ಪುತ್ತೂರು (ದಕ್ಷಿಣ ಕನ್ನಡ): ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ (Karnataka Election 2023) ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಬಿಜೆಪಿಗೆ ಸಡ್ಡು ಹೊಡೆದ ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ (Arun kumar puthila) ಅವರು ತಮ್ಮ ಬಂಡಾಯವನ್ನು ಮುಂದುವರಿಸಿದ್ದಾರೆ. ಟಿಕೆಟ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಬಿಜೆಪಿಗೆ ಸಡ್ಡು ಹೊಡೆದಿದ್ದ ಅವರ ವಿರುದ್ಧ ಸಂಘ ಪರಿವಾರ ತಿರುಗಿಬಿದ್ದಿತ್ತು. ಇದೀಗ ಪುತ್ತಿಲ ಅವರೇ ಸಂಘ ಪರಿವಾರಕ್ಕೆ (Sangha Parivara) ಸಡ್ಡು ಹೊಡೆಯಲು ಮುಂದಾಗಿದ್ದಾರೆ. ಬಿಜೆಪಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿರುವ ಸಂಘ ಪರಿವಾರದಿಂದ ಹಿಂದುಗಳಿಗೆ ಅನ್ಯಾಯ ಆಗುತ್ತಿದೆ ಎಂದು ಆಪಾದಿಸಿರುವ ಅವರು ಪುತ್ತಿಲ ಪರಿವಾರ (Puthila parivara) ಅನ್ನೋ ಪ್ರತ್ಯೇಕ ಪರಿವಾರ ಹುಟ್ಟು ಹಾಕಿದ್ದಾರೆ.
ಪುತ್ತೂರಿಗೆ ಪುತ್ತಿಲ… ಇದು ಚುನಾವಣೆಯ ವೇಳೆ ಪುತ್ತೂರಿನ ಹಿಂದೂ ಯುವಕರ ಘೋಷಣೆಯಾಗಿತ್ತು. ಫಲಿತಾಂಶ ಬಂದಾಗ ಪುತ್ತೂರಲ್ಲಿ ಪುತ್ತಿಲ ಸೋತರೂ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. 62 ಸಾವಿರ ಮತ ಪಡೆದಿದ್ದ ಅರುಣ್ ಪುತ್ತಿಲ ಕೇವಲ 4 ಸಾವಿರ ಮತಗಳಿಂದ ಸೋಲೊಪ್ಪಿಕೊಂಡಿದ್ದರು.
ಹಿಂದುತ್ವದ ಭದ್ರಕೋಟೆಯಲ್ಲಿ ಹಿಂದುತ್ವದ ಈ ಸೋಲಿಗೆ ಬಿಜೆಪಿ ಹಾಗೂ ಸಂಘ ಪರಿವಾರ ಕಾರಣ ಅನ್ನೋ ಆರೋಪ ಕೂಡಾ ಕೇಳಿಬಂದಿತ್ತು. ಎಲ್ಲರೂ ಸೇರಿ ನನ್ನ ವಿರುದ್ಧ ನಡೆಸಿದ ಅಪಪ್ರಚಾರ ಈ ಸೋಲಿಗೆ ಕಾರಣ ಅನ್ನುವುದು ಪುತ್ತಿಲ ಅವರ ನೇರ ಆರೋಪ.
ಈ ನಡುವೆ, ನಳಿನ್ ಕುಮಾರ್ ಕಟೀಲ್ ಮತ್ತು ಡಿ.ವಿ. ಸದಾನಂದ ಗೌಡ ಅವರ ವಿರುದ್ಧ ಬ್ಯಾನರ್ ಬರೆದು ಚಪ್ಪಲಿ ಹಾರ ಹಾಕಿದ ವಿಚಾರದಲ್ಲೂ ಪುತ್ತಿಲ ಬೆಂಬಲಿಗರ ಮೇಲೆ ನಡೆದ ದೌರ್ಜನ್ಯ ಹಿಂದೂ ಯುವಕರನ್ನು ಮತ್ತಷ್ಟು ಆಕ್ರೋಶಿತರನ್ನಾಗಿ ಮಾಡಿದೆ. ಬಿಜೆಪಿಯ ಹಿಂದುತ್ವ ಕೇವಲ ರಾಜಕೀಯ ಉದ್ದೇಶ ಹೊಂದಿದ್ದು ಸಂಘ ಪರಿವಾರದ ಪ್ರಮುಖರೂ ಇದರಲ್ಲಿ ಭಾಗಿಯಾಗಿದ್ದಾರೆ ಅನ್ನೊ ಆರೋಪ ಪುತ್ತಿಲ ಬೆಂಬಲಿಗರಿಂದ ಕೇಳಿ ಬಂದಿತ್ತು.
