Site icon Vistara News

Odisha Train Accident: ಹೌರಾದಿಂದ ವಾಪಸ್ಸಾಗಲು ರಾಜ್ಯದ 31 ವಾಲಿಬಾಲ್‌ ಕ್ರೀಡಾಪಟುಗಳ ಪರದಾಟ

karnataka volleyball players team

#image_title

ಮೈಸೂರು: ಒಡಿಶಾ ರೈಲು ದುರಂತ (Odisha Train Accident) ಹಿನ್ನೆಲೆಯಲ್ಲಿ ಪೂರ್ವ ಕರಾವಳಿ ರೈಲ್ವೆ ವಲಯದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ವಿವಿಧ ಭಾಗಗಳಿಗೆ ತೆರಳಬೇಕಿದ್ದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಅದೇ ರೀತಿ ಅಂತಾರಾಷ್ಟ್ರೀಯ ಮಟ್ಟದ ಕಿರಿಯರ ವಾಲಿಬಾಲ್‌ ಟೂರ್ನಿಗಾಗಿ ಕೋಲ್ಕೊತಾಗೆ ತೆರಳಿದ್ದ ರಾಜ್ಯದ ಕ್ರೀಡಾಪಟುಗಳು ವಾಪಸ್‌ ಬರಲು ಸಾಧ್ಯವಾಗದೆ ಪರದಾಡುತ್ತಿರುವುದು ಕಂಡುಬಂದಿದೆ.

ಒಡಿಶಾದ ಬಾಲಾಸೋರ್‌ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಕೋರಮಂಡಲ ಎಕ್ಸ್‌ಪ್ರೆಸ್‌ ಹಾಗೂ ಗೂಡ್ಸ್‌ ರೈಲು ಡಿಕ್ಕಿಯಾಗಿದ್ದರಿಂದ ಆ ಮಾರ್ಗದಲ್ಲಿ ಸಾಗುವ 49 ರೈಲುಗಳ ಸಂಚಾರ ರದ್ದಾಗಿದ್ದು, 38 ರೈಲುಗಳ ಸಂಚಾರ ಮಾರ್ಗ ಬದಲಿಸಲಾಗಿದೆ. ಹೀಗಾಗಿ ಬೆಂಗಳೂರಿನಿಂದ ಒಡಿಶಾ, ಪಶ್ಚಿಮ ಬಂಗಾಳಕ್ಕೆ ತೆರಳಬೇಕಿದ್ದ ರೈಲುಗಳ ಸಂಚಾರ ರದ್ದಾದ ಕಾರಣ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿತ್ತು. ಅದೇ ರೀತಿ ಕೋಲ್ಕೊತಾ ಕಡೆಯಿಂದ ಬರುವ ರೈಲುಗಳೂ ಸ್ಥಗಿತವಾಗಿವೆ. ಹೀಗಾಗಿ ರಾಜ್ಯಕ್ಕೆ ವಾಪಸ್ಸಾಗಲು ಸಾಧ್ಯವಾಗದೆ ವಾಲಿಬಾಲ್‌ ಕ್ರೀಡಾಪಟುಗಳು ಸಂಕಷ್ಟ ಎದುರಿಸುವಂತಾಗಿವೆ.

ಕೋಲ್ಕೊತಾಗೆ ತೆರಳಿದ್ದ ಕರ್ನಾಟಕದ ವಾಲಿಬಾಲ್‌ ಕ್ರೀಡಾಪಟುಗಳು

ಇದನ್ನೂ ಓದಿ | Odisha Train Accident: ಗ್ರೀನ್‌ ಸಿಗ್ನಲ್‌ ಸಿಕ್ಕರೂ ನಡೆಯಿತು ರೈಲು ಅಪಘಾತ, ತನಿಖಾ ವರದಿ ಮಾಹಿತಿಯೇ ಭೀಕರ

ರಾಜ್ಯದ ವಿವಿಧ ಭಾಗಗಳಿಂದ ಮೇ 24ರಂದು 31 ಕ್ರೀಡಾಪಟುಗಳು ಕೋಲ್ಕೊತಾಗೆ ತೆರಳಿದ್ದರು. ಇವರೆಲ್ಲಾ ಶುಕ್ರವಾರ ರಾತ್ರಿ 10.55ಕ್ಕೆ ಹೌರಾದಿಂದ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವಾಪಸ್ಸು ಬರಬೇಕಿತ್ತು. ಒಡಿಶಾದಲ್ಲಿ ರೈಲು ಅಪಘಾತ ನಡೆದಿದ್ದರಿಂದ ರೈಲುಗಳ ಸಂಚಾರ ರದ್ದಾಗಿದೆ. ಹೀಗಾಗಿ ರಾಜ್ಯದ ಕ್ರೀಡಾಪಟುಗಳು ತೊಂದರೆಗೀಡಾಗಿದ್ದು, ಸದ್ಯ ಹೌರಾದಲ್ಲೇ ಉಳಿದುಕೊಂಡಿದ್ದಾರೆ.

