ಬೆಂಗಳೂರು: ವಯಸ್ಸಿನ್ನೂ ಚಿಕ್ಕದು. ಒಂದು ಕ್ಷುಲ್ಲಕ ಕಾರಣಕ್ಕೆ ಕಿರಿಕ್ (Assault Case) ಮಾಡಿಕೊಂಡ ಯುವಕರು ಈಗ ಜೈಲು ಪಾಲಾಗಿದ್ದಾರೆ. ಅರವಿಂದ್ ಅಲಿಯಾಸ್ ಅಗ್ಗು, ಗಣೇಶ್, ಶ್ರೀನಿವಾಸ್ ಹಾಗೂ ರೌಡಿಶೀಟರ್ ರಾಜ ಹಾಗು ಅಪ್ರಾಪ್ತ ಸೇರಿ ಐವರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಅಪ್ಪು, ಅಭಿ, ಸೈಯದ್ ಷರೀಫ್, ರಾಜಾ, ಗಾಂಧಿ, ವಿಜಯ್ ಹಾಗೂ ಮನೋಜ, ಸೀನಾ, ಕೌಶಿಕ್, ಸತೀಶ ಈ 10 ಜನರ ಗ್ಯಾಂಗ್ ಒಂದಾದರೆ, ಅಜಿತ್ ಎಂಬಾತನದ್ದು ಇನ್ನೊಂದು ಗ್ಯಾಂಗ್. ಈ ಎರಡೂ ಗ್ಯಾಂಗ್ ನಡುವೆ ಮೊದಲಿನಿಂದಲೂ ಜಿದ್ದಾಜಿದ್ದಿ ಇದೆ. ಏರಿಯಾದಲ್ಲಿ ತಾ ಮುಂದು ನಾ ಮುಂದು ಎಂದು ತಂಡಗಳನ್ನು ಕಟ್ಟಿಕೊಂಡು ಸಣ್ಣ ಪುಟ್ಟ ಕಿರಿಕ್ಗಳನ್ನು ಮಾಡಿಕೊಳ್ಳುತ್ತಲೇ ಇತ್ತು.
ಕಳೆದ 28ರ ರಾತ್ರಿ 11:30 ಸಿದ್ದಾಪುರದ ಗಲ್ಲಿಯಲ್ಲಿ ಮುತ್ತು ಮಾರಿಯಮ್ಮ ಜಾತ್ರೆ ನಡೆದಿತ್ತು. ಈ ಅದ್ಧೂರಿ ಜಾತ್ರೆಯಲ್ಲಿ ಅದೇ ಏರಿಯಾದ ಅಪ್ಪು ಮತ್ತು ಅಜಿತ್ ಗ್ಯಾಂಗ್ ಕೂಡ ಭಾಗವಹಿಸಿತ್ತು. ರಾತ್ರಿಯಾದರೆ ಗಾಂಜಾ, ಎಣ್ಣೆ ನಶೆಯಲ್ಲಿರುವ ಹುಡುಗರು ಜಾತ್ರೆಯಲ್ಲಿ ತಮಟೆ ಸದ್ದಿಗೆ ಕುಣಿದು ಕುಪ್ಪಿಳಿಸುತ್ತಿದ್ದರು.
ಇದನ್ನೂ ಓದಿ: Road Accident : ಬಸ್- ಲಾರಿ ಡಿಕ್ಕಿ; ಚಾಲಕನ ನರಳಾಟ, ಪ್ರಯಾಣಿಕರ ಒದ್ದಾಟ
ಜಾತ್ರೆಯಲ್ಲಿ ಅಜಿತ್ ಗ್ಯಾಂಗ್ ಹುಡುಗರು ದೇವರನ್ನು ನೋಡಲು ನಿಂತ ಹೆಣ್ಣು ಮಕ್ಕಳಿಗೆ ಅಸಭ್ಯವಾಗಿ ಸನ್ನೆಗಳನ್ನು ಮಾಡಿ ಕುಣಿಯುತ್ತಿದ್ದರು ಎನ್ನಲಾಗಿದೆ. ಮಾತ್ರವಲ್ಲದೆ ಹುಡುಗಿಯರನ್ನು ಚುಡಾಯಿಸುತ್ತಿದ್ದರು. ಹೀಗಾಗಿ ಇದನ್ನು ಕಂಡ ಅಪ್ಪು ಗ್ಯಾಂಗ್ನವರು ಅಜಿತ್ ಗ್ಯಾಂಗ್ನ್ನು ಪ್ರಶ್ನಿಸಿದಾಗ ಸಣ್ಣ ಜಗಳವಾಗಿತ್ತು.
ಇದಕ್ಕೂ ಮೊದಲು ಡ್ಯಾನ್ಸ್ ಮಾಡುವ ವಿಚಾರಕ್ಕೆ ಗಣೇಶ್ ಹಾಗು ಅಜಿತ್ ನಡುವೆ ಕಿರಿಕ್ ನಡೆದಿತ್ತು. ಇವೆಲ್ಲಾ ಸಿಟ್ಟಿನಿಂದ ಎರಡೂ ಗ್ಯಾಂಗ್ ನಡುವೆ ಜಗಳ ನಡೆದಾಗ ಸ್ಥಳೀಯರು ಬಿಡಿಸಿ ಕಳಿಸಿದ್ದರು. ಇಷ್ಟಕ್ಕೆ ಸುಮ್ಮನೆ ಇರದೆ ಅಪ್ಪು ಗ್ಯಾಂಗ್ ಅಜಿತ್ ಮನೆಗೆ ಹೋಗಿ ವಾರ್ನಿಂಗ್ ಮಾಡಿ ಹೊರಟು ಹೋಗಿದ್ದರು. ಇದರಿಂದ ಸಿಟ್ಟಿಗೆದ್ದ ಅಜಿತ್ ಟೀಂ ಅಪ್ಪು ಗ್ಯಾಂಗ್ನ ಸದಸ್ಯರು ಸಿದ್ದಾಪುರದಲ್ಲಿರುವ ಬಾರ್ ಬಳಿ ಬರುತ್ತಿದ್ದಂತೆ ಲಾಂಗು-ಮಚ್ಚು ಬೀಸಿ ಹಲ್ಲೆ ನಡೆಸಿದ್ದರು.
ಸದ್ಯ 10 ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಅಭಿ, ಗಾಂಧಿ ಅಲಿಯಾಸ್ ಕಾರ್ತಿಕ್, ಮನೋಜ್, ಸೈಯದ್, ವಿಜಯ್ ಸೇರಿ ಹಲವರು ಪರಾರಿಯಾಗಿದ್ದು, ಹುಡುಕಾಟವನ್ನು ನಡೆಸುತ್ತಿದ್ದಾರೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