ಇದಲ್ಲದಕ್ಕೂ ಉತ್ತರವಾಗಿ ಭಾನುವಾರ ನಡೆದ ಸಮರ್ಪಣಾ ಸಮಾವೇಶದಲ್ಲಿ ಉತ್ತರ ನೀಡಲಾಗಿದೆ. ಸಂಘ ಪರಿವಾರಕ್ಕೆ ಪರ್ಯಾಯವಾಗಿ ಹಿಂದೂ ಸಂಘಟನೆ ಹುಟ್ಟು ಹಾಕಿರುವ ಪುತ್ತಿಲ ಅಭಿಮಾನಿಗಳು, ಪುತ್ತಿಲ ಪರಿವಾರ ಎಂಬ ಹೊಸ ಸಂಘಟನೆಗೆ ಚಾಲನೆ ನೀಡಿದ್ದಾರೆ. ಸಾವಿರಾರು ಸಂಘ ಪರಿವಾರದ ಕಾರ್ಯಕರ್ತರು ಅರುಣ್ ಪುತ್ತಿಲ ಹಿಂದೆ ನಿಂತಿರುವುದರಿಂದ ಸದ್ಯ ಕರಾವಳಿಯಲ್ಲಿ ಸಂಘವೇ ಇಬ್ಭಾಗವಾಗುವ ಆತಂಕ ಎದುರಾಗಿದೆ.
ಕಳೆದ ಮುವತ್ತು ವರ್ಷಗಳಿಂದ ಹಿಂದೂ ಸಂಘಟನೆಯಲ್ಲಿದ್ದ ಪುತ್ತಿಲ ಅವರಿಗೆ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಪುತ್ತಿಲ ಅವರಿಗೆ ಟಿಕೇಟ್ ನೀಡದೆ ಇದ್ದ ಬಗ್ಗೆ ಜಿಲ್ಲೆಯ ಅನೇಕ ಕಡೆ ಅಸಮಾಧಾನ ವ್ಯಕ್ತವಾಗಿತ್ತು. ಚುನಾವಣೆ ಪುತ್ತೂರಿನಲ್ಲಿ ನಡೆದಿದ್ದರೂ ಹಿಂದೂ ಸಂಘಟನೆಗಳ ಅನೇಕ ಕಾರ್ಯಕರ್ತರು ಪುತ್ತೂರಿಗೆ ಬಂದು ಪುತ್ತಿಲ ಪರ ಕೆಲಸ ಮಾಡಿದ್ದರು.
ಆದರೆ ಸಂಘ ಪರಿವಾರ ಹಾಗೂ ಬಿಜೆಪಿ ನಾಯಕರು ಕೊನೆ ಕ್ಷಣದಲ್ಲಿ ಎಸ್‌ಡಿಪಿಐ ಹಾಗೂ ಕಾಂಗ್ರೆಸ್ ಪಕ್ಷಕ್ಕಾದ್ರೂ ಮತ ಹಾಕಿ ಪುತ್ತಿಲನಿಗೆ ಹಾಕಬೇಡಿ ಎನ್ನುವ ಪ್ರಚಾರ ನಡೆಸಿದ್ದರು. ಇದೆಲ್ಲವೂ ಈಗ ಹಿಂದೂ ಕಾರ್ಯಕರ್ತರ ಆಕ್ರೋಶ ಹೆಚ್ಚಿಸಿದೆ. ಜಿಲ್ಲೆಯ ಹಲವೆಡೆ ಅರುಣ್ ಪುತ್ತಿಲ ಅಭಿಮಾನಿ ಬಳಗ ಹುಟ್ಟಿಕೊಂಡಿದ್ದು ಹತ್ತೂರಿಗೂ ಪುತ್ತಿಲ ಅನ್ನೋ ಪೋಸ್ಟರ್ ಹಾಕಲಾಗಿದೆ. ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಪುತ್ತಿಲರೇ ನಮ್ಮ ಅಭ್ಯರ್ಥಿ ಎಂಬ ಘೋಷಣೆಯೂ ಆರಂಭವಾಗಿದೆ. ಇದರ ನಡುವೆ ಇದೀಗ ಪುತ್ತಿಲ ಪರಿವಾರ ಆರಂಭವಾಗಿದ್ದು, ಸಾವಿರಾರು ಯುವಕರು ಪುತ್ತಿಲ ಪರಿವಾರ ಸೇರಿದ್ದಾರೆ.
