ಬೆಂಗಳೂರು: ಏರಿಯಾದಲ್ಲಿ ಹೆಸರು ಮಾಡಬೇಕು. ಜನರು ನಮ್ಮನ್ನು ನೋಡಿದ್ದರೆ ಭಯಪಡಬೇಕೆಂದು ಮುಖದಲ್ಲಿ ಮೀಸೆ ಮೂಡದ ಪುಂಡರು, ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು (Assault case) ಈಗ ಜೈಲು ಸೇರಿದ್ದಾರೆ. ಅವರಲ್ಲಿ ಒಬ್ಬಾತ ನರಸಿಂಹ ಅಲಿಯಾಸ್ ಕೂಸೆ ರೌಡಿ ಶೀಟರ್ ಕೂಡಾ ಆಗಿದ್ದಾನೆ.
ಗಿರಿನಗರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ನರಸಿಂಹ ಏರಿಯಾದಲ್ಲಿ ಹವಾ ಇರಬೇಕು. ಪೊಲೀಸರಿಗೆ ತನ್ನ ಬಗ್ಗೆ ಮಾಹಿತಿ ನೀಡುವವರಿಗೆ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದ್ದ. ಹೀಗಾಗಿ ಗ್ಯಾಂಗ್ವೊಂದನ್ನು ಕಟ್ಟಿಕೊಂಡ ನರಸಿಂಹ ತನ್ನ ಸಹಚರರಾದ ಯೋಗೇಶ್, ಕಾಂತರಾಜು ಇನ್ನಿತರ ಜತೆ ಸೇರಿ ವೆಂಕಟೇಶ್ ಎಂಬಾತನ ಕಾರನ್ನು ಜಖಂಗೊಳಿಸಿದ್ದ.
ಕಳೆದ ಏಪ್ರಿಲ್ 25ರ ರಾತ್ರಿ ಗಿರಿನಗರದಲ್ಲಿ ವೆಂಕಟೇಶ್ ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿದ್ದರು. ಇವರನ್ನು ಅಡ್ಡಗಟ್ಟಿದ ಈ ಪುಡಿರೌಡಿಗಳು ನೇರವಾಗಿ ಚಾಕು ಇರಿದಿದ್ದಾನೆ. ಬಳಿಕ ಅದೇ ದಿನ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ರಸ್ತೆಯಲ್ಲಿ ಬರುತ್ತಿದ್ದ ಕಾರನ್ನು ಅಡ್ಡಗಟ್ಟಿದ ನರಸಿಂಹ, ಕಾಂತರಾಜು ಮತ್ತು ಯೋಗೇಶ್ ಟೀಂ ಚಾಲಕ ನಿತೀಶ್ ಎಂಬಾತನಿಗೆ ಮನ ಬಂದಂತೆ ಥಳಿಸಿದ್ದಾರೆ.
ಗಾಂಜಾ ನಶೆಯಲ್ಲಿದ್ದ ಆರೋಪಿಗಳು ರಾಡ್‌ನಿಂದ ಕಾರ್ ಗ್ಲಾಸ್ ಅನ್ನು ಪುಡಿ ಪುಡಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಮತ್ತು ಐಪಿಸಿ ಸೆಕ್ಷನ್ 324 ಅಡಿಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಆರೋಪಿಗಳಾದ ನರಸಿಂಹ ಮತ್ತು ಕಾಂತರಾಜು ಇಬ್ಬರನ್ನು ಬಂಧಿಸಲಾಗಿದ್ದು, ಯೋಗೇಶ್ ಅಲಿಯಾಸ್ ಯೋಗಿ ಸೇರಿದಂತೆ ಮತ್ತೆ ಮೂವರಿಗಾಗಿ ಬಲೆ ಬೀಸಿದ್ದಾರೆ. ರೌಡಿಶೀಟರ್ ನರಸಿಂಹ@ಕೂಸೆ ಎಂಬಾತನ ವಿರುದ್ಧ ಗಿರಿನಗರ ಪೊಲೀಸರು ಚುನಾವಣೆ ನೀತಿ ಸಂಹಿತೆಯಡಿಯಲ್ಲಿ ಕೂಡ ಕ್ರಮ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: Davanagere News: ಮಹಿಳೆಯರು, ಮಕ್ಕಳು ಎನ್ನದೆ ಮನಬಂದಂತೆ ಲಾಠಿ ಪ್ರಯೋಗ ಮಾಡಿದ ಜಗಳೂರು ಪೊಲೀಸರು?
ನಡು ರಸ್ತೆಯಲ್ಲಿ ಆಟೋ ಚಾಲಕ, ಬೈಕ್ ಸವಾರನ ಮಾರಾಮಾರಿ
ನಡು ರಸ್ತೆಯಲ್ಲಿ ಆಟೋ ಚಾಲಕ ಹಾಗೂ ಬೈಕ್ ಸವಾರನೊಬ್ಬ ಕಿತ್ತಾಡಿಕೊಂಡಿದ್ದಾರೆ. ದಾರಿ ಬಿಡುವ ವಿಚಾರಕ್ಕೆ ಶುರುವಾದ ಜಗಳವು, ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಬೆಂಗಳೂರಿನ ಬಿಟಿಎಂ ಲೇಔಟ್ 2ನೇ ಹಂತದ ಸಿಗ್ನಲ್ ಬಳಿ ಇಬ್ಬರು ಹೆಲ್ಮೆಟ್‌ನಲ್ಲಿ ಬಡಿದಾಡಿಕೊಂಡಿದ್ದಾರೆ. ಉಳಿದ ವಾಹನ ಸವಾರರು ಇವರ ಜಗಳ ಬಿಡಿಸುವಷ್ಟರಲ್ಲಿ ಹೈರಾಣಾಗಿದ್ದಾರೆ.