ಕೊಪ್ಪಳ: ರಾಜ್ಯದಲ್ಲಿ ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಿದ್ದರು. ಮುಸ್ಲಿಂ ಸಮುದಾಯದಲ್ಲಿ ವ್ಯಕ್ತಿ ಪೂಜೆ ಇಲ್ಲದಿದ್ದರೂ ಟಿಪ್ಪುವಿನ ಆರಾಧನೆ ಮಾಡಿದರು. ಜಾತಿ ವ್ಯವಸ್ಥೆಯನ್ನು ಪ್ರಚೋದಿಸಿದರು, ಧರ್ಮವನ್ನು ಒಡೆಯೋಕೆ ನೋಡಿದರು ಎಂದು ಕಿಡಿಕಾರಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje), ಟಿಪ್ಪುವನ್ನು ಹೊಡೆದಂತೆ ಸಿದ್ದರಾಮಯ್ಯ (Siddaramaiah) ಅವರನ್ನು ಹೊಡೆದುಹಾಕಬೇಕು ಎಂಬ ಸಚಿವ ಅಶ್ವತ್ಥನಾರಾಯಣ ಹೇಳಿಕೆಯನ್ನು ಖಂಡಿಸಿದ್ದಾರೆ. ಇಂಥ ಹೇಳಿಕೆ ನೂರಕ್ಕೆ ನೂರು ತಪ್ಪು, ಆ ರೀತಿ ಯಾರೂ ಹೇಳಬಾರದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಅವಕಾಶ ಇದೆ. ಅವರವರ ಪಕ್ಷಕ್ಕೆ ಸಿದ್ಧಾಂತ ಇರುತ್ತದೆ. ಸಿದ್ಧಾಂತದ ಆಧಾರದ ಮೇಲೆ ಪಕ್ಷವನ್ನು ಕಟ್ಟಬೇಕು. ಆದರೆ, ಸಿದ್ದರಾಮಯ್ಯ ವಿಷಯದಲ್ಲಿ ಸಚಿವ ಅಶ್ವತ್ಥನಾರಾಯಣ ಅವರು ಮಾತನಾಡಿರುವುದು ತಪ್ಪು. ನಮ್ಮ ಪಕ್ಷದಲ್ಲಿ ಇಂತಹ ಸಿದ್ಧಾಂತವಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಶಾಲಾ ಮಕ್ಕಳಲ್ಲಿ ಜಾತಿ ತಂದರು. ಅಲ್ಲದೆ, ವೀರಶೈವ ಧರ್ಮ ಒಡೆಯೋಕೆ ನೋಡಿದರು. ಇಡೀ ವ್ಯವಸ್ಥೆಯನ್ನು ಹಾಳು ಮಾಡುವ ಕೆಲಸವನ್ನು ಅವರು ಮಾಡಿದರು. ಮಂಗಳೂರು, ಬೆಂಗಳೂರು, ಮೈಸೂರಿನ ಜೈಲಿನಲ್ಲಿದ್ದ ಪಿಎಫ್ಐ ಕಾರ್ಯಕರ್ತರನ್ನು ಸಿದ್ದರಾಮಯ್ಯ ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ, ಈಗ ಪಿಎಫ್ಐ ಬ್ಯಾನ್ ಆಗಿದೆ ಎಂದು ಹೇಳಿದರು.
ಇದನ್ನೂ ಓದಿ: Anant Nag: ಹಿರಿಯ ನಟ ಅನಂತ್ ನಾಗ್ ಇಂದು ಬಿಜೆಪಿ ಸೇರ್ಪಡೆ
ಮುಸ್ಲಿಂ ಮತಗಳ ಓಲೈಕೆಗೆ ಕಾಂಗ್ರೆಸ್ ರಾಜಕಾರಣ ಮಾಡುತ್ತಾ ಬಂದಿದೆ. ನಾವು ಅಂತಹ ರಾಜಕಾರಣ ಮಾಡುವುದಿಲ್ಲ. ಶಾದಿ ಭಾಗ್ಯ ಯೋಜನೆಯನ್ನು ಒಂದು ವರ್ಗಕ್ಕೆ ಯಾಕೆ ಕೊಟ್ಟರು? ಓಲೈಕೆ, ಧರ್ಮದ ರಾಜಕಾರಣ ಮಾಡುತ್ತಾ ಇರುವುದು ಕಾಂಗ್ರೆಸ್‌ನವರಾಗಿದ್ದಾರೆ ಎಂದು ಕಿಡಿಕಾರಿದರು.