Site icon Vistara News

ಹೊಡೆದು ಹಾಕಿ ಹೇಳಿಕೆಯನ್ನು ಸದನದಲ್ಲಿ ಸಮರ್ಥಿಸಿದ ಅಶ್ವತ್ಥ್‌ ನಾರಾಯಣ್‌; ಕಾಂಗ್ರೆಸ್‌ ಕೆಂಡಾಮಂಡಲ, ಭಾರಿ ಗದ್ದಲ

Vidhanasabhe

ವಿಧಾನಸಭೆ (ಬೆಂಗಳೂರು) : ʻʻಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್‌ನ್ನು ಹೊಡೆದು ಹಾಕಿದಂತೆ ಹೊಡೆದು ಹಾಕಬೇಕುʼʼ ಎಂಬ ಸಚಿವ ಅಶ್ವತ್ಥನಾರಾಯಣ ಅವರ ಹೇಳಿಕೆ ವಿಚಾರ ರಾಜ್ಯ ವಿಧಾನಸಭೆಯಲ್ಲಿ ಭಾರಿ ಗದ್ದಲ ಸೃಷ್ಟಿಸಿತು. ಸಚಿವರು ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿದರೂ ಸಮರ್ಥನೆ ಮಾಡಿಕೊಂಡಿದ್ದು ಕಾಂಗ್ರೆಸ್‌ ಶಾಸಕರನ್ನು ಕೆರಳಿಸಿತು. ಅವರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್‌ ಶಾಸಕರ ನಡೆಗೆ ಸ್ಪೀಕರ್‌ ಆಕ್ರೋಶ ವ್ಯಕ್ತಪಡಿಸಿ ಕಲಾಪವನ್ನೇ ಮುಂದೂಡಬೇಕಾಯಿತು.

ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ, ಸಚಿವ ಅಶ್ವತ್ಥ್‌ ನಾರಾಯಣ ಅವರ ಹೇಳಿಕೆಯನ್ನು ಸದನದಲ್ಲಿ ಪ್ರಸ್ತಾಪಿಸಲು ಶಾಸಕ ಯು.ಟಿ. ಖಾದರ್‌ ಮುಂದಾದರು. ಆಗ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆಕ್ಷೇಪಿಸಿದರು. ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸುವುದಾಗಿ ನೋಟಿಸ್‌ ಕೊಟ್ಟಿಲ್ಲ ಎಂದರು. ಆದರೆ, ಮಾತು ಮುಂದುವರಿಸಿದ ಯು.ಟಿ ಖಾದರ್‌, ಸಚಿವರ ಹೇಳಿಕೆ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಬೇಕು. ಸಮಾಜಕ್ಕೆ ಇದರ ಬಗ್ಗೆ ಸ್ಪಷ್ಟ ಸಂದೇಶ ನೀಡಬೇಕು ಎಂದು ಆಗ್ರಹಿಸಿದರು.

ʻʻಕಳೆದ ಒಂದು ತಿಂಗಳಿಂದ ದ್ವೇಷ ಭಾಷಣ ಮಾಡಲಾಗುತ್ತಿದೆ. ಉಳ್ಳಾಲ, ತುಮಕೂರಿನಲ್ಲಿ ಜನರನ್ನು ಪ್ರಚೋದಿಸುವ ರೀತಿಯಲ್ಲಿ ಹೇಳಿಕೆ ನೀಡಾಗಿದೆ. ಇದಕ್ಕೆ ಅಂತ್ಯ ಕಾಣಿಸಬೇಕುʼ ಎಂದು ಹೇಳಿದರು. ʻʻಸಚಿವ ಅಶ್ವತ್ಥ ನಾರಾಯಣ ಅವರು ಡಾಕ್ಟರ್ ಕಲಿತಿದ್ದಾರೆ. ದೇಶದಲ್ಲಿ ಕಲಿತವರಿಂದಲೇ ಸಮಸ್ಯೆ ಜಾಸ್ತಿ, ಕಲಿಯದವರಿಂದ ಅಲ್ಲ. ಇವರೆಲ್ಲ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆʼʼ ಎಂದರು. ʻʻದ್ವೇಷ ಭಾಷಣದ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲು ಮಾಡಬೇಕು ಎಂಬ ಕಾನೂನೇ ಇದೆ. ಅದನ್ನು ಜಾರಿ ಮಾಡಿ ಅಶ್ವತ್ಥ ನಾರಾಯಣ ವಿರುದ್ಧ ಕೇಸು ದಾಖಲಿಸಿʼ ಎಂದು ಆಗ್ರಹಿಸಿದರು.