ಟಿಕೇಟ್ ಹಂಚಿಕೆಯ ವಿಚಾರದಲ್ಲಿ ಎಡವಿದ್ದ ಬಿಜೆಪಿ ತಪ್ಪನ್ನ ಸರಿಪಡಿಸುವ ಕೆಲಸ ಮಾಡಿಲ್ಲ. ಬದಲಾಗಿ ಪುತ್ತಿಲ ಹಾಗೂ ಸಂಘಟನೆಯ ಯುವಕರನ್ನೇ ತಪ್ಪಾಗಿ ನಡೆಸಿಕೊಂಡಿತ್ತು. ಇದೆಲ್ಲದರ ಪರಿಣಾಮ ಇದೀಗ ಜಿಲ್ಲೆಯಲ್ಲಿ ಹಿಂದೂ ಸಂಘಟನೆಯೆ ಇಬ್ಬಾಗವಾಗಿದ್ದು ಸಂಘ ಪರಿವಾರ ವರ್ಸಸ್ ಪುತ್ತಿಲ ಪರಿವಾರದ ಹಿಂದುತ್ವ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಸಂಘಕ್ಕೇ ಈ ರೀತಿ ತಿರುಗೇಟು ನೀಡಿರೋ ಹಿಂದೂ ಯುವಕರು ಪುತ್ತಿಲ ಪರಿವಾರ ಸೇರಿಕೊಳ್ತಾ ಇರೋದು ಸಂಘ ಪರಿವಾರಕ್ಕೆ ನುಂಗಲಾರದ ತುತ್ತಾಗಿರೋದಂತು ಸತ್ಯ.
ಈ ನಡುವೆ ಪುತ್ತಿಲ ಅವರು ತಮ್ಮನ್ನು ವಿರೋಧಿಸುವ ನಾಯಕರನ್ನೂ ಗೌರವದಿಂದ ಕಾಣುವ ನಡೆಯನ್ನು ಮುಂದುವರಿಸಿದ್ದಾರೆ. ಶುಕ್ರವಾರ ನಡೆದ ಸಂಘ ಪರಿವಾರದ ನಾಯಕರೊಬ್ಬರ ಮಗಳ ಮದುವೆಯಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಪುತ್ತಿಲ ಮುಖಾಮುಖಿಯಾಗಿದ್ದರು. ಈ ವೇಳೆ, ಪುತ್ತಿಲ ಅವರು ಪ್ರಭಾಕರ್ ಭಟ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಕೋರಿದ್ದರು. ಭಟ್ ಅವರು ಕೂಡಾ ಪುತ್ತಿಲರ ಬೆನ್ನು ತಟ್ಟಿದ್ದರು. ಇದು ಅಭಿಮಾನಿಗಳಲ್ಲಿ ಪುತ್ತಿಲ ಮೇಲಿನ ಗೌರವವನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಬಿಜೆಪಿ ನಾಯಕರ ವಿರುದ್ಧ ಸೂಲಿಬೆಲೆ ಕಿಡಿ; ಪೊಲೀಸ್ ದೌರ್ಜನ್ಯದ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು: ಪುತ್ತಿಲ