ಜೈಪುರ: ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಬೆನ್ನಲ್ಲೇ ಮತ್ತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ಸಂಘರ್ಷ (Gehlot VS Pilot) ಉಲ್ಬಣಗೊಂಡಿದೆ. ಇದಕ್ಕೆ ನಿದರ್ಶನ ಎಂಬಂತೆ ಈಗ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶವನ್ನೇ ಉಲ್ಲೇಖಿಸಿ ಪೈಲಟ್ ಅವರು ಗೆಹ್ಲೋಟ್ ಅವರಿಗೆ ತಿರುಗೇಟು ನೀಡಿದ್ದಾರೆ.
ರಾಜಸ್ಥಾನದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ ಎಂಬುದಾಗಿ ಸಚಿನ್ ಪೈಲಟ್ ಅವರು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಇದಕ್ಕಾಗಿ ಅವರು ಐದು ದಿನಗಳ ಜನ ಸಂಘರ್ಷ ಯಾತ್ರೆ ಆರಂಭಿಸಿದ್ದಾರೆ. ಇದರ ಮಧ್ಯೆಯೇ ಗೆಹ್ಲೋಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪೈಲಟ್, “ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಪರಿಣಾಮವಾಗಿ ಜನ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ರಾಜಸ್ಥಾನದಲ್ಲೂ ನಾನು ಹಾಗೂ ಅಶೋಕ್ ಗೆಹ್ಲೋಟ್ ಅವರು ಜತೆಗೂಡಿ ಭ್ರಷ್ಟಾಚಾರ ನಿರ್ಮೂಲನೆಗೆ ಹೋರಾಡಬೇಕು ಎಂಬುದಾಗಿ ಬಯಸುತ್ತಿದ್ದೇನೆ. ಆದರೆ, ಕಳೆದ ನಾಲ್ಕು ವರ್ಷದಿಂದ ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ” ಎಂದು ಪೈಲಟ್ ದೂರಿದರು.
“ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೋರಾಟ ನಡೆಸಿದರು. ಜನರ ಪರವಾಗಿ ಪ್ರಣಾಳಿಕೆ ರೂಪಿಸಿದರು. ಹಾಗಾಗಿ, ರಾಜ್ಯದ ಜನ ಕಾಂಗ್ರೆಸ್‌ಗೆ ಮತ ನೀಡಿದರು. ರಾಜಸ್ಥಾನದಲ್ಲೂ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು. ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ, ಆಡಳಿತದಲ್ಲಿ ಪಾರದರ್ಶಕತೆ ತರಬೇಕು. ಆದರೆ, ರಾಜ್ಯ ಸರ್ಕಾರ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ಕುಟುಕಿದರು.
ಇದನ್ನೂ ಓದಿ: ನಿಮ್ಮ ನಾಯಕಿ ವಸುಂಧರಾ ರಾಜೆನಾ, ಸೋನಿಯಾ ಗಾಂಧಿ ಅಲ್ವಾ?; ಅಶೋಕ್ ಗೆಹ್ಲೋಟ್‌ಗೆ ಸಚಿನ್ ಪೈಲಟ್ ವ್ಯಂಗ್ಯ
ನಾನೇ ಪಕ್ಷದ ಅಧ್ಯಕ್ಷನಾಗಿದ್ದೆ….
“2018ರ ವಿಧಾನಸಭೆ ಚುನಾವಣೆಯಲ್ಲಿ ನಾನು ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷನಾಗಿದ್ದೆ. ನಾನೇ ಪಕ್ಷದ ಪ್ರಮುಖ ನಾಯಕನಾಗಿದ್ದೆ. ಸರ್ಕಾರ ರಚನೆಯಾದ ಬಳಿಕ ಮುಖ್ಯಮಂತ್ರಿ ಜನರ ನಾಯಕರಾದರು. ಹಾಗಾಗಿ, ನಾನು ಮತ್ತು ಗೆಹ್ಲೋಟ್ ಅವರು ಒಟ್ಟಿಗೆ ಸಮಸ್ಯೆಗಳ ವಿರುದ್ಧ ಹೋರಾಡಬೇಕು. ಗೆಹ್ಲೋಟ್ ಅವರು ಏಕೆ ನನ್ನ ಪತ್ರಗಳಿಗೆ ಸ್ಪಂದಿಸುತ್ತಿಲ್ಲ ಎಂಬುದು ಗೊತ್ತಿಲ್ಲ” ಎಂದು ಅಸಮಾಧಾನ ಹೊರಹಾಕಿದರು. ರಾಜಸ್ಥಾನದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿ ಸಮಸ್ಯೆಗಳ ಕುರಿತು ಪೈಲಟ್ ಧ್ವನಿ ಎತ್ತುತ್ತಿದ್ದಾರೆ. ಇದಕ್ಕಾಗಿಯೇ ಅವರು, ಜನ ಸಂಘರ್ಷ ಯಾತ್ರೆ ಆರಂಭಿಸಿದ್ದಾರೆ.