ಬೆಳಗಾವಿ: ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ತಡರಾತ್ರಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ (Assault Case) ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. ತೀವ್ರ ಹಲ್ಲೆಗೊಳಗಾಗಿರುವ ಕಮಲವ್ವ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೃಹಸಚಿವ ಪರಮೇಶ್ವರ್ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಿದರು.
ಅಂದಹಾಗೇ ಹಲ್ಲೆಗೊಳಗಾದ ಕಮಲವ್ವರ ಮಗ ದುಂಡಪ್ಪ ಅಶೋಕ ಎಂಬಾತ ಪ್ರಿಯಾಂಕಾ ಬಸಪ್ಪ ನಾಯಕ್ ಎಂಬಾಕೆಯನ್ನು ಪ್ರೀತಿಸಿದ್ದ. ಆದರೆ ಇದಕ್ಕೆ ಪ್ರಿಯಾಂಕಾ ಕುಟುಂಬಸ್ಥರ ವಿರೋಧ ಇತ್ತು. ಹೀಗಾಗಿ ಪ್ರಿಯಾಂಕಾಗೆ ಇಂದು ಸೋಮವಾರ (ಡಿ.11) ಯಾದಿ ಮೇ ಶಾದಿ ಮಾಡಲು ನಿರ್ಧರಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ನಿನ್ನೆ ಮಧ್ಯರಾತ್ರಿಯೇ (ಡಿ.10) ದುಂಡಪ್ಪ ಪ್ರಿಯಾಂಕಾಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದ.
ಇದರಿಂದ ಸಿಟ್ಟಿಗೆದ್ದ ಪ್ರಿಯಾಂಕಾ ಕುಟುಂಬಸ್ಥರು ಯುವಕನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಮಾತ್ರವಲ್ಲದೇ ಯುವಕನ ತಾಯಿ ಕಮಲವ್ವಳನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಯುವತಿಯ ತಾಯಿ, ತಂದೆ ಬಸಪ್ಪಾ, ದೊಡ್ಡಪ್ಪ ರಾಜು ನಾಯಕ, ಸಂಬಂಧಿಗಳಾದ ಪಾರ್ವತಿ, ಗಂಗವ್ವ, ಸಂಗೀತ, ಯಲ್ಲವ್ವಾ, ಸಹೋದರ ಕೆಂಪಣ್ಣ ಎಂಬುವವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Assault Case: ಪ್ರೀತಿಸಿದವಳ ಜತೆಗೆ ಓಡಿಹೋದ ಯುವಕ; ತಾಯಿಯನ್ನೇ ಬೆತ್ತಲೆಗೊಳಿಸಿದ ಕ್ರೂರಿಗಳು!
ನಗ್ನ ಮಾಡಿಬಿಟ್ಟರು ಸರ್! ಗೃಹಸಚಿವರೊಂದಿಗೆ ದುಃಖ ತೊಡಿಕೊಂಡ ಸಂತ್ರಸ್ತೆ
ಇನ್ನು ಜಿಲ್ಲಾಸ್ಪತ್ರೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಭೇಟಿ ನೀಡಿ, ಹಲ್ಲೆಗೊಳಗಾದ ಸಂತ್ರಸ್ತೆಯಿಂದ ಘಟನೆಯ ಕುರಿತು ಮಾಹಿತಿ ಪಡೆದರು. ಗೃಹ ಸಚಿವರಿಗೆ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು. ಬಳಿಕ ಮಾತಾನಾಡಿದ ಡಾ. ಜಿ. ಪರಮೇಶ್ವರ್, ದುಂಡಪ್ಪ ಅಶೋಕ (24) ಎಂಬಾತ ತಾನು ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ಮನೆ ಬಿಟ್ಟು ಹೋಗಿದ್ದಾನೆ. ಇದರಿಂದ ಆಕ್ರೋಶಗೊಂಡ ಹುಡುಗಿ ಮನೆಯವರು ಯುವಕನ ತಾಯಿ ಕಮಲವ್ವ ಗಡ್ಕರಿ ಮೇಲೆ ಹಲ್ಲೆ ಮಾಡಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ.
ಪೊಲೀಸರು ಈಗಾಗಲೇ 7 ಮಂದಿಯನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳು ಪರಾರಿ ಆಗಿದ್ದಾರೆ. ಇನ್ನು ಮನೆಬಿಟ್ಟು ಹೋದ ಹುಡುಗ-ಹುಡುಗಿಗಾಗಿ ಪೊಲೀಸರು ಟ್ರಾಪ್ ಮಾಡುತ್ತಿದ್ದಾರೆ. ಇಂತಹ ಘಟನೆಗಳು ಆಗಬಾರದು, ಯುವತಿ ಕುಟುಂಬಸ್ಥರು ದೂರು ನೀಡಿದರೆ ಪೊಲೀಸರು ಕ್ರಮ ತೆಗೆದುಕೊಳ್ಳುತಿದ್ದರು. ಅಥವಾ ಊರಲ್ಲಿ ಹಿರಿಯರೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು. ಈ ರೀತಿ ಅಮಾನವೀಯ ವರ್ತನೆ ಸರಿಯಲ್ಲ ಎಂದರು.
ಬೆಳಗಾವಿಯಲ್ಲಿ ಎರಡನೇ ಬಾರಿ ಈ ರೀತಿಯ ಕೃತ್ಯ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು. ಆಸ್ಪತ್ರೆಯಿಂದ ನೇರವಾಗಿ ಕಮಲವ್ವರ ಮನೆಗೆ ಭೇಟಿ ನೀಡಿದರು. ಕಮಲಮ್ಮ ಅತ್ತೆ ಈರಮ್ಮಳಿಂದ ಮಾಹಿತಿ ಪಡೆದರು. ಅಕ್ಕ ಪಕ್ಕದ ಮನೆಯವರನ್ನು ಮಾತನಾಡಿಸಿ, ಮಹಿಳೆಯರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು.
ಪೊಲೀಸರ ಇದ್ದಾಗಲೇ ಹೊಡೆಯೊಕ್ಕೆ ಬಂದ್ರು!
ವಂಟಮೂರಿ ಗ್ರಾಮದಲ್ಲಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತಾರ ನ್ಯೂಸ್‌ಗೆ ಘಟನೆಯ ಅತ್ತೆ ಈರವ್ವ ಮಾಹಿತಿ ನೀಡಿದ್ದಾರೆ. ರಾತ್ರಿ ಕಲ್ಲು ದೊಣ್ಣೆ ಹಿಡಿದು ಬಂದು ಮಲಗಿದ್ದ ನಮ್ಮ ಮೇಲೆ ದಾಳಿ ಮಾಡಿದರು. ಕಮಲವ್ವಳನ್ನ ಹಲ್ಲೆ ಮಾಡಿ ಸೀರೆ ಕಳಚಿ ಎಳೆದುಕೊಂಡು ಹೋದರು. ಗ್ರಾಮದ ಮಧ್ಯ ಭಾಗಕ್ಕೆ ಕರೆದುಕೊಂಡು ಹೋಗಿ ಕಟ್ಟಿಹಾಕಿ ಹಲ್ಲೆ ಮಾಡಿದರು. ಬಳಿಕ ಪೊಲೀಸರಿಬ್ಬರು ಬಂದು ಮನೆಯಲ್ಲಿ ಸೀರೆ ತೆಗೆದುಕೊಂಡು ಹೋಗಿ ಅವಳಿಗೆ ಕೊಟ್ಟು ಮಾನ ಮುಚ್ಚಿದರು. ಈ ಪೊಲೀಸರು ಇದ್ದರೂ ಮತ್ತೆ ಕಮಲವ್ವಳ ಮೇಲೆ ಹಲ್ಲೆಗೆ ಯತ್ನಿಸಿದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು ಎಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