Site icon Vistara News

Aam Aadmi Party: ಎಎಪಿ ಭ್ರಷ್ಟಾಚಾರ ಸಹಿಸಲ್ಲ, ನನ್ನ ಮಗ ಭ್ರಷ್ಟಾಚಾರ ಮಾಡಿದರೂ ಜೈಲಿಗೆ ಹಾಕುವೆ: ಅರವಿಂದ್ ಕೇಜ್ರಿವಾಲ್

Arvind Kejriwal says AAP will not tolerate corruption, will put my son in jail even if he indulges in corruption

#image_title

ದಾವಣಗೆರೆ: ಆಮ್‌ ಆದ್ಮಿ ಪಾರ್ಟಿ ಸರ್ಕಾರದಲ್ಲಿ ಯಾರೇ ಭ್ರಷ್ಟಾಚಾರ ಮಾಡಿದರೂ ನಾವು ಸಹಿಸಲ್ಲ. ಪಂಜಾಬ್‌ನಲ್ಲಿ ಒಬ್ಬ ಮಂತ್ರಿ ಗೋಲ್ ಮಾಲ್ ಮಾಡಿ ಸಿಕ್ಕಿಬಿದ್ದ.‌ ಅವರನ್ನು ಅಲ್ಲಿನ ಸಿಎಂ ಭಗವಂತ್ ಮಾನ್ ಅವರು ಜೈಲಿಗೆ ಕಳುಹಿಸಿದರು, ಎಂಎಲ್‌ಎ ಸಿಕ್ಕಿಬಿದ್ದಾಗ ಅವರೂ ಜೈಲಿಗೆ ಹೋಗಿದ್ದಾರೆ. ನನ್ನ ಮಗ ನಾಳೆ ಭ್ರಷ್ಟಾಚಾರದಲ್ಲಿ ತೊಡಗಿದರೂ ಜೈಲಿಗೆ ಹಾಕುತ್ತೇನೆ ಎಂದು ಎಎಪಿ (Aam Aadmi Party) ರಾಷ್ಟ್ರೀಯ ಅಧ್ಯಕ್ಷ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ನಡೆದ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನರು ತುಂಬಾ ಒಳ್ಳೆಯವರು. ತುಂಬಾ ಪರಿಶ್ರಮಶಾಲಿಗಳು, ಅಪ್ರತಿಮ ದೇಶಪ್ರೇಮಿಗಳು. ಆದರೆ ನಿಮ್ಮ ನಾಯಕರು ತುಂಬಾ ಕೆಟ್ಟವರಿದ್ದಾರೆ ಎಂದು ಆರೋಪಿಸಿದರು.

ಇಲ್ಲಿಯ ಸರ್ಕಾರವನ್ನು 40 ಪರ್ಸೆಂಟ್‌ ಸರ್ಕಾರ ಎನ್ನುತ್ತಾರೆ. ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಿದ್ದರು. ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ, ನಾವು ಭ್ರಷ್ಟಾಚಾರವನ್ನು ತೊಲಗಿಸುತ್ತೇವೆ ಎಂದಿದ್ದರು. ಆಗ ಭಾಯ್ ಸಾಬ್ ಈಗ ನಿಮ್ಮದೇ ಸರ್ಕಾರ ಆಡಳಿತದಲ್ಲಿದೆ ಎಂದು ಅವರಿಗೆ ಯಾರೋ ನೆನಪು ಮಾಡಿದರು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ | Sumalatha Ambareesh: ಬಿಜೆಪಿ ಸೇರಲು ಸುಮಲತಾ ಮೂರು ಕಂಡೀಷನ್;‌ ಪಕ್ಷ ಸೇರ್ಪಡೆ ಬಹುತೇಕ ಪಕ್ಕಾ?

ಕರ್ನಾಟಕದಲ್ಲಿ ಬಿಜೆಪಿ ಶಾಸಕನ ಮಗ ಕೋಟ್ಯಂತರ ರೂಪಾಯಿಗಳೊಂದಿಗೆ ಸಿಕ್ಕಿಬಿದ್ದ. ಆದರೆ, ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ನಮ್ಮ ಪಕ್ಷದ ಮನೀಶ್ ಸಿಸೋಡಿಯಾರನ್ನು ಬಂಧಿಸಿದ್ದಾರೆ. ಸಿಸೋಡಿಯಾ ನೂರಾರು ಕೋಟಿ ಲೂಟಿ ಹೊಡೆದಿದ್ದಾರೆ ಎಂದು ಟೀಕಿಸಿದ್ದರು, ಹಾಗಿದ್ದರೆ ಅವರ ಮನೆಯಲ್ಲಿ ಒಂದೆರಡು ಕೋಟಿಯಾದರೂ ಸಿಗಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.

