Site icon Vistara News

Vijay Sankalpa Yatre: ಬಿಜೆಪಿ ಬಹುಮತ ಪಡೆದು, ಮತ್ತೆ ಅಧಿಕಾರಕ್ಕೇರುವುದು ಖಚಿತ; ಅರುಣ್‌ ಸಿಂಗ್‌ ವಿಶ್ವಾಸ

Arun Singh says BJP will come back to power with majority

#image_title

ಬೆಂಗಳೂರು: ರಾಜ್ಯಾದ್ಯಂತ ವಿಜಯ ಸಂಕಲ್ಪ ಯಾತ್ರೆ (Vijay Sankalpa Yatre) ನಡೆಯುತ್ತಿದ್ದು, ಜನರು ಅತ್ಯಂತ ಉತ್ಸಾಹಭರಿತರಾಗಿ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರಕ್ಕೆ ಏರುವುದು ಖಚಿತ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

ಆನೇಕಲ್ ಮತ್ತು ಚಂದಾಪುರದಲ್ಲಿ ಭಾನುವಾರ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಆತಂಕಗೊಂಡಿದ್ದು, ಏನು ಮಾಡಬೇಕೆಂದು ಅವರಿಗೆ ದಿಕ್ಕು ತೋಚದಂತಾಗಿದೆ. ಚುನಾವಣೆಗೆ ಸಂಬಂಧಿಸಿ ಏನು ಷಡ್ಯಂತ್ರ, ತಂತ್ರ ಹೆಣೆಯಬೇಕೆಂದು ಅವರಿಗೆ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಗಿದರು.

ಕಾಂಗ್ರೆಸ್ಸಿಗರಲ್ಲಿ ಹೇಳಲು ಯಾವುದೇ ವಿಷಯವೇ ಉಳಿದಿಲ್ಲ ಎಂದ ಅವರು, ಕೇಂದ್ರದಲ್ಲಿ ಮೋದಿ ಸರ್ಕಾರ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಸರ್ಕಾರವು ಮಾಡಿದ ಸಮಗ್ರ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಗೆಲುವಿಗೆ ಸಹಕಾರಿ ಎಂದು ವಿಶ್ಲೇಷಣೆ ಮಾಡಿದರು.

ಇದನ್ನೂ ಓದಿ | B.S. Yediyurappa: ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪಗೆ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ

ಕಾಂಗ್ರೆಸ್ಸಿಗರು ಬಿಜೆಪಿ ಸರ್ಕಾರದ ಮಾದರಿಯಲ್ಲಿ ರೈತರಿಗೆ ಹಣ ಏಕೆ ಕೊಟ್ಟಿಲ್ಲ? ಬಡವರಿಗೆ ಸಹಾಯ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಪಕ್ಷದವರ ಚಿಂತನೆ ಬಡತನ ನಿವಾರಣೆ ಕಡೆ ಇರಲಿಲ್ಲ. ಕಾಂಗ್ರೆಸ್ಸಿಗರು ಭ್ರಷ್ಟಾಚಾರಕ್ಕೆ ಮುಂದಾಗಿದ್ದರಲ್ಲದೆ, ತುಷ್ಟೀಕರಣ ನೀತಿ ತಮ್ಮದಾಗಿಸಿಕೊಂಡಿದ್ದರು. ಪಿಎಫ್‍ಐ ಭಯೋತ್ಪಾದನೆಗೆ ಕಾಂಗ್ರೆಸ್ ಬೆಂಬಲ ಕೊಟ್ಟಿತ್ತು ಎಂದು ಟೀಕಿಸಿದರು.

ಬಿಜೆಪಿ ಸರ್ಕಾರವು ಪಿಎಫ್‍ಐ ನಿಷೇಧಿಸಿದೆ. ಆದರೆ, ಕಾಂಗ್ರೆಸ್ ಪಕ್ಷದವರು ಮುಂಜಾನೆ ಎದ್ದು ಟಿಪ್ಪು ನಮನದಲ್ಲಿ ತೊಡಗಿದ್ದಾರೆ. ತುಷ್ಟೀಕರಣವನ್ನು ಮುಂದುವರಿಸಿರುವ ಅವರು, ಹಿಂದುಗಳ ಅಪಮಾನ ಮಾಡುವುದು ಕಾಂಗ್ರೆಸ್ ನೀತಿಯಾಗಿದೆ. ಪಕ್ಷವು ಮತ್ತೆ ಅಧಿಕಾರ ಪಡೆಯುವುದು ಖಚಿತ ಎಂದ ಅವರು, ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸಲು ಬಿಜೆಪಿಗೆ ಮತ ಕೊಡಿ ಎಂದು ಅವರು ಮನವಿ ಮಾಡಿದರು.

ಕಾಂಗ್ರೆಸ್ ಗೆದ್ದರೆ ಆ ಪಕ್ಷದವರು ದೇಶದ್ರೋಹಿಗಳಿಗೆ ಬೆಂಬಲ ಕೊಡುತ್ತಾರೆ. ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದಾಗಲೆಲ್ಲ ದೇಶದ ಗೌರವ ಮತ್ತು ಪ್ರಜಾಪ್ರಭುತ್ವಕ್ಕೆ ಚ್ಯುತಿ ಬರುವಂತೆ ಮಾತನಾಡುತ್ತಾರೆ. ಅಲ್ಲದೆ ಕಾಂಗ್ರೆಸ್ಸಿಗರು ಹಿಂದುತ್ವದ ವಿರೋಧಿಗಳು ಎಂದ ಅವರು, 3 ರಾಜ್ಯಗಳಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ತ್ರಿಪುರ, ನಾಗಾಲ್ಯಾಂಡ್, ಮೇಘಾಲಯದಲ್ಲಿ ಕಾಂಗ್ರೆಸ್ ಸೋಲೊಪ್ಪಿಕೊಂಡಿದ್ದು, ಬಿಜೆಪಿ ಜಯಭೇರಿ ಬಾರಿಸಿದೆ. ಕರ್ನಾಟಕದಲ್ಲೂ 150ಕ್ಕೂ ಹೆಚ್ಚು ಸೀಟು ಗೆದ್ದು, ಅಧಿಕಾರ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ | BJP Karnataka: ದೇಶದ ಅಭಿವೃದ್ಧಿಯ ಪಯಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು: ಬಿ.ವೈ. ವಿಜಯೇಂದ್ರ

Exit mobile version