ಹೇಳಿಕೆಯನ್ನು ಸಮರ್ಥಿಸಿದ ಅಶ್ವತ್ಥ ನಾರಾಯಣ್‌

ಈ ನಡುವೆ, ಸದನದಲ್ಲಿ ಮಾತನಾಡಲು ನಿಂತ ಅಶ್ವತ್ಥ್‌ ನಾರಾಯಣ್‌ ಅವರು ಮಂಡ್ಯದಲ್ಲಿ ನೀಡಿದ ಹೇಳಿಕೆಯನ್ನು ಸಮರ್ಥಿಸಿದರು. ʻʻಮಂಡ್ಯದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯರನ್ನು ಟಿಪ್ಪುಗೆ ಹೋಲಿಸಿ ನಾನು ಮಾತನಾಡಿದ್ದೇನೆ. ಟಿಪ್ಪು ಸುಲ್ತಾನ್ ಅವ್ರ ಬಗ್ಗೆ ಸಿದ್ದರಾಮಯ್ಯನವರಿಗೆ ಇರುವ ಪ್ರೀತಿ ಬಗ್ಗೆ ಕೂಡ ಮಾತನಾಡಿದ್ದೇನೆ. ಸಿದ್ದರಾಮಯ್ಯನವರ ಬಗ್ಗೆ ನಾನು ಅಗೌರವವಾಗಿ ಮಾತನಾಡಿಲ್ಲ. ರಾಜಕೀಯವಾಗಿ ನರಹಂತಕನನ್ನು ವೈಭವಿಕರಿಸಿದ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕು ಎಂದು ಹೇಳಿದ್ದೇನೆ. ವೈಯಕ್ತಿಕ ದ್ವೇಷವಿಲ್ಲ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಅಷ್ಟೇ. ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆʼʼ ಎಂದ ಸಚಿವ ಅಶ್ವಥ್ ನಾರಾಯಣ್‌ ಹೇಳಿದರು.

ಅಶ್ವತ್ಥ್‌ ನಾರಾಯಣ್‌ ಅವರ ಮಾತಿಗೆ ಅಡ್ಡಿಪಡಿಸಿದ ಕಾಂಗ್ರೆಸ್‌ ಶಾಸಕರು, ಅವರ ವಿರುದ್ಧ ಪೊಲೀಸ್‌ ದಾಖಲಿಸಬೇಕು ಎಂದು ಪಟ್ಟು ಹಿಡಿದರು. ಈ ಹಂತದಲ್ಲಿ ಭಾರಿ ಪ್ರತಿಭಟನೆಗೆ ಮುಂದಾದ ಶಾಸಕ ಈಶ್ವರ ಖಂಡ್ರೆ ಅವರಿಗೆ ಸ್ಪೀಕರ್‌ ಎಚ್ಚರಿಕೆ ನೀಡಿದರು.

ʻʻಸದನ ಅಂದ್ರೆ ಏನಂದುಕೊಂಡಿದ್ದೀರಿ? ಸದನದಿಂದ ಹೊರಗೆ ಹಾಕಬೇಕಾಗುತ್ತದೆ. ತಮಾಷೆ ಮಾಡ್ತಿದ್ದೀರಾ? ಕೂತ್ಕೊಳಿ, ಮಾತಾಡಬೇಡಿ? ನನ್ನ ಅಧಿಕಾರ ಪೂರ್ಣ ಪ್ರಮಾಣದಲ್ಲಿ ಚಲಾಯಿಸಲು ಅವಕಾಶ ಕೊಡಬೇಡಿ. ಸದನದಿಂದ ಹೊರಗೆ ಹಾಕಲಾ?ʼʼ ಎಂದು ಸಿಟ್ಟಾಗಿ ಮಾತನಾಡಿದರು ಸ್ಪೀಕರ್‌. ಸ್ಪೀಕರ್ ಮಾತಿಗೆ ಸಿಟ್ಟಿಗೆದ್ದ ಈಶ್ವರ ಖಂಡ್ರೆ ಸದನ ಬಾವಿಗಿಳಿದರು. ಈ ವೇಳೆ ಸ್ಪೀಕರ್‌ ಅವರು ಸದನವನ್ನು ಕೆಲ ಕಾಲ ಮುಂದೂಡಿದರು.

ಇದನ್ನೂ ಓದಿ : Karnataka Election : ಭ್ರಷ್ಟ, ಬಚ್ಚಲು ಬಾಯಿ ಮಾತಿಗೆ ನಾನು ಉತ್ತರ ಕೊಡೊಲ್ಲ: ಅಶ್ವತ್ಥನಾರಾಯಣ್‌ ಹೇಳಿಕೆಗೆ ಡಿಕೆಶಿ ಗರಂ

Exit mobile version