Site icon Vistara News

Assault Case: ಜಗಳ ಬಿಡಿಸಲು ಹೋದ ಕಾನ್ಸ್‌ಟೇಬಲ್‌ ಮೇಲೆ ಮಚ್ಚು ಬೀಸಿದ ಪುಂಡರು

Constable

ಹಾಸನ: ಇಲ್ಲಿನ ಹೊಳೇನರಸೀಪುರ ತಾಲೂಕಿನ ಮಳಲಿ ದೇವಸ್ಥಾನದ ಬಳಿ ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ಮೇಲೆ ಯುವಕರ ಗುಂಪು ಮಾರಣಾಂತಿಕ ಹಲ್ಲೆ (Assault Case) ನಡೆಸಿದ್ದಾರೆ. ಹಲ್ಲೆಗೊಳಗಾದ ಶರತ್‌ ಕುಂದೂರಿನ ಎಸ್.ಹೊನ್ನೇನಹಳ್ಳಿ ಗ್ರಾಮದವರಾಗಿದ್ದು, ಯಸಳೂರು ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್‌ (Constable of Yasalur police station) ಆಗಿದ್ದಾರೆ.

ಮನಬಂದಂತೆ ಕಾನ್ಸ್‌ಟೇಬಲ್‌ಗೆ ಥಳಿಸಿದ ಯುವಕರು

ಕಾನ್ಸ್‌ಟೇಬಲ್‌ ಶರತ್‌ ಕಳೆದ ಜೂ.15 ರಂದು ರಜೆ ಪಡೆದು ಊರಿಗೆ ಬಂದಿದ್ದರು. ಸ್ನೇಹಿತ ದೀಪಕ್ ಎಂಬುವವರ ಮಗಳ ಹುಟ್ಟುಹಬ್ಬದ ಕಾರ್ಯಕ್ರಮ ಹಿನ್ನೆಲೆ ಮಳಲಿ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ದೇವಸ್ಥಾನದ ಬಳಿಯಿರುವ ಸೋನಾ ಶ್ರೇಯ ಕನ್ವೆನ್ಷನ್ ಹಾಲ್ ಮುಂಭಾಗ ಚೇತನ್ ಎಂಬಾತ ಗುಂಪು ಕಟ್ಟಿಕೊಂಡು ಯುವಕನೊಬ್ಬನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡುತ್ತಿದ್ದ. ಇದನ್ನು ಗಮನಿಸಿದ ಕಾನ್ಸ್‌ಟೇಬಲ್‌ ಶರತ್‌ ಜಗಳವನ್ನು ಬಿಡಿಸಲು ಹೋಗಿದ್ದಾರೆ. ಆಗ ಸಿಟ್ಟಿಗೆದ್ದ ಚೇತನ್‌ ಸ್ನೇಹಿತರಾದ ಮಿಥುನ್, ಲೋಹಿತ್, ನಟರಾಜು ಎಂಬುವವರು ಏಕಾಏಕಿ ಶರತ್‌ ಮೇಲೆ ಎರಗಿದ್ದಾರೆ.

ಹಲ್ಲೆಕೋರರು ಮಿಥುನ್, ನಟರಾಜ್, ಲೋಹಿತ್

ನಟರಾಜ ಎಂಬಾತ ಕಲ್ಲಿನಿಂದ ಶರತ್ ತಲೆಗೆ ಹೊಡೆದು, ಬಳಿಕ ಕಾರಿನಲ್ಲಿಟ್ಟಿದ್ದ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಶರತ್‌ ಯುವಕರಿಂದ ತಪ್ಪಿಸಿಕೊಂಡು ಕನ್ವೆನ್ಷನ್ ಹಾಲ್ ಒಳಗೆ ಓಡಿ ಹೋಗಿದ್ದಾರೆ. ಅಲ್ಲಿಗೂ ನುಗ್ಗಿದ ಈ ಪುಂಡರು ಲಾಂಗ್‌ನಿಂದ ಮನಬಂದಂತೆ ಶರತ್ ಮೇಲೆ ಹಲ್ಲೆ ನಡೆಸಿ ಪರಾರಿ ಆಗಿದ್ದಾರೆ.

ಹಲ್ಲೆಗೊಳಗಾದ ಶರತ್‌ ತೀವ್ರ ರಕ್ತಸ್ರಾವಗೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಕರಣ ಸಂಬಂಧ ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಪೇದೆ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಹಲ್ಲೆ ದೃಶ್ಯ

ಇದನ್ನೂ ಓದಿ: Attempt to murder: ಪತ್ನಿಯ ಕೊಲ್ಲಲು ಕಂಟ್ರಿ ಪಿಸ್ತೂಲ್‌ ಖರೀದಿಸಿದ ಭೂಪ; ಸಂಶಯ ಪಿಶಾಚಿ ಅರೆಸ್ಟ್‌

ಪ್ರಕರಣ ಸಂಬಂಧ ಹೊಳೆನರಸೀಪುರ ನಗರ ಪೊಲೀಸರು ಮಿಥುನ್ ಮತ್ತು ಲೋಹಿತ್‌ ಎಂಬಾತನನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಪೇದೆ ಶರತ್ ಮೇಲೆ ಮಚ್ಚು ಬೀಸಿ, ಪುಂಡಾಟ ಮೆರೆದಿದ್ದ ಪ್ರಮುಖ ಆರೋಪಿ ನಟರಾಜು ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version