ಕೊಡಗು: ಇಲ್ಲಿನ ಕುಶಾಲನಗರ ತಾಲೂಕಿನ ಚಿಕ್ಕತ್ತೂರಿನಲ್ಲಿ ಎರಡು ಗುಂಪುಗಳ ನಡುವೆ (Assault Case) ಹೊಡೆದಾಟ ನಡೆದಿದ್ದು, ರಾಜಕೀಯ ದ್ವೇಷಕ್ಕೆ ಮಡಿಕೇರಿಯು ವೇದಿಕೆ ಆಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಜೆಡಿಎಸ್ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಚಿಕ್ಕತ್ತೂರಿನಲ್ಲಿ ಶುಕ್ರವಾರ ರಾತ್ರಿ ಒಂದೇ ಊರಿನ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಗ್ರಾಮದ ಅನುಕುಮಾರ್ ಮೇಲೆ ಅನಿಲ್ ಎಂಬಾತ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ತಲೆಗೆ ಗಂಭೀರ ಗಾಯಗಳಾಗಿದ್ದು, ಗಾಯಾಳು ಅನುಕುಮಾರ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಲಾಟೆಯಲ್ಲಿ ಅನಿಲ್‌ಗೂ ಪೆಟ್ಟಾಗಿದ್ದು ಈತನನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅನುಕುಮಾರ್ ಚಾಲಕ ವೃತ್ತಿಯನ್ನು ಮಾಡಿಕೊಂಡಿದ್ದು, ಶುಕ್ರವಾರ ರಾತ್ರಿ ಸುಮಾರು 8.30ರ ಹೊತ್ತಿಗೆ ವೈನ್ ಶಾಪ್‌ನಿಂದ ಬಿಯರ್ ಬಾಟೆಲ್ ಪರ್ಸಲ್ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಅಲ್ಲಿಗೆ ಬಂದ ಅನಿಲ್ ಮತ್ತು ದಿಲೀಪ್, ಜೆಡಿಎಸ್ ನಡೆಸುತ್ತಿರುವ ಪಂಚಯಾತ್ರೆ ವಾಹನವನ್ನು ನೀನು ಯಾಕೆ ಓಡಿಸುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದಾರೆ.
ಬಳಿಕ ಏಕಾಏಕಿ ಬಿಯರ್ ಬಾಟಲ್‌ನಿಂದ ಅನುಕುಮಾರ್ ತಲೆಗೆ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇತ್ತ ಹಲ್ಲೆಗೆ ಕುಮ್ಮಕ್ಕು ನೀಡಿದ ದಿನೇಶ್ ಎಂಬಾತನ ಮೇಲೆ ಕಾನೂನು ರೀತಿಯ ಕ್ರಮಕೈಗೊಳ್ಳುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ಲಾಸ್ಟಿಕ್ ಬುಟ್ಟಿಯಲ್ಲಿತ್ತು 10 ದಿನದ ಗಂಡು ಮಗು; ನಡುರಸ್ತೆಯಲ್ಲಿ ಬಿಟ್ಟು ಹೋದ ಮಹಾತಾಯಿ