ಜಾರ್ಖಂಡ್‌ನತ್ತ ಕಳಸದ 110 ಯಾತ್ರಿಗಳ ಯಾತ್ರೆ ಆರಂಭ

ಚಿಕ್ಕಮಗಳೂರು: ಒಡಿಶಾದಲ್ಲಿ ಅಪಘಾತಕ್ಕೀಡಾದ ಕೋರಮಂಡಲ ಎಕ್ಸ್‌ಪ್ರೆಸ್‌ನಲ್ಲಿ ರೈಲಿನಲ್ಲಿದ್ದ ಜಿಲ್ಲೆಯ ಕಳಸ ತಾಲೂಕಿನ 110 ಯಾತ್ರಿಕರು ಸುರಕ್ಷಿತವಾಗಿದ್ದು, ಅವರು ಶನಿವಾರ ಕೋಲ್ಕೊತಾ ರೈಲು ನಿಲ್ದಾಣದಿಂದ 2 ಬಸ್, 1 ಟಿಟಿ ಮೂಲಕ ಜಾರ್ಖಂಡ್‌ನತ್ತ ಪ್ರಯಾಣ ಬೆಳೆಸಿದ್ದಾರೆ. ಜಾರ್ಖಂಡ್‌ನ ಜೈನರ ತೀರ್ಥಕ್ಷೇತ್ರ ಸಮ್ಮೇದ್‌ ಶಿಖರ್ಜಿಗೆ ಕಳಸಾದ 110 ಮಂದಿ ತೆರಳಿದ್ದಾರೆ. ಅವರು ಮಧ್ಯರಾತ್ರಿ 12ರ ವೇಳೆಗೆ ಸಮ್ಮೇದ್‌ ಶಿಖರ್ಜಿ ಕ್ಷೇತ್ರಕ್ಕೆ ತಲುಪಲಿದ್ದಾರೆ.

ಕಳಸ, ಸಂಸೆ, ಯಡೂರು ಕುದುರೆಮುಖ, ಹೊರನಾಡು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ 110 ಯಾತ್ರಿಕರು ಕೊಲ್ಕೊತಾ ರೈಲು ನಿಲ್ದಾಣದಲ್ಲಿ ಊಟ ಮಾಡಿ ಪ್ರಯಾಣ ಬೆಳಸಿದರು. ಇನ್ನು ಎರಡು ದಿನಗಳ ಕಾಲ ಯಾತ್ರಾ ಸ್ಥಳದಲ್ಲೇ ಯಾತ್ರಿಗಳು ತಂಗಲಿದ್ದಾರೆ.

ಇದನ್ನೂ ಓದಿ | Odisha Rail Accident : ಅವಘಡ ತಡೆಯಲು ಕವಚ್​ ಇದ್ದರೂ ಒಡಿಶಾದಲ್ಲಿ ರೈಲು ಅಪಘಾತ ನಡೆದಿದ್ದು ಹೇಗೆ?

ಅಪಘಾತಕ್ಕೆ ಕಾರಣ ಏನು ಎಂಬುದು ಬಯಲಾಗಬೇಕು: ಶೋಭಾ ಕರಂದ್ಲಾಜೆ

ಉಡುಪಿ: ಒಡಿಶಾ ರೈಲು ದುರಂತದಲ್ಲಿ 260ಕ್ಕಿಂತ ಹೆಚ್ಚು ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ರೈಲುಗಳ ತೆರವು ಆದ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ. ಘಟನೆಯ ಬಗ್ಗೆ ಸಮಗ್ರವಾದ ತನಿಖೆ ನಡೆಯಬೇಕು. ಅಪಘಾತಕ್ಕೆ ಕಾರಣ ಏನು ಎಂಬುದು ಬಯಲಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರೈಲು ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವೋ? ಬೇರೆ ಏನಾದರೂ ಕಾರಣ ಇದೆಯೋ ತನಿಖೆಯಾಗಬೇಕು. ಕೇಂದ್ರ ಸರ್ಕಾರ ಈಗಾಗಲೇ ತನಿಖೆಯನ್ನು ಶುರು ಮಾಡಿದೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದೇವೆ. ಮೃತಪಟ್ಟವರ ದುಃಖದಲ್ಲಿ ನಾವೆಲ್ಲ ಭಾಗಿಯಾಗುತ್ತೇವೆ. ಮೂರು ರೈಲುಗಳ ಡಿಕ್ಕಿಯಾಗಿದ್ದೆ ಬಹಳ ಆಶ್ಚರ್ಯ. ಅಪಘಾತದ ಮಾಹಿತಿ ಮೊದಲೇ ಯಾಕೆ ಸಿಕ್ಕಿಲ್ಲ? ಇಲಾಖೆ ವಿಫಲವಾಗಿದ್ದು ಎಲ್ಲಿ ಎಂಬುವುದರ ಬಗ್ಗೆ ತನಿಖೆಯಾಗಬೇಕು ಎಂದು ತಿಳಿಸಿದ್ದಾರೆ.

Exit mobile version