳೆ ಶಿವಲಿಂಗೇಗೌಡ ಕಾಂಗ್ರೆಸ್ ಸೇರಬೇಕಾ ಎಂದು ಪ್ರಶ್ನಿಸಿದಾಗ ಒಕ್ಕೊರಲಿನಿಂದ ಹೌದು ಹೌದು ಎಂದು ನೆರೆದಿದ್ದ ಜನರು ಕಾಂಗ್ರೆಸ್ ಸೇರಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ | Pulse of Karnataka: ಹಳೆ ಮೈಸೂರು: ವಿಸ್ತಾರ-ಅಖಾಡಾ ಸಮೀಕ್ಷೆ: ಮೂವರು ಸಿಎಂ ಅಭ್ಯರ್ಥಿಗಳ ತವರು ಜನರ ಮನದಲ್ಲೇನಿದೆ?

ಮಾರ್ಚ್ 5 ರಂದು ಅರಸೀಕೆರೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಈ ವೇಳೆ ಶಿವಲಿಂಗೇಗೌಡ ಕಾಂಗ್ರೆಸ್ ಸೇರಲು ಮುಹೂರ್ತ ಫಿಕ್ಸ್ ಆಗಿದೆ ಎನ್ನಲಾಗಿದೆ. ಇದೇ ದಿನ ಮುಂದೆ ಕಾಂಗ್ರೆಸ್ ಸರ್ಕಾರ ಬಂದರೆ ಗೌಡರಿಗೆ ಸಚಿವ ಸ್ಥಾನ ನೀಡಿ ಎಂದು ಒತ್ತಾಯ ಮಾಡಲು ಕಾರ್ಯಕರ್ತರು ತೀರ್ಮಾನ ಮಾಡಿದ್ದಾರೆ. ಇದರಿಂದ ಒಂದು ವರ್ಷದಿಂದ ನಡೆಯುತ್ತಿದ್ದ ಚರ್ಚೆಗೆ ಕಡೆಗೂ ತೆರೆ ಬಿದ್ದಿದೆ.

Exit mobile version