ಮತ್ತೊಮ್ಮೆ ಡಬಲ್‌ ಎಂಜಿನ್‌ ಸರ್ಕಾರ ತಂದ್ರೆ 80 ಪರ್ಸೆಂಟ್‌ ಆಗುತ್ತೆ

ಪ್ರಧಾನಿ ನರೇಂದ್ರ ಮೋದಿ ನೀವು ಆಮ್ ಆದ್ಮಿ ಪಾರ್ಟಿಯನ್ನು ನೋಡಿ ಹೊಟ್ಟೆ ಉರಿ ಪಡಬೇಡಿ, ಕಳೆದ ಚುನಾವಣೆ ವೇಳೆ ಮೋದಿ ಬಂದು ಡಬಲ್ ಎಂಜಿನ್ ಸರ್ಕಾರ ತನ್ನಿ ಎಂದು ಹೇಳಿದ್ದರು. ಅವರ ಮಾತು ಕೇಳಿ ನೀವು ಡಬಲ್ ಎಂಜಿನ್ ಸರ್ಕಾರ ತಂದಿದ್ದೀರಿ, ಹೀಗಾಗಿ ಭ್ರಷ್ಟಾಚಾರದ ದರ 20 ರಿಂದ 40 ಪರ್ಸೆಂಟ್‌ ಏರಿತು. ದಯವಿಟ್ಟು ಮುಂದಿನ ಬಾರಿ ಡಬಲ್ ಎಂಜಿನ್ ಸರ್ಕಾರ ತರಬೇಡಿ. ಒಂದು ವೇಳೆ ತಂದರೆ 40 ಇರುವುದು 80 ಪರ್ಸೆಂಟ್‌ ಆಗುತ್ತದೆ ಎಂದು ಹೇಳಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿಜೆಪಿ ಸರ್ಕಾರದ ವಿರುದ್ಧ ದೂರು ನೀಡಿದರು. ಆಗ ಯಾವ ಮಂತ್ರಿ ಅಥವಾ ಅಧಿಕಾರಿಗಳ ವಿರುದ್ಧವೂ ಕೈಗೊಂಡಿಲ್ಲ. ಬದಲಾಗಿ ದೂರು ಕೊಟ್ಟ 82 ವರ್ಷದ ಕೆಂಪಣ್ಣ ಅವರನ್ನು ಜೈಲಿಗೆ ಹಾಕಿದ್ದರು. ಇದಕ್ಕಾಗಿ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದ ಅವರು, ಬೆಂಗಳೂರಿನಲ್ಲಿ ರಸ್ತೆ ಗುಂಡಿ ಇಲ್ಲದಂತೆ ಮಾಡುತ್ತೇವೆ ಎಂದು ಕೋಟ್ಯಂತರ ರೂಪಾಯಿ ಬಿಲ್ ಮಾಡಿದರು. ಆದರೆ, 5 ರಸ್ತೆ ಗುಂಡಿಯನ್ನು ಮುಚ್ಚಿಲ್ಲ ಎನ್ನಿಸುತ್ತದೆ ಎಂದು ಕಿಡಿಕಾರಿದರು.

ಇದನ್ನೂ ಓದಿ | ಮೊಗಸಾಲೆ ಅಂಕಣ: ಸೋನಿಯಾ, ಬಿಎಸ್‌ವೈ ಮನಸ್ಸು ಭಾರ:ಚುನಾವಣೆ ಕಣದಿಂದ ದೂರ

ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಬೇಕೆಂದರೆ ಹಣ ಕೊಡಬೇಕು, ಈಗ ಯಾರೋ ಹೇಳುತ್ತಿದ್ದರು, ಶಾಸಕರನ್ನು ಖರೀದಿಸುವಷ್ಟು ಹಣ ಇದ್ದರೆ ಸಾಕು ಇಲ್ಲಿ ಮುಖ್ಯಮಂತ್ರಿ ಆಗಬಹುದು ಎಂದು ಟೀಕಿಸಿದ ಅವರು, ನಾವು ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಿದ್ದೇವೆ, ಶಿಕ್ಷಣ ಕೊಟ್ಟಿದ್ದೇವೆ, ಪಂಜಾಬ್‌ನಲ್ಲಿ ಉಚಿತವಾಗಿ ವಿದ್ಯುತ್ ನೀಡುತ್ತಿದ್ದೇವೆ. ಹೀಗಾಗಿ ಈ ಬಾರಿ ಆಮ್‌ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರಲು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಮತ್ತು ಪಂಜಾಬ್‌ನಲ್ಲಿ ಒಂದೇ ರೀತಿಯ ಸಮಸ್ಯೆಗಳಿವೆ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮಾತನಾಡಿ, ಕರ್ನಾಟಕ ಮತ್ತು ಪಂಜಾಬ್ ರಾಜ್ಯ ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಪಂಜಾಬ್‌ನಲ್ಲಿ ಹೆಚ್ಚು ಕಬ್ಬು ಬೆಳೆಯುತ್ತೇವೆ, ನಮ್ಮ ರೈತರ ಬಳಿ ಕಬ್ಬು ಖರೀದಿಸುವ ಕೈಗಾರಿಕೆಗಳು ಅವರಿಗೆ ಹಲವು ವರ್ಷಗಳವರೆಗೆ ಹಣ ಪಾವತಿಸುತ್ತಿರಲಿಲ್ಲ. ಆದರೆ ನಮ್ಮ ಸರ್ಕಾರ ಬಂದ ತಕ್ಷಣವೇ ನಾನು ಆ ಹಣವನ್ನು ಬಿಡುಗಡೆ ಮಾಡಿಸಿದ್ದೇನೆ. ಇಲ್ಲಿಯೂ ಅದೇ ಸಮಸ್ಯೆ ಇದೆ. ಹಾಗೆಯೇ ಎನ್‌ಪಿಎಸ್‌ ಸಮಸ್ಯೆಯಿದೆ. ಆದರೆ, ಎಎಪಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ದೆಹಲಿಯಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಗುಣಮಟ್ಟದ್ದಾಗಿದೆ. ಆಸ್ಪತ್ರೆಯಲ್ಲಿ ಎಲ್ಲರಿಗೂ ಉಚಿತ ಆರೋಗ್ಯ ಸೇವೆ ನೀಡಲಾಗುತ್ತಿದೆ. ಪ್ಯಾರಾಸಿಟಮೆಲ್ ಟ್ಯಾಬ್ಲೆಟ್‌ನಿಂದ ಹಿಡಿದು ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆ ಕೂಡ ಉಚಿತವಾಗಿ ಆಗುತ್ತಿದೆ. ಆದರೆ, ಆಸ್ಪತ್ರೆಗಳನ್ನು ಕಟ್ಟಿಸುತ್ತಿದ್ದ ಸತ್ಯೇಂದ್ರ ಜೈನ್ ಅವರನ್ನು ಅರೆಸ್ಟ್ ಮಾಡಿದ್ದರು. ರಾಜ್ಯದ ಬಿಜೆಪಿ ಶಾಸಕನ ಮಗನ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಅದು ಯಾರ ಹಣ? ನಿಮ್ಮದೇ ಹಣವಾಗಿದೆ. ನೀವು ಕಟ್ಟುವ ತೆರಿಗೆ ಹಣ ಎಂದು ಕಿಡಿಕಾರಿದರು.

ಈಗಂತೂ ಎಲ್ಲ ವಸ್ತುಗಳ ಮೇಲೆ ತೆರಿಗೆ ಹಾಕಲಾಗಿದೆ. ಬೆಳಗ್ಗೆ ಎದ್ದು ಚಹಾ ಕುಡಿಯಲು ಗ್ಯಾಸ್ ಆನ್ ಮಾಡಿದರೆ ತೆರಿಗೆ ಶುರುವಾಗಿರುತ್ತದೆ. ಚಹಾ ಪುಡಿ, ಸಕ್ಕರೆ, ಹಾಲು, ಫೋನ್ ಕಲ್‌ ಮಾಡಿದರೂ ತೆರಿಗೆ, ಬೆಣ್ಣೆ ದೋಸೆ ತಿಂದರೂ ತೆರಿಗೆ ಕೊಡಬೇಕಿದೆ. ಯಾವಾಗ ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿಯಾಗುತ್ತಾರೋ ಆಗ ದೇಶದಲ್ಲಿ ಒಳ್ಳೇ ಆಡಳಿತ ಸಿಗುತ್ತದೆ. ಅವರು ಆದಾಯ ತೆರಿಗೆ ಅಧಿಕಾರಿಯಾಗಿದ್ದರು. ಹೀಗಾಗಿ ಅವರಿಗೆ ಯಾರು ಎಲ್ಲಿ ದುಡ್ಡು ಬಚ್ಚಿಟ್ಟಿದ್ದರೂ ಹೊರಗೆ ತೆಗೆಯುವುದು ಗೊತ್ತಿದೆ ಎಂದು ಹೇಳಿದರು.

ದೇಶದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದಿದ್ದು ಕೇಜ್ರಿವಾಲ್

ಆಪ್ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಇಡೀ ದೇಶದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದಿದ್ದು ಅರವಿಂದ್ ಕೇಜ್ರಿವಾಲ್ ಮಾತ್ರ. ವೃತ್ತಿಯಲ್ಲಿ ನನ್ನ ರೀತಿಯೇ ಕಲಾವಿದರಾಗಿರುವ ಭಗವಂತ ಮಾನ್ ಕೂಡ ಪಂಜಾಬ್‌ನಲ್ಲಿ ಬಹುಮತ ಪಡೆದು ಸರ್ಕಾರ ರಚನೆ ಮಾಡಿದ್ದಾರೆ. ಇವರಿಬ್ಬರಿಗೆ ಮಾತ್ರ ಇಡೀ ದೇಶದಲ್ಲಿ ಎಲ್ಲ ಪಕ್ಷಗಳು ಹೆದರುತ್ತಿವೆ. ಎಲ್ಲ ರಾಜ್ಯಗಳು ಸಾಲದ ಬಜೆಟ್ ಘೋಷಣೆ ಮಾಡುತ್ತಿರುವಾಗ ಕೇಜ್ರಿವಾಲ್ ಅವರು ಉಳಿತಾಯದ ಬಜೆಟ್ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಭ್ರಷ್ಟಾಚಾರ ಇಲ್ಲದ ಇಲಾಖೆಗಳೇ ಇಲ್ಲ. ಬಿಜೆಪಿ ಶಾಸಕನ ಮಗನ ಮನೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಸಿಕ್ಕಿದೆ. ಆದರೆ, ಮುಖ್ಯಮಂತ್ರಿ ಬೊಮ್ಮಾಯಿ ಬಾಯಿ ಬಿಡುತ್ತಿಲ್ಲ. ನಮ್ಮ ದೆಹಲಿ ಸರ್ಕಾರದ ಇಬ್ಬರು ಮಂತ್ರಿಗಳನ್ನು ಅರೆಸ್ಟ್ ಮಾಡಲಾಗಿದೆ. ಈ ಪ್ರಕರಣವನ್ನು ನಿಮ್ಮ ಪಕ್ಷದ ಹಿರಿಯರಾಗಿರುವ ಅಡ್ವಾಣಿಯವರೇ ಖಂಡಿಸಿದ್ದಾರೆ. ಅವರನ್ನೇ ಸೈಡ್ ಲೈನ್ ಮಾಡಿದ್ದೀರಿ ಎಂದು ಟೀಕಿಸಿದರು.

ಇದನ್ನೂ ಓದಿ: Sumalatha Ambareesh: ಬಿಜೆಪಿ ಸೇರಲು ಸುಮಲತಾ ಮೂರು ಕಂಡೀಷನ್;‌ ಪಕ್ಷ ಸೇರ್ಪಡೆ ಬಹುತೇಕ ಪಕ್ಕಾ?

ಹಣ ಸುರಿದರೆ ಗೆದ್ದುಬಿಡುತ್ತೇವೆ ಎಂಬ ದುರಂಕಾರದಲ್ಲಿದ್ದಾರೆ

ಆಪ್ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಮಾತನಾಡಿ, ಬದಲಾವಣೆ ಪ್ರಕೃತಿಯ ನಿಯಮ. ಕರ್ನಾಟಕದಲ್ಲಿ ಸರ್ಕಾರವನ್ನು ಬದಲಾಯಿಸಿದ್ದೇವೆ, ಪಕ್ಷ ಬದಲಾಯಿಸಿದ್ದೇವೆ. ಆದರೆ ಕರ್ನಾಟಕದ ರಾಜಕೀಯ ಬದಲಾಯಿಸಲು ಆಗಲಿಲ್ಲ. ಐದು ವರ್ಷ ಏನು ಸಾಧನೆ ಮಾಡಿಲ್ಲ ಎಂದರೂ ಪರವಾಗಿಲ್ಲ. ಚುನಾವಣೆ ಬಂದಾಗ ಹಣ ತಂದು ಸುರಿದರೆ ನಾವು ಗೆದ್ದುಬಿಡುತ್ತೇವೆ ಎಂಬ ದುರಂಕಾರದಲ್ಲಿ ಕೆಲವರಿದ್ದಾರೆ. ಈ ದುರಹಂಕಾರವನ್ನು ನಾವು ಇಳಿಸಬೇಕಿದೆ. ಇವರಿಗೆ ಆಪ್ ಬಂದ ಮೇಲೆ ಕಷ್ಟ ಆಗುತ್ತಿದೆ ಎಂದು ಹೇಳಿದರು. ಎಎಪಿ ನಾಯಕರಾದ ಬ್ರಿಜೇಶ್ ಕಾಳಪ್ಪ, ಟೆನಿಸ್ ಕೃಷ್ಣ ಸೇರಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.

Exit mobile version