ಬೆಂಗಳೂರು: ಕುಡಿದು ಬಂದು ಮಗಳು ಹೊಡೆದು ಬಡಿದು ಮಾಡುತ್ತಾಳೆ (Assault Case) ಎಂದು ಪೋಷಕರು ದೂರಿದ್ದಾರೆ. ಇತ್ತ ಹೆತ್ತವರೇ ನನ್ನ ಕೊಲೆಗೆ ಯತ್ನಿಸಿದ್ದಾರೆ ಎಂದು ಮಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಗೀತಾರಾಣಿ (67) ಮತ್ತು ರಾಮಚಂದ್ರಪ್ಪ (73) ಎಂಬ ದಂಪತಿ ತಮ್ಮ ಹಿರಿಯ ಮಗಳಾದ ಧಾತ್ರಿ (42) ಎಂಬಾಕೆ ವಿರುದ್ಧ ದೂರು ನೀಡಿದ್ದಾರೆ. ಮಗಳು ಧಾತ್ರಿಗೆ ಪತಿ ಇಲ್ಲದ ಕಾರಣಕ್ಕೆ ತವರು ಮನೆಯಲ್ಲಿಯೇ ಉಳಿದುಕೊಂಡಿದ್ದಾಳೆ. ಹೀಗಿರುವಾಗ ಕಳೆದ ಜ.3ರಂದು ಕುಡಿದು ಬಂದು ಗಲಾಟೆ ಮಾಡಿ, ದೊಣ್ಣೆಯಲ್ಲಿ ಹೊಡೆದು ಹಲ್ಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.
ಈ ಹಿಂದೆಯೂ ಕುಡಿದು ಗಲಾಟೆ ಮಾಡಿದ್ದರಿಂದ ಪೊಲೀಸ್ ಕೇಸ್ ಆಗಿತ್ತು. ಬಳಿಕ ತಣ್ಣಗೆ ಆಗಿದ್ದವಳು ಇದೀಗ ಮತ್ತೆ ಕುಡಿದು ಗಲಾಟೆ ಮಾಡುವುದನ್ನು ಶುರು ಮಾಡಿದ್ದಾಳೆ ಎಂದು ಗೀತಾರಾಣಿ ಆರೋಪಿಸಿದ್ದಾರೆ. ತಾಯಿ ಗೀತಾರಾಣಿ ಸರ್ಕಾರಿ ನೌಕರರಾಗಿ ನಿವೃತ್ತಿ ಹೊಂದಿದ್ದಾರೆ. ಈ ನಡುವೆ ಮನೆ ವಿಲ್ ತನ್ನ ಹೆಸರಿಗೆ ಬರೆಯದಿದ್ದರೆ ಕೊಲೆ ಮಾಡುವುದಾಗಿ ಮಗಳು ಬೆದರಿಕೆ ಹಾಕುತ್ತಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Drowned in Lake : ಕುರಿ ಮೈತೊಳೆಯುವಾಗ ಕಾಲು ಜಾರಿ ತಂದೆ- ಮಗ ನೀರುಪಾಲು
ಹೆತ್ತವರಿಂದ ಕೊಲೆ ಯತ್ನ
ತಾಯಿ-ಮಗಳು ಇಬ್ಬರು ಪರಸ್ಪರ ಪೊಲೀಸರು ದೂರು ನೀಡಿದ್ದಾರೆ. ಮನೆಗೆ ಕರೆದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಗಳು ಧಾತ್ರಿಯೂ ಆರೋಪಿಸಿದ್ದಾರೆ. ಆಸ್ತಿಗೆ ಸಂಬಂಧಿಸಿದಂತೆ ನನಗೂ ಮತ್ತು ನನ್ನ ತಂದೆ-ತಾಯಿ, ತಂಗಿ ನಡುವೆ ಕೋರ್ಟ್‌ನಲ್ಲಿ ಪರಸ್ಪರ ಓ.ಎಸ್ ಕೇಸ್‌ಗಳಿವೆ. ಹೀಗಿರುವಾಗ ಕಳೆದ ಜನವರಿ 3ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಮ್ಮ ತಾಯಿ ಗೀತಾರಾಣಿ ಮನೆಗೆ ಕರೆದರು.
ಏನೆಂದು ವಿಚಾರಿಸಲು ಮನೆಯೊಳಗೆ ಹೋದ ನನಗೆ ತಂದೆ ರಾಮಚಂದ್ರಪ್ಪ, ತಂಗಿ ದಿಗಂತ ಎದುರಾದರು. ಮನೆಯೊಳಗೆ ಕಾಲಿಟ್ಟ ಕೂಡಲೇ ನನ್ನನ್ನು ಒಳಗೆ ನೂಕಿ ಬೀಳಿಸಿದರು. ನನ್ನ ತಂಗಿ ಹಿಂದಿನಿಂದ ಬಂದು ಜೋರಾಗಿ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾಳೆ. ನಮ್ಮ ಅಮ್ಮ ಚಾಕುವಿನಿಂದ ಇರಿಯಲು ಬಂದಾಗ ತಪ್ಪಿಸಿಕೊಳ್ಳುವಾಗ ನನ್ನ ಬಲಗೈ ಬೆರಳುಗಳಿಗೆ ಗಾಯವಾಗಿದೆ. ನನ್ನ ತಲೆಗೆ ಪೆಟ್ಟಾಗಿ ನೆಲಕ್ಕೆ ಬಿದ್ದಾಗ, ತಂದೆ ರಾಮಚಂದ್ರಪ್ಪ ಕಾಲಿನಿಂದ ಒದ್ದರು ಎಂದು ಧಾತ್ರಿ ಆರೋಪಿಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ನಿನಗೊಂದು ಗತಿ ಕಾಣಿಸುತ್ತೀವಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮನೆಯವರ ವಿರುದ್ಧ ದೂರು ನೀಡಿದ್ದಾಳೆ.
ಸದ್ಯ ಗಿರಿನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ಈ ಗಲಾಟೆ ಸಂಸಾರದ ